Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -45


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಋತುಃ ಸುದರ್ಶನಃ ಕಾಲಃ ಪರಮೇಷ್ಠೀ ಪರಿಗ್ರಹಃ |
ಉಗ್ರಃ ಸಂವತ್ಸರೋ ದಕ್ಷೋ ವಿಶ್ರಾಮೋ ವಿಶ್ವದಕ್ಷಿಣಃ || 45 ||

೪೧೮) ಋತುಃ

ಕಾಲ ಚಕ್ರಕ್ಕೆ ಋತು ಎನ್ನುತ್ತೇವೆ. ನಾವು ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ ಹಾಗೂ ಶಿಶಿರ ಎನ್ನುವ ಆರು ಋತುಗಳನ್ನು ಕಾಣುತ್ತೇವೆ. ವಸ್ತುತಃ ಋತುಗಳು ಐದೇ. ಹಿಮವನ್ನು ಕೊಡುವ ಹೇಮಂತ ಋತು ಹಾಗು ಚಳಿಯನ್ನು ಕೊಡುವ ಶಿಶಿರ ಋತು ಎರಡೂ ಒಂದೇ. ಋತುಗಳು ಕಾಲ ಚಕ್ರದ ಅರೆಗಳು; ಈ ಋತು ಚಕ್ರವನ್ನು ತಿರುಗಿಸಿ, ಕಾಲ ಕಾಲಕ್ಕೆ ಪರಿವರ್ತನೆಯನ್ನು ಮಾಡತಕ್ಕ ಭಗವಂತ ಋತುಃ. ಋತುವಾಗಿ ಬೇರೆ ಬೇರೆ ಕಾಲ ಧರ್ಮಗಳಿಂದ ಮನುಷ್ಯನಿಗೆ ಉಷ್ಣ, ಮಳೆ, ಚಳಿ, ಬೆಳೆ, ಚಿಗುರು, ಹೂ, ಹಣ್ಣನ್ನು ಕೊಟ್ಟು ಪ್ರಪಂಚಕ್ಕೆ ವೈವಿಧ್ಯವನ್ನು ಕೊಡುವ ಭಗವಂತ ಋತುಃ.
ಹೆಣ್ಣಿನಲ್ಲಿ ಋತುವಾಗಿ ಕೂತು ಹೊಸ ಜೀವ ಚಿಗುರಲು ಕಾರಣಕರ್ತನಾಗುವ ಭಗವಂತ ಋತುಃ; ಸಮಸ್ತ ವೇದಗಳಿಂದ ಜ್ಞಾನಿಗಳು ಅರಿಯುವ 'ಬದಲಾಗದ ಸತ್ಯ' ಭಗವಂತ ಋತುಃ.

೪೧೯) ಸುದರ್ಶನಃ

ಸುದರ್ಶನವನ್ನು ಕೈಯಲ್ಲಿ ಆಯುಧವಾಗಿ ತೊಟ್ಟ; ಸಮೀಚೀನವಾದ ಸುಂದರ ದರ್ಶನವನ್ನು ಕೊಡುವ; ಜ್ಞಾನಿಗಳ ರೂಪದಲ್ಲಿ ಸಮಸ್ತ ವೇದಗಳ ದರ್ಶನವನ್ನು ಕೊಡುವ; ಚೆಲುನೋಟದ ಭಗವಂತ "ಸು-ದರ್ಶನಃ"

