Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -42


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ |
ಪರರ್ದ್ಧಿಃ ಪರಮಃ ಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷಣಃ || 42 ||

೩೮೬) ವ್ಯವಸಾಯಃ

ವ್ಯವಸಾಯ ಎಂದರೆ 'ನಿಶ್ಚಯ ಜ್ಞಾನ ಸ್ವರೂಪ'. ಭಗವಂತನನ್ನು ಬಿಟ್ಟರೆ ಬೇರೆ ಯಾರಿಗೂ ನಿಶ್ಚಯ ಜ್ಞಾನವಿಲ್ಲ. ಒಂದು ವಸ್ತುವನ್ನು ನಿಖರವಾಗಿ ತಿಳಿಯಲು ಇಡೀ ವಿಶ್ವರಚನೆಯ ಗಣಿತ ತಿಳಿದಿರಬೇಕು. ಎಲ್ಲವನ್ನೂ ಕರಾರುವಕ್ಕಾಗಿ ತಿಳಿದಿರುವ ಭಗವಂತ ವ್ಯವಸಾಯಃ.

೩೮೭) ವ್ಯವಸ್ಥಾನಃ

ವಿವಿಧ ರೂಪಗಳಿಂದ ಪಿಂಡಾಂಡ ಬ್ರಹ್ಮಾಂಡಗಳಲ್ಲಿ ತುಂಬಿದವನು. ಬೇರೆ ಬೇರೆ ದೇವತೆಗಳಿಗೆ ಈ ಪಿಂಡಾಂಡ ಮತ್ತು ಬ್ರಹ್ಮಾಂಡದಲ್ಲಿ ಬೇರೆ ಬೇರೆ ವ್ಯವಸ್ಥೆಯಿದೆ. ದೇವತೆಗಳಿಗಲ್ಲದೆ ಪ್ರತಿಯೊಬ್ಬ ಮನುಷ್ಯನಿಗೂ ಸಹ ನಿಯಾಮಕ ವ್ಯವಸ್ಥೆ ಭಗವಂತ ಮಾಡುತ್ತಾನೆ. ಯಾರು ಏಲ್ಲಿ ಹುಟ್ಟಬೇಕು, ಏನು ಕೆಲಸ ಮಾಡಬೇಕು ಎನ್ನುವ ವ್ಯವಸ್ಥೆ ಭಗವಂತ ಮಾಡಿಯೇ ನಮ್ಮನ್ನು ಭೂಲೋಕಕ್ಕೆ ಕಳುಹಿಸುತ್ತಾನೆ . ಇಂತಹ ಭಗವಂತನಿಗೆ ವ್ಯವಸ್ಥಾನಃ ಅನ್ವರ್ಥ ನಾಮ.

೩೮೮) ಸಂಸ್ಥಾನಃ

ಜ್ಞಾನಿಗಳ ಹೃದಯದಲ್ಲಿ ಚೆನ್ನಾಗಿ ನೆಲೆಸಿದವನು; ಸರ್ವ ದೇವತೆಗಳೊಳಗಿದ್ದು, ಅವರು ನಿರ್ವಹಿಸಬೇಕಾದ ಕಾರ್ಯವನ್ನು ಮಾಡಿಸುವ ಭಗವಂತ ಸಂಸ್ಥಾನಃ.

೩೮೯) ಸ್ಥಾನದಃ

ಅವರವರ ಯೋಗ್ಯತೆಗೆ ತಕ್ಕಂತೆ ಅವರವರಿಗೆ ತಾಣವನ್ನು ಕೊಟ್ಟು ಸಲಹುವವನು.

೩೯೦) ಧ್ರುವಃ

ಸ್ಥಿರನಾದವನು. ಭಗವಂತನೊಬ್ಬನೇ ಶಾಶ್ವತ, ಇನ್ಯಾರೂ ಶಾಶ್ವತವಲ್ಲ. ದೇವತೆಗಳ ಅವಧಿ ಕೇವಲ ಒಂದು ಕಲ್ಪ ಆದರೆ ಭಗವಂತನ ಸ್ಥಾನಕ್ಕೆ ಆದಿ ಅಂತ್ಯವಿಲ್ಲ. ಜ್ಞಾನಿಗಳನ್ನು ಧ್ರುವ ಲೋಕಕ್ಕೆ ಕಳುಹಿಸುವ ಭಗವಂತ ಧ್ರುವಃ.

