Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -17


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಉಪೇಂದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ |
ಅತೀಂದ್ರಃ ಸಂಗ್ರಹಃ ಸರ್ಗೋ ಧೃತಾತ್ಮಾ ನಿಯಮೋ ಯಮಃ || 17 || 

151) ಉಪೇಂದ್ರಃ 

ಉಪೇಂದ್ರ ಎನ್ನುವ  ಭಗವಂತನ ನಾಮ ತುಂಬಾ ರೋಚಕವಾದ ಅರ್ಥವನ್ನು ಕೊಡುವ ನಾಮ. ಹಿಂದೆ ನೋಡಿದಂತೆ(39ನೇ ನಾಮ ನೋಡಿ) ಅದಿತಿ-ಕಶ್ಯಪರ ಹನ್ನೆರಡು ಮಂದಿ ಮಕ್ಕಳಲ್ಲಿ ಒಬ್ಬ ಇಂದ್ರ ಹಾಗೂ  ಕೊನೆಯ ಮಗ ವಾಮನ ರೂಪಿ ಭಗವಂತ. ಇಲ್ಲಿ ಇಂದ್ರನ ತಮ್ಮನಾಗಿ ಹುಟ್ಟಿದ ಭಗವಂತನನ್ನು ಉಪೇಂದ್ರ ಎನ್ನುತ್ತಾರೆ. ಅಜಗನ್ಯಹ ಜಗನ್ಯಜಃ - ಅಂದರೆ ಯಾರಿಗೂ ಚಿಕ್ಕವನಲ್ಲ ಆದರೆ ಹುಟ್ಟಿನಲ್ಲಿ ಎಲ್ಲರಿಗಿಂತ ಚಿಕ್ಕವ ವಾಮನ.
ಚತುರ್ಮುಖನ ಒಂದು ದಿನ ಅಂದರೆ  432 ಕೋಟಿ ವರ್ಷಗಳ ಹಗಲು(ಸೃಷ್ಟಿ) ಹಾಗೂ  432 ಕೋಟಿ ವರ್ಷಗಳ ರಾತ್ರಿ (ಪ್ರಳಯ). ಈ   432 ಕೋಟಿ ವರ್ಷಗಳ ಹಗಲಿನಲ್ಲಿ 14 ಮನ್ವಂತರಗಳಿರುತ್ತವೆ. ಪ್ರತೀ ಮನ್ವಂತರಕ್ಕೆ ಒಬ್ಬ ಇಂದ್ರ. ಹಾಗೂ ಪ್ರತೀ ಮನ್ವಂತರಕ್ಕೆ ಒಮ್ಮೆ  ಸಂಪೂರ್ಣ ದೇವಗಣ ಬದಲಾಗುತ್ತದೆ. ಪ್ರತೀ ಮನ್ವಂತರದಲ್ಲಿ ಇಂದ್ರನಿಗೆ  ಸಹಾಯಕನಾಗಿ ಭಗವಂತ ಅವತರಿಸುತ್ತಾನೆ. ಹೀಗೆ ಇಂದ್ರನ ಬೆಂಬಲಕ್ಕಾಗಿ ಅವತರಿಸುವ ಭಗವಂತನನ್ನು ಉಪೇಂದ್ರ ಎನ್ನುತ್ತಾರೆ. ಮೊದಲನೇ ಮನ್ವಂತರದಲ್ಲಿ ಭಗವಂತ ಸ್ವತಃ ಇಂದ್ರನಾಗಿದ್ದದರಿಂದ  ಅಲ್ಲಿ ಉಪೇಂದ್ರ ಕಾಣಸಿಗುವುದಿಲ್ಲ. ವೈವಸ್ವತ  ಮನ್ವಂತರದ ಉಪೇಂದ್ರರೂಪ ವಾಮನ.  