೪೨೦) ಕಾಲಃ

ಕಾಲ ಎನ್ನುವುದು 'ಕಲ' ಎನ್ನುವ ಧಾತುವಿನಿಂದ ಬಂದ ಪದ. ಈ ಧಾತು ಅನೇಕ ಅರ್ಥವನ್ನು ಕೊಡುತ್ತದೆ. ಎಲ್ಲಾ ಗುಣಗಳನ್ನು, ಎಲ್ಲಾ ಸಾಮರ್ಥ್ಯವನ್ನು ತನ್ನೊಳಗೆ 'ಕಲೆ' ಹಾಕಿದವನು ಕಾಲಃ. ಭಗವಂತ ಸಮಸ್ತ ಸದ್ಗುಣಗಳಿಂದ ಪರಿಪೂರ್ಣವಾದ ತತ್ವ. ಈ ತತ್ವವನ್ನು ನಾವು ಅರಿಯದೆ ಅಹಂಕಾರಿಗಳಾದಾಗ, ಅದೇ ತತ್ವ 'ಕಾಲ ಪುರುಷನಾಗಿ' ನಮ್ಮ ಸಂಹಾರಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ 'ಬದುಕಿನಲ್ಲಿ' ನಮ್ಮ ಉದ್ಧಾರವಿರುತ್ತದೆ, ಕೆಲವೊಮ್ಮೆ ನಮ್ಮ 'ಸಾವಿನಲ್ಲಿ' ನಮ್ಮ ಉದ್ಧಾರವಿರುತ್ತದೆ, ಕೆಲವೊಮ್ಮೆ ನಮ್ಮ 'ಮಾನದಲ್ಲಿ', ಇನ್ನು ಕೆಲವೊಮ್ಮೆ ನಮ್ಮ 'ಅವಮಾನದಲ್ಲಿ'; ಕೆಲವೊಮ್ಮೆ ನಮ್ಮ 'ಜ್ಞಾನದಲ್ಲಿ' , ಇನ್ನು ಕೆಲವೊಮ್ಮೆ ನಮ್ಮ 'ಅಜ್ಞಾನದಲ್ಲಿ' ನಮ್ಮ ಉದ್ಧಾರವಿರುತ್ತದೆ. ಆದರೆ ನಮ್ಮ 'ಅಹಂಕಾರದಲ್ಲಿ' ಎಂದೆಂದೂ ಉದ್ಧಾರವಿಲ್ಲ. ಜಗತ್ತಿನಲ್ಲಿ ಅಹಂಕಾರಭರಿತ ಅಜ್ಞಾನ ತುಂಬಿದಾಗ ಭಗವಂತ 'ಕಾಲ ಪುರುಷನಾಗಿ' ಬೆಳೆದು ನಿಲ್ಲುತ್ತಾನೆ.

ಇದನ್ನೇ ಗೀತೆಯಲ್ಲಿ ಕೃಷ್ಣ ಹೀಗೆ ಹೇಳಿದ್ದಾನೆ:

ಕಾಲೋsಸ್ಮಿ ಲೋಕಕ್ಷಯಕೃತ್ ಪ್ರವೃದ್ಧೋ ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ ||

ಅಂದರೆ "ಲೋಕಗಳನ್ನು ಕಬಳಿಸಲು ಬೆಳೆದು ನಿಂತಿರುವ ಕಾಲಪುರುಷ ನಾನು" ಎಂದರ್ಥ.
ಕಾಲ ಎನ್ನುವುದಕ್ಕೆ ಇನ್ನೊಂದು ಅರ್ಥ 'ಸಮಯ'. ಪ್ರತಿಯೊಂದು ಕ್ರಿಯೆಯ ಹಿಂದೆ 'ಕಾಲ' ಸರ್ವ ಕಾರಣವಾಗಿರುತ್ತದೆ. ಕಾಲ ನಿಯಾಮಕ ಭಗವಂತ ಕಾಲಃ.