೩೯೧) ಪರರ್ದ್ಧಿಃ

ಸಂಸ್ಕೃತದಲ್ಲಿ 'ರದ್ಧಿ' ಎಂದರೆ ಸಮೃದ್ಧಿ, ಅಥವಾ ಪೂರ್ಣತೆ. ಭಗವಂತ ಸಮೃದ್ಧಿಯ ತುತ್ತತುದಿ ಹಾಗೂ ಅದು ಅನಂತ. ನಮಗೆ ಸಮೃದ್ಧಿಯನ್ನು (ಜ್ಞಾನ, ಭಲ, ಐಶ್ವರ್ಯ, ಸಜ್ಜನಿಕೆ, ಇತ್ಯಾದಿ) ಕೊಡುವವನೂ ಅವನೇ. ಇಂತಹ ಪರಿಪೂರ್ಣ ಸ್ವರೂಪ ಭಗವಂತ ಪರರ್ದ್ಧಿಃ.

೩೯೨) ಪರಮಸ್ಪಷ್ಟಃ

ಭಗವಂತ ಸ್ಪಷ್ಟ ಹಾಗೂ ಯಾರಿಗೂ ತಿಳಿಯದ್ದನ್ನು ನೋಡಿ ತಿಳಿದವನು. ಜ್ಞಾನಿ ಅಜ್ಞಾತನಾದ ಭಗವಂತನನ್ನು ಕೊನೆಗೊಮ್ಮೆ ನಿಚ್ಚಳವಾಗಿ ಕಾಣುತ್ತಾನೆ. ಭಗವಂತ ನಾವು ಹೊರಗಿನಿಂದ ಕಾಣುವ ವಸ್ತುವಿನಂತಲ್ಲ , ಆತನಿಗೆ ಇಂತದ್ದೇ ಎನ್ನುವ ರೂಪವೊಂದಿಲ್ಲ, ಆತ ಆಕಾಶದಂತೆ. ಆತ ಕಾಣಿಸಿಕೊಂಡರೆ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಾನೆ, ಆಗ ನಮಗೆ ಕಾಣುವ ಇತರ ಎಲ್ಲಾ ವಸ್ತುಗಳು ಅಸ್ಪಷ್ಟವಾಗುತ್ತವೆ. ಕಾಣದವರ ಸಂಶಯಕ್ಕೆ ಆತ ಕಾಣಿಸುವ ತನಕ ಪರಿಹಾರವಿಲ್ಲ, ಕಂಡವರಿಗೆ ಕಂಡ ಮೇಲೆ ಸಂಶಯ ಬರುವ ಸಂಭವವಿಲ್ಲ, ಅಷ್ಟು ನಿಚ್ಚಳವಾಗಿ ಕಾಣಿಸಿಕೊಳ್ಳುತ್ತಾನೆ. 'ಯಸ್ಮಿನ್ ವಿಜ್ಞಾತೇ ಸರ್ವವಿದಂ ವಿಜ್ಞಾತಂ' ಭಗವಂತನನ್ನು ತಿಳಿದವನಿಗೆ ಯಾವ ವಿಧದ ಪ್ರಶ್ನೆ ಇಲ್ಲ, ಅಷ್ಟು ಸ್ಪಷ್ಟವಾಗಿ ವಿಶ್ವದ ರಹಸ್ಯವನ್ನು ತೆರೆದು ಬಿಡುತ್ತಾನೆ ಭಗವಂತ. ಹೀಗೆ ಜ್ಞಾನಿಗಳಿಗೆ ನಿಚ್ಚಳವಾಗಿ ಗೋಚರಿಸುವ ಭಗವಂತ ಪರಮಸ್ಪಷ್ಟಃ.

೩೯೩) ಸ್ತುಷ್ಟಃ
ಭಗವಂತ ನಿತ್ಯ ತೃಪ್ತ. ಮಾನವರಾದ ನಮಗೆ ಯಾವುದೂ ಸಾಕು ಅನ್ನಿಸುವುದಿಲ್ಲ, ಒಂದು ವೇಳೆ ಅನ್ನಿಸಿದರೂ ಅದು ತಾತ್ಕಾಲಿಕ. ಬಯಕೆ ನಮ್ಮ ಬೆನ್ನನ್ನು ಬಿಡುವುದಿಲ್ಲ, ಆದರೆ ಭಗವಂತ ಎಲ್ಲವುದರಲ್ಲೂ ನಿತ್ಯ ತೃಪ್ತ. ಯಾವುದನ್ನೂ ಬಯಸದ ಅಸಾಧಾರಣ ಸ್ವರೂಪನಾದ ಭಗವಂತ ಸ್ತುಷ್ಟಃ.