ಆದ್ದರಿಂದ, ಇಂದ್ರನಿಂದ ಬಲಿ ರಾಜ್ಯವನ್ನು ಕಿತ್ತುಕೊಂಡಾಗ, ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿ, ಇಂದ್ರನ ಸಂಪತ್ತನ್ನೂ ಮರಳಿ ಇಂದ್ರನಿಗೆ ಕೊಟ್ಟವ  ಉಪೇಂದ್ರನಾದ ವಾಮನ ರೂಪಿ ಭಗವಂತ.
ಇನ್ನು ಉಪೇಂದ್ರ ಎನ್ನುವ ನಾಮದಲ್ಲಿ 'ಉಪ' ಎಂದರೆ 'ಉಪರಿ' ಅಂದರೆ ಉತ್ಕೃಷ್ಟ ಎಂದರ್ಥ. ಈ ಸಂಸ್ಕೃತ  ಶಬ್ದ  ಇಂಗ್ಲೀಷಿನಲ್ಲಿ up ಅಥವಾ  upper ಎಂದಾಯಿತು. ಜರ್ಮನ್ ಭಾಷೆಯಲ್ಲಿ  Über (Ueber )  ಎಂದಾಯಿತು. ಹಿಂದಿಯಲ್ಲಿ   ऊपर ಎಂದಾಯಿತು. ಎಲ್ಲಾ ಭಾಷೆಗಳ ಮೂಲ ಸಂಸ್ಕೃತ. ಉಪ ಎಂದರೆ ಎತ್ತರ ಎನ್ನುವ ಅರ್ಥವನ್ನು  ಅನೇಕ ಕಡೆ ಬಳಸುತ್ತೇವೆ. ಉದಾಹರಣೆಗೆ 'ಉಪನಿಷತ್ತು ' ಅಂದರೆ ನಮ್ಮನ್ನು  ಎತ್ತರಕ್ಕೆ ಕೊಂಡೊಯ್ಯುವ  ಗ್ರಂಥ,  'ಉಪನಯನ' ಅಂದರೆ ಜ್ಞಾನಗಳಿಸಲು  ಬೇಕಾದ, ಎತ್ತರಕ್ಕೆ ಏರುವ ಕ್ರಿಯೆ, 'ಉಪವಾಸ 'ಅಂದರೆ ಮನಸ್ಸನ್ನು ಎತ್ತರಕ್ಕೇರಿಸಲು ನಮ್ಮ ಹೊಟ್ಟೆಯನ್ನು  ಖಾಲಿ   ಇಡುವುದು,  ಇತ್ಯಾದಿ. ಆದ್ದರಿಂದ ಇಲ್ಲಿ ಉಪೇಂದ್ರ ಎಂದರೆ ಸ್ವರ್ಗದ ಒಡೆಯನಾದ  ಇಂದ್ರನಿಗಿಂತ   ಮೇಲಿರುವ,  ಮೂರುಲೋಕದ ಒಡೆಯನಾದ, ಬ್ರಹ್ಮಾಂಡ ನಾಯಕ ಭಗವಂತ  ಎಂದರ್ಥ.