ಜ್ಞಾನಕಾರಕವಾದ ಅವತಾರಗಳಿಂದ(ವ್ಯಾಸ, ಕಪಿಲ, ದತ್ತಾತ್ರಯ, ನರ-ನಾರಾಯಣ, ಇತ್ಯಾದಿ) ಅಜ್ಞಾನಕ್ಕೆ 'ಕಾಲವಾದ' ಭಗವಂತ, ಬಲಕಾರಕ ಅವತಾರಗಳಿಂದ(ನರಸಿಂಹ, ವರಾಹ, ರಾಮ, ಪರಶುರಾಮ, ಇತ್ಯಾದಿ) ಅಹಂಕಾರಕ್ಕೆ 'ಕಾಲನಾದ'.
ಹೀಗೆ ಸರ್ವ ಗುಣಪೂರ್ಣ, ಸರ್ವ ಸಂಹಾರಕ ಹಾಗೂ ಕಾಲ ನಿಯಾಮಕ ಭಗವಂತ ಕಾಲಃ

೪೨೧) ಪರಮೇಷ್ಠೀ

ಪರಮದಲ್ಲಿ ಸ್ಥಿತನಾದವನು. ಪರಮಾಕಾಶವೆಂಬ ಹೃತ್ಕಮಲ ಮಧ್ಯ ನಿವಾಸಿ. ಇಡೀ ವಿಶ್ವದ ಅನಂತ ಶಕ್ತಿ ಪ್ರತಿಯೊಬ್ಬ ಮನುಷ್ಯನ ಹೃತ್ಕಮಲದಲ್ಲಿ ಪೂರ್ಣ ಪ್ರಮಾಣದಲ್ಲಿ ಅಡಗಿದೆ. ನಮ್ಮ ಹೃದಯದ ಸ್ವಲ್ಪ ಮೇಲ್ಭಾಗದಲ್ಲಿನ ಥೈಮಸ್ ಗ್ಲಾಂಡ್ ಒಳಗೆ ಕಮಲರೂಪದಲ್ಲಿ ಒಂದು ಸೂಜಿಯ ಮೊನೆಯಷ್ಟು ಸೂಕ್ಷ್ಮ ರೂಪದಲ್ಲಿ ಈ ಶಕ್ತಿಯ ಕೇಂದ್ರ ಅಡಗಿದೆ. ಇಂತಹ ಅದ್ಭುತ ಶಕ್ತಿ ಭಗವಂತ ಪರಮೇಷ್ಠೀ. ಎಲ್ಲಕ್ಕಿಂತ ಉತ್ಕೃಷ್ಟವಾದ ನಿತ್ಯ ಲೋಕ ವೈಕುಂಠ ನಿವಾಸಿ ಭಗವಂತ ಪರಮೇಷ್ಠೀ.

೪೨೨) ಪರಿಗ್ರಹಃ

ಪರಿಗ್ರಹ ಎಂದರೆ 'ಪರಿವಾರ' ಎನ್ನುವುದು ಒಂದು ಅರ್ಥ. ಎಲ್ಲಕ್ಕೂ ಮೂಲ ಸ್ವಾಮಿಯಾದ ಭಗವಂತನಿಗೆ ಸರ್ವರೂ ಪರಿಗ್ರಹವಾದರೆ, ಸ್ವಯಂ ಭಗವಂತ ಭಕ್ತರ, ಜ್ಞಾನಿಗಳ ಪರಿಗ್ರಹ. "ಹೂವ ತರುವವರ ಮನೆಗೆ ಹುಲ್ಲ ತರುವ" ಎನ್ನುವಂತೆ, ಭಕ್ತಿಯಿಂದ ಭಗವಂತನಿಗೆ ನಾವು ಹೂವನ್ನು ಅರ್ಪಿಸಿದರೆ ಆತ ನಮ್ಮ ಪರಿವಾರದವರಲ್ಲೊಬ್ಬನಾಗಿ ಭಕ್ತರ ಸೇವೆ ಮಾಡುತ್ತಾನೆ.
ಪರಿತಃ+ಗ್ರಹ್ಯತಿ, ಅಂದರೆ ಎಲ್ಲಾ ಕಡೆ ಜ್ಞಾನಿಗಳ, ಭಕ್ತರ ಉಪಾಸ್ಯ ಮೂರ್ತಿಯಾಗಿ ಪೂಜೆಯನ್ನು ಸ್ವೀಕರಿಸುವ ಭಗವಂತ ಪರಿಗ್ರಹಃ. ನಾವು ಯಾವ ದೇವತೆಯನ್ನು ಶ್ರದ್ಧೆಯಿಂದ ಪೂಜಿಸಿದರೂ ಅದು ತಲುಪುವುದು ಭಗವಂತನನ್ನೇ. ಗೀತೆಯಲ್ಲಿ ಹೇಳುವಂತೆ:

ಯೇsಪ್ಯನ್ಯ ದೇವತಾಭಕ್ತಾ ಯಜಂತೇ ಶ್ರದ್ಧಯಾsನ್ವಿತಾಃ
ತೇsಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್

"ಕೌಂತೇಯ, ಯಾರು ಬೇರೆ ದೇವತೆಗಳ ಭಕ್ತರಾಗಿ ಶ್ರದ್ಧೆಯಿಂದ ಅವರನ್ನು ಆರಾಧಿಸುತ್ತಾರೆ ಅಂಥವರೂ ಕೂಡಾ ತಪ್ಪು ದಾರಿಯಿಂದ ನನ್ನನ್ನೇ ಪೂಜಿಸುತ್ತಾರೆ"

ಭಕ್ತರು ಪ್ರೀತಿಯಿಂದ,ಭಕ್ತಿಯಿಂದ ನೀಡುವ ಎಲ್ಲವನ್ನೂ ಎಲ್ಲೆಡೆ ಸ್ವೀಕರಿಸಿ ಉದ್ಧಾರ ಮಾಡುವ ಭಗವಂತ ಪರಿಗ್ರಹಃ.

೪೨೨) ಉಗ್ರಃ

ಮೇಲೆ ಹೇಳಿದಂತೆ ಎಲ್ಲರನ್ನೂ ಪ್ರೀತಿಸುವ ಭಗವಂತ ಅಂತಃಕರಣ ಶುದ್ಧಿ ಇಲ್ಲದೆ ಬಾಹ್ಯ ಪ್ರಪಂಚದಲ್ಲಿ ಸೋಗು ಹಾಕಿಕೊಂಡು ಬದುಕುವವರಿಗೆ ಉಗ್ರ! ಕರ್ತವ್ಯ ಚ್ಯುತನಾದರೆ ಭಗವಂತನ ರಾಜ್ಯದಲ್ಲಿ ಕ್ಷಮೆ ಇಲ್ಲ. ಭಗವಂತ ನಮ್ಮಲ್ಲಿ ಬಯಸುವುದು ಚಿನ್ನದ ಆಭರಣವನ್ನಲ್ಲ, ನಮ್ಮ ಕರ್ತವ್ಯ ನಿಷ್ಠೆಯನ್ನು. ಕರ್ತವ್ಯ ಭ್ರಷ್ಟನಾಗಿ ವೈಭವದ ಪೂಜೆ ಮಾಡಿದರೆ ಆತ ಎಂದೂ ಒಲಿಯುವುದಿಲ್ಲ. ಆತನ ರಾಜ್ಯದಲ್ಲಿ ಎಂದೂ ತಪ್ಪಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪು ಮಾಡಿದವನು ತಪ್ಪಿನ ಫಲ ಉಣ್ಣಲೇಬೇಕು. ಇದೇ "ಕರ್ಮಫಲ". ನಮಗೆ ಬರುವ ಅತಿಯಾದ ಕಷ್ಟ, ನಮ್ಮ ಮುಂದೆ ನಡೆಯುವ ದುರ್ಘಟನೆ, ಎಲ್ಲವೂ ನಮ್ಮ ಪೂರ್ವ ಪಾಪದ ಪ್ರತಿಫಲನ. "ಪುಣ್ಯ ಫಲವಿರಲಿ, ಪಾಪ ಫಲ ಬೇಡ" ಎಂದರೆ ಅದು ಸಾಧ್ಯವಿಲ್ಲ, ಅದನ್ನು ಅನುಭವಿಸಿಯೇ ತೀರಬೇಕು ! ಈ ವಿಷಯದಲ್ಲಿ ದಾಕ್ಷಿಣ್ಯವೇ ಇಲ್ಲ. ತಪ್ಪು ಮಾಡಿದವರಿಗೆ ನಿರ್ದಯವಾಗಿ ಶಿಕ್ಷೆ ಕೊಡುವ ಭಗವಂತ ಎಲ್ಲಿ ಅಪ್ರಮಾಣಿಕತೆ ಅಹಂಕಾರವಿದೆಯೋ ಅಲ್ಲಿ ಉಗ್ರನಾಗಿದ್ದು ನಮಗೆ ಶಿಕ್ಷಣವನ್ನು ಕೊಡುತ್ತಾನೆ!