೩೯೪) ಪುಷ್ಟಃ

ಎಲ್ಲ ಗುಣಗಳಿಂದ ತುಂಬಿದ ಭಗವಂತ ಎಲ್ಲವುದರಿಂದ ಪೂರ್ಣ. ಸ್ವಯಂ ಪರಿಪೂರ್ಣನಾದ ಭಗವಂತ ಪುಷ್ಟಃ

೩೯೫) ಶುಭೇಕ್ಷಣಃ

ಶುಭೇಕ್ಷಣ ಎಂದರೆ ಮಂಗಳಕರವಾದ ಕಣ್ಣು ಅಥವಾ ನೋಟವುಳ್ಳವನು. ಭಗವಂತನ ನೋಟ ಪರಮಾನುಗ್ರಹ ಮಾಡತಕ್ಕಂತಹ ನೋಟ. ಆತನ ಮಾಂಗಲಿಕ ನೋಟ ಯಾರ ಮೇಲೆ ಬಿತ್ತೋ ಆತ ಭಗವಂತನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ. ಭಗವಂತ ಎಲ್ಲೆಲ್ಲೂ ಶುಭವನ್ನು ಕಾಣುತ್ತಾನೆ, ಆತ ಎಂದೂ ಕೆಟ್ಟದ್ದನ್ನು ಕಾಣುವುದಿಲ್ಲ. ಸಾಮಾನ್ಯರಾದ ನಮಗೆ ಹುಟ್ಟು ಮಾಂಗಲಿಕ ಹಾಗೂ ಸಾವು ಅಶುಭ. ಆದರೆ ಭಗವಂತನಿಗೆ ಹುಟ್ಟು ಎಷ್ಟು ಸಹಜ ಘಟನೆಯೋ, ಸಾವೂ ಕೂಡಾ ಅಷ್ಟೇ ಸಹಜ ಘಟನೆ. ಯಾದವರು ಹೊಡೆದಾಡಿ ಸಾಯುತ್ತಿರುವಾಗ ಕೃಷ್ಣ ನಗುತ್ತ ನಿಂತಿದ್ದನಂತೆ. ಏಕೆಂದರೆ ಭಗವಂತನಿಗೆ ಯಾವುದೂ ಅಶುಭವಲ್ಲ. [ವೇದವ್ಯಾಸರು ಹೇಳುವಂತೆ "ಈ ಸೃಷ್ಟಿಯಲ್ಲಿ ಈ ತನಕ ಯಾವುದೂ ಆಗಬಾರದ್ದು ಆಗಿಲ್ಲ ಹಾಗೂ ಇನ್ನು ಆಗುವುದೂ ಇಲ್ಲ" ಯಾವ ಘಟನೆ ಏಕೆ ಸಂಭವಿಸುತ್ತದೆ ಎನ್ನುವ ಪರಿಜ್ಞಾನ ಮಾತ್ರ ನಮಗಿಲ್ಲ ಅಷ್ಟೇ.] ಶುಭ+ಈಕ್ಷ+ಣ, ಇಲ್ಲಿ ಶುಭ ಎಂದರೆ ಭಗವಂತ. ಏಕೆಂದರೆ ಆತನಿಗಿಂತ ಶುಭ ಇನ್ನೊಂದಿರಲು ಸಾದ್ಯವಿಲ್ಲ. 'ಶುಭೇಕ್ಷರು' ಎಂದರೆ ಭಗವಂತನನ್ನು ತಿಳಿದವವರು, ತಿಳಿದು ಕಂಡವರು. 'ಣ' ಎಂದರೆ 'ಬಲ' ಆದ್ದರಿಂದ ಶುಭೇಕ್ಷಣಃ ಎಂದರೆ ಜ್ಞಾನಿಗಳಿಗೆ ಪರಮಾನಂದದ ನಿತ್ಯ ಪದವಿಯನ್ನು ಕೊಡುವವ. ಹೀಗೆ ಜ್ಞಾನಿಗಳಿಗೆ ಬೆಂಬಲವನ್ನೀಯುವ, ಬರಿಯ ಕಣ್ಣ ನೋಟದಿಂದ ಸಕಲ ಪುರುಷಾರ್ಥವನ್ನೀಯುವ ಭಗವಂತ ಶುಭೇಕ್ಷಣಃ.

ಮುಂದುವರೆಯುವುದು...

No comments:

Post a Comment