152) ವಾಮನಃ

ಬಲಿ ಚಕ್ರವರ್ತಿಯನ್ನು ವಾಮನರೂಪಿ ಭಗವಂತ ಮೂರು ಹೆಜ್ಜೆ ಭೂಮಿ ಕೇಳಿ, ಸೋಲಿಸಿ ಉದ್ಧಾರ ಮಾಡಿದ ಕಥೆಯನ್ನು ನಾವು ಭಗವಂತನ ವಿಕ್ರಮೀ ಎನ್ನುವ ನಾಮ(75 ನೇ ನಾಮ)ದಲ್ಲಿ ನೋಡಿದ್ದೇವೆ. ಇಲ್ಲಿ  ವಾಮನ ಎಂದರೆ ಚಿಕ್ಕ ಗಾತ್ರದವ ಎಂದರ್ಥ. ಭಗವಂತ ಅಣುವಿಗಿಂತ  ಅಣುವಾಗಿ  ನಮ್ಮ  ಹೃದಯಕಮಲದಲ್ಲಿ ತುಂಬಿದ್ದಾನೆ.
'ವಾಮ' ಎಂದರೆ ಸೌಂದರ್ಯ. ವಾಮನ ಎಂದರೆ  ಸೌಂದರ್ಯವನ್ನು ಕೊಡುವವನು. ಸೌಂದರ್ಯದ ಕೇಂದ್ರಬಿಂದು  ಕಣ್ಣು. ಭಗವಂತನ ಸನ್ನಿಧಾನ ಕಣ್ಣಿನಲ್ಲಿರುತ್ತದೆ. ಎಷ್ಟೇ  ಸೌಂದರ್ಯವಿದ್ದರೂ, ಕಣ್ಣಿಲ್ಲದವ ಕುರೂಪಿಯಾಗಿರುತ್ತಾನೆ. ಈ ರೀತಿ ಸೌಂದರ್ಯಸಾರಭೂತನಾದ ಭಗವಂತ ವಾಮನ. ಈ ಪದವನ್ನು ವಾ+ಅಮ+ನ  ಎಂದು ಒಡೆದು ಅರ್ಥೈಸಬಹುದು. ಇಲ್ಲಿ 'ವಾ' ಎಂದರೆ ಜ್ಞಾನ, 'ಅಮ' ಎಂದರೆ ಅಜ್ಞಾನ ಹಾಗೂ 'ನ' ಎಂದರೆ ನಯತಿ. ಆದ್ದರಿಂದ ಜ್ಞಾನವನ್ನಾಗಲಿ, ಅಜ್ಞಾನವನ್ನಾಗಲಿ, ಅವರವರ  ಯೋಗ್ಯತೆಗೆ  ತಕ್ಕಂತೆ ಕರುಣಿಸುವ, ಜ್ಞಾನಮೂರ್ತಿಯೂ, ಆನಂದಮೂರ್ತಿಯೂ, ಆದ ಭಗವಂತ  ವಾಮನ.

153) ಪ್ರಾಂಶುಃ

ಪ್ರಾಂಶುಃ ಎಂದರೆ ಪ್ರಕೃಷ್ಟವಾದ ಕಿರಣಗಳುಳ್ಳವ, ಹಾಗೂ ಎತ್ತರದಲ್ಲಿರುವವ ಎಂದರ್ಥ. ಸೂರ್ಯನಲ್ಲಿ, ಚಂದ್ರನಲ್ಲಿ, ಎಲ್ಲಾ ಜೀವರಲ್ಲಿ, ಎಲ್ಲೆಲ್ಲೂ  ತುಂಬಿರುವ ಭಗವಂತ  ಪ್ರಾಂಶುಃ. ಬಲಿ ಚಕ್ರವರ್ತಿ ಭಗವಂತನ ಈ ರೂಪವನ್ನು ತಿಳಿದ ಮರುಕ್ಷಣದಲ್ಲಿ ಭಗವಂತನ ಪಾದಕಮಲಕ್ಕೆ ತಲೆಯೊಡ್ಡಿ ಶರಣಾಗುತ್ತಾನೆ.

154) ಅಮೋಘಃ

ಮೋಘ ಎಂದರೆ ವ್ಯರ್ಥ ಎಂದರ್ಥ. ಭಗವಂತನ ಯಾವ ಕ್ರಿಯೆಯೂ ವ್ಯರ್ಥವಲ್ಲ ಅದು ಅಮೋಘ. ಭಗವಂತನಿಗೆ ಅರ್ಪಿಸಿ  ನಾವು ಮಾಡುವ ಯಾವ ಕೆಲಸವೂ ಎಂದೂ ವ್ಯರ್ಥವಲ್ಲ. ಗೀತೆಯಲ್ಲಿ ಹೇಳುವಂತೆ:
ನೇಹಾಭಿಕ್ರ ಮನಾಶೋऽಸ್ತಿ ಪ್ರತ್ಯವಾಯೋ ನ ವಿದ್ಯತೇ (ಅ-೨ ಶ್ಲೋ-೪೦)
ಎಂದರೆ "ಭಗವದ್ಸಾಧನೆಯ ಒಂದು ತೊದಲು ಹೆಜ್ಜೆ ಕೂಡಾ ವ್ಯರ್ಥವಲ್ಲ" .
ನಾವು ಕೋಟ್ಯಾಧಿಪತಿಯಾಗಬೇಕು ಎಂದು ದೇವರನ್ನು ಮರೆತು, ಜೀವನ ಪರ್ಯಂತ ಸಾಧನೆ ಮಾಡಿ, ಗಳಿಸಿದ ಹಣ ನಮ್ಮೊಂದಿಗೆ ಬರುವುದಿಲ್ಲ. ಆದರೆ ಭಗವಂತನ ಜ್ಞಾನ ಅಥವಾ ಭಗವಂತನನ್ನು ತಿಳಿಯುವ ಇಚ್ಛೆ, ನಮ್ಮ ಮುಂದಿನ ಜನ್ಮದ ಮೆಟ್ಟಿಲಾಗಿ ನಮ್ಮೊಂದಿಗೆ ಬರುತ್ತದೆ. ನಾವು ಮಾಡಿದ ಯಾವ ಕರ್ಮವಿರಲಿ, ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ, ಅದು ಮೋಘವಾಗದೆ, ಮುಂದಿನ ಜನ್ಮದಲ್ಲಿ ಫಲಿಸಿಯೇ ತೀರುವಂತೆ ನೋಡಿಕೊಳ್ಳುವ ಭಗವಂತ ಅಮೋಘಃ