೪೨೪) ಸಂವತ್ಸರಃ

ಈ ಹಿಂದೆ ಹೇಳಿದಂತೆ ಈ ನಮ್ಮ ದೇಹದಲ್ಲಿ ನಾಲ್ಕು ವಿಧದ "ಪುರುಷರಿದ್ದಾರೆ'. ಶರೀರ ಪುರುಷ, ಛಂದಃಪುರುಷ, ವೇದಪುರುಷ ಮತ್ತು ಸಂವತ್ಸರ ಪುರುಷ. ಈ ದೇಹ ನಿಂತು ನಡೆದಾಡಬೇಕಾದರೆ ದೇಹದಲ್ಲಿ ಶರೀರಪುರುಷನಾದ ಶಿವಶಕ್ತಿ ಬೇಕು. ಮನಸ್ಸು ಯೋಚಿಸಿದ್ದನ್ನು ಸ್ಪಂದನ, ಪರಾಶರ, ಪಶ್ಯಂತಿ, ಮಧ್ಯಮ ಮತ್ತು ವೈಖರಿ ರೂಪದಲ್ಲಿ ವಾಕ್ ಶಕ್ತಿ ಯಾಗಿ ಹೊರಹೊಮ್ಮುವಂತೆ ಮಾಡಲು ಛಂದಃಪುರುಷನಾದ ಶೇಷ ಶಕ್ತಿ ಅಗತ್ಯ, ವೇದದ ಅರ್ಥವನ್ನು ಮನನ ಮಾಡಿ ತಿಳಿಯುವ ಶಕ್ತಿ "ಗರುಡ ಶಕ್ತಿ" ಅದೇ "ವೇದಪುರುಷ". ಇದರಿಂದಾಚೆಗೆ ಚಿತ್ತವನ್ನು ಒಳಗಿನಿಂದ ಜಾಗೃತಗೊಳಿಸುವ ವಿಜ್ಞಾನಮಯ ಕೋಶದ ಅಭಿಮಾನಿ "ಬ್ರಹ್ಮ-ವಾಯು" ಇದುವೇ "ಸಂವತ್ಸರ ಪುರುಷ". ಈ ಸಂವತ್ಸರ ಪುರುಷರಲ್ಲಿ ನಿಯಾಮಕನಾಗಿ ಕುಳಿತ ಭಗವಂತ "ಪರಮ ಪುರುಷ". ಇದಕ್ಕಾಗಿ ಆತ ಸಂವತ್ಸರಃ.

ಸಂ+ವಸತ್+ರ; ಇಲ್ಲಿ "ಸಂ" ಎಂದರೆ ಸಂಪೂರ್ಣವಾದ ವಸ್ತು-ಭಗವಂತ, ವಸತ್ ಎಂದರೆ ನೆಲೆಸಿರುವುದು, 'ರ' ಎಂದರೆ ರಮೆಯತಿ. ಆದ್ದರಿಂದ ಸಂವಸ್ಸರಃ ಎಂದರೆ "ಭಗವಂತನಲ್ಲಿ ತಮ್ಮ ಮನಸ್ಸನ್ನು ನೆಲೆಗೊಳಿಸಿದವರಿಗೆ ಪೂರ್ಣಾನಂದವನ್ನು ಕೊಡುವವ.
'ಸಂ' ಎಂದರೆ 'ಸಮ್ಯಕ್' ಎನ್ನುವ ಅರ್ಥವನ್ನೂ ಕೊಡುತ್ತದೆ. ಆದ್ದರಿಂದ ಸಂವತ್ಸರ ಎಂದರೆ ತನ್ನ ಪರಿಸರದೊಂದಿಗೆ ಚೆನ್ನಾಗಿ ಬದುಕುವವರಿಗೆ ಆನಂದವನ್ನು ಕೊಡುವವ ಎಂದರ್ಥ. ಇಲ್ಲಿ ಪರಿಸರದೊಂದಿಗೆ ಚೆನ್ನಾಗಿ ಬದುಕುವುದು ಎಂದರೆ "ಇನ್ನೊಬ್ಬರ ಖುಷಿಯನ್ನು ಕಂಡು ತಾನೂ ಖುಷಿ ಪಡುವುದು, ಇನ್ನೊಬ್ಬರ ಕಷ್ಟಕ್ಕೆ ಕರಗುವುದು, ಒಳ್ಳೆಯತನವನ್ನು ಪ್ರೀತಿಸುವುದು, ಕೆಟ್ಟತನದಿಂದ ದೂರ ನಿಲ್ಲುವುದು". ಇದನ್ನು 'ಸಂ-ವಾಸ' ಎನ್ನುತ್ತಾರೆ. ಇಷ್ಟೇ ಅಲ್ಲದೆ 'ನನಗೆ ಯಾವುದು ಕಷ್ಟ ಕೊಡುತ್ತದೋ ಅದು ಇನ್ನೊಬ್ಬರಿಗೂ ಕಷ್ಟ ಕೊಡುತ್ತದೆ ಎಂದು ತಿಳಿದು ಬದುಕುವುದು'; 'ಇನ್ನೊಬ್ಬರಿಗೆ ಸುಖ-ದುಃಖದ ಸ್ಪಂದನವಿದೆ ಎಂದು ತಿಳಿದು ಬದುಕುವುದು'; 'ಇನ್ನೊಬ್ಬರ ಸುಖಕ್ಕೊಸ್ಕರ ತಾನು ಕಷ್ಟ ಪಡುವುದು', ಇತ್ಯಾದಿ.
ಭಗವಂತನ ಕಡೆ ಮುಖ ಹಾಕಿ ಸಾಗುವವರಿಗೆ ಆನಂದವನ್ನು ಕೊಡುವ ಭಗವಂತ ಸಂವತ್ಸರಃ.

೪೨೫) ದಕ್ಷಃ

ದಕ್ಷ ಎಂದರೆ ಸಮರ್ಥ. ಭಗವಂತ ಸರ್ವಸಮರ್ಥ (Omnipotent). ಆತ ಇಡೀ ವಿಶ್ವದ ಪ್ರತಿಯೊಂದು ವಸ್ತುವಿನ ಭೂತ-ಭವಿಷ್ಯತ್ ಹಾಗು ವರ್ತಮಾನವನ್ನು ಸಂಪೂರ್ಣ ತಿಳಿದಿರುತ್ತಾನೆ. ಭಗವಂತ ಸರ್ವವನ್ನೂ ಕಾಣಬಲ್ಲ ಶಕ್ತಿ. ನಮ್ಮಲ್ಲಿರುವ ಕಿಂಚಿತ್ ದಕ್ಷತೆ ಭಗವಂತನ ಪ್ರಸಾದ. ಎಲ್ಲಾ ದಕ್ಷರಿಗೂ ದಕ್ಷತೆಯನ್ನು ಕೊಡುವ ಪೂರ್ಣ ದಕ್ಷ ಭಗವಂತನೊಬ್ಬನೆ. ಆತನ ದಕ್ಷತೆಯನ್ನು ವರ್ಣಿಸುವುದು ಅಸಾಧ್ಯ. ಆತನೊಬ್ಬ ವೈಶಿಷ್ಟ್ಯಪೂರ್ಣ ವಿನ್ಯಾಸಕಾರ. ಈ ಜಗತ್ತಿಗೆ ವೈಶಿಷ್ಟವನ್ನು ಕೊಟ್ಟು ನಿರ್ಮಿಸಿ ಸಲಹುವ ಕಾರ್ಯ ಸಮರ್ಥ ಭಗವಂತ ದಕ್ಷಃ