155) ಶುಚಿಃ

ಶುಚಿಃ ಎಂದರೆ "Ever Pure", ದೋಷದ ಸ್ಪರ್ಶವೇ ಇಲ್ಲದೆ, ನಿರ್ಮಲವಾಗಿರುವ ಬೆಳಕಿನ ಪುಂಜ. ಭಗವಂತ ಬೆಂಕಿಯಂತೆ.
ಬೆಂಕಿಗೆ ಏನನ್ನೇ ಹಾಕಿ, ಅದು ಕೊಳೆಯಾಗುವುದಿಲ್ಲ. ಆದರೆ  ನೀರು, ಗಾಳಿ ಕೊಳೆಯಾಗುತ್ತದೆ.  ಬೆಂಕಿಗೆ ಹಾಕಿದ  ಕೊಳೆ  ಕೂಡ  ಶುಚಿಯಾಗುತ್ತದೆ. ಭಗವಂತ ಕೂಡ ಅಗ್ನಿಯಂತೆ ಶುಚಿ. ಆತ ಸ್ವಯಂ ಬೆಳಕು ಹಾಗೂ ಎಲ್ಲರಿಗೂ ಬೆಳಕನ್ನು ಕೊಡುವವ. ಅಧರ್ಮಿಗಳಿಗೆ  'ಶೋಚ'  ಅಥವಾ 'ದುಃಖ' ಕೊಡುವವನೂ ಅವನೇ. ಇಂತಹ ಭಗವಂತ ಶುಚಿಃ..

156) ಊರ್ಜಿತಃ

ಭಗವಂತ ಎಲ್ಲವುದರಲ್ಲೂ ಪೂರ್ಣತೆ ಪಡೆದ, ಅನಂತವಾದ, ಅತ್ಯಂತ ಬಲಶಾಲಿ. ಆದ್ದರಿಂದ ಆತ ಊರ್ಜಿತಃ

157) ಅತೀಂದ್ರಃ 

ಅತೀಂದ್ರ ಎಂದರೆ ಇಂದ್ರನನ್ನು ಮೀರಿನಿಂತವನು ಹಾಗೂ ಬ್ರಹ್ಮ- ವಾಯುವನ್ನೂ ಮೀರಿ ನಿಂತವನು. ಇಂದ್ರ ಎಂದರೆ ಸರ್ವಸಮರ್ಥ. ಜಗತ್ತಿನಲ್ಲಿ ನಾವು ಯಾವುದನ್ನು ಸರ್ವಸಮರ್ಥ ಎಂದು ತಿಳಿದಿದ್ದೇವೋ, ಆ ಎಲ್ಲಾ ಶಕ್ತಿಗಳನ್ನು ಮೀರಿನಿಂತ  ಶಕ್ತಿಯಾದ ಭಗವಂತ ಅತೀಂದ್ರ. ಇಂದ್ರ ಎಂದರೆ ದೇವೇಂದ್ರ ಕೂಡಾ ಹೌದು. ಭಗವಂತ ದೇವೇಂದ್ರನನ್ನು ಮೀರಿ ನಿಂತ ಶಕ್ತಿ ಎಂದು ನಿರೂಪಿಸುವ ಕಥೆ, ಶ್ರೀ ಕೃಷ್ಣ  ನಮಗೆ  ಗೋವರ್ಧನ ಪರ್ವತ ಎತ್ತಿ ತೋರಿಸಿಕೊಟ್ಟಿದ್ದಾನೆ. ಈ ರೀತಿ ಇಂದ್ರನನ್ನು, ಪ್ರಾಣ-ವಾಯುವನ್ನು, ಬ್ರಹ್ಮಾದಿ ದೇವತೆಗಳನ್ನು ಮೀರಿನಿಂತ, ಓಂಕಾರ ನಾಮಕ ಭಗವಂತ ಅತೀಂದ್ರಃ .

158) ಸಂಗ್ರಹಃ

ನಮ್ಮ ಮನಸ್ಸಿನ ಶಕ್ತಿ ಸೀಮಿತ. ನಮಗೆ ಕೇವಲ ಸತ್ಯವನ್ನು ಮಾತ್ರ ಗ್ರಹಿಸುವ ಶಕ್ತಿ ಇಲ್ಲ. ಕೆಲವೊಮ್ಮೆ ನಾವು ಅಸತ್ಯವನ್ನು ಸತ್ಯವನ್ನಾಗಿ ಗ್ರಹಿಸುತ್ತೇವೆ. ಆದರೆ ಯಾವುದೇ ವಿಷಯವನ್ನು ನಿಶ್ಚಿತವಾಗಿ, ತದ್ವತ್ತಾಗಿ, ವಿಪರೀತ ಜ್ಞಾನದ ಸ್ಪರ್ಶವಿಲ್ಲದೆ, ಯಥಾರ್ತವಾಗಿ ಗ್ರಹಿಸಬಲ್ಲ ಭಗವಂತ ಸಂಗ್ರಹಃ  ನಮಗೆ ಗ್ರಹಣ ಶಕ್ತಿಯನ್ನು  ದಯಪಾಲಿಸಿದ, ನಾವು ಜಾರಿ ಬಿದ್ದಾಗ, ಕೈಹಿಡಿದು ನಮ್ಮನ್ನು ಮೇಲಕ್ಕೆತ್ತಿ, ಆತ್ಮೀಯವಾಗಿ ಸ್ವೀಕರಿಸಿ, ಅಜ್ಞಾನವನ್ನು ತೊಲಗಿಸಿ, ಜ್ಞಾನವನ್ನು ಕೊಡುವ ಭಗವಂತ ಸಂಗ್ರಹಃ . ಪ್ರಳಯ ಕಾಲದಲ್ಲಿ ಎಲ್ಲಾ ಜೀವರನ್ನು ತನ್ನ ಉದರದಲ್ಲಿ ಸಂಗ್ರಹಿಸಿ, ಸೃಷ್ಟಿ ಕಾಲದಲ್ಲಿ ಪುನಃ ಆಯಾ ಜೀವಗಳ ಕರ್ಮಾನುಸಾರವಾಗಿ ಮರುಸೃಷ್ಟಿ ಮಾಡುವ ಭಗವಂತ ಸಂಗ್ರಹಃ.

159) ಸರ್ಗಃ

ಸರ್ಗ ಎಂದರೆ ಎಲ್ಲವನ್ನು ಸೃಷ್ಟಿಮಾಡುವ ಶಕ್ತಿ. ಸೃಷ್ಟಿ ಎಂದರೆ ಸ್ವರೂಪೋತ್ಪತಿ.  ಆಕಾಶದ ಸೃಷ್ಟಿ ಎಂದರೆ ಏನೂ  ಇಲ್ಲದ  ಆಕಾಶದಲ್ಲಿ  ಎಲ್ಲವನ್ನು  ತುಂಬಿ ಹೊಸ ರೂಪ ಕೊಡುವುದು. ಕಾಲದ ಸೃಷ್ಟಿ ಎಂದರೆ, ಕಾಲ ಎನ್ನುವ ಅಖಂಡವಾದದ್ದನ್ನು ಸೂರ್