೪೨೬) ವಿಶ್ರಾಮಃ

ಭಗವಂತ ಸಂಹಾರ ಕರ್ತ ಎಂದಾಗ ನಮಗೆ ಆಶ್ಚರ್ಯವಾಗುತ್ತದೆ. ಯಾರೂ ತನ್ನ ಕೈಯಾರೆ ತನ್ನ ಮಕ್ಕಳನ್ನು ಸಂಹಾರ ಮಾಡುವುದಿಲ್ಲ, ಆದರೆ ಭಗವಂತ ಪ್ರಳಯಕಾಲದಲ್ಲಿ ತನ್ನ ಅದ್ಭುತ ಸೃಷ್ಟಿಯನ್ನು ತಾನೇ ಸಂಹಾರ ಮಾಡುತ್ತಾನೆ! ಭಗವಂತನ ಸಂಹಾರ ನಾಶವಲ್ಲ ! ಅದು ವಿಶ್ರಾಂತಿ. ಜೀವನ ಚಕ್ರದಲ್ಲಿ ಬಳಲಿ ಬೆಂಡಾದ ಜೀವಕ್ಕೆ ವಿಶ್ರಾಂತಿ ಕೊಡುವ ಕಾಲ 'ಪ್ರಳಯ ಕಾಲ'. ಅನೇಕ ಜನ್ಮಗಳಲ್ಲಿ ದೇಹ ಬದಲಾವಣೆ ಮಾಡುತ್ತಾ ಸಾಧನೆಯಲ್ಲಿ ಮುಂದೆ ಸಾಗಿ, ಕೊನೇಯ ದೇಹವೂ ಕಳಚಿ ಬಿದ್ದ ಮೇಲೆ, ಪೂರ್ತಿಯಾಗಿ ವಿಶ್ರಾಂತಿ ಕೊಟ್ಟು ಮೋಕ್ಷ ಸುಖ ಕೊಡುವ ಭಗವಂತ ವಿಶ್ರಾಮಃ.

೪೨೭)ವಿಶ್ವದಕ್ಷಿಣಃ

'ದಕ್ಷಿಣ' ಎಂದರೆ 'ನಿಷ್ಪಕ್ಷಪಾತಿ'. ಭಗವಂತ ಇಡೀ ವಿಶ್ವವನ್ನು ಸೃಷ್ಟಿಮಾಡಿ ಸಲಹುವಾಗ ಎಂದೂ ಎಲ್ಲಿಯೂ ಪಕ್ಷಪಾತ ಮಾಡಿಲ್ಲ. ಇಡೀ ವಿಶ್ವವನ್ನು ನಿಷ್ಪಕ್ಷಪಾತವಾಗಿ ದಕ್ಷತೆಯಿಂದ ನಿರ್ವಹಿಸುವ, ಸರ್ವಸ್ವವನ್ನೀಯುವ ಮಹಾ ಉದಾರಿ ಭಗವಂತ ವಿಶ್ವದಕ್ಷಿಣಃ.

ಮುಂದುವರೆಯುವುದು...

No comments:

Post a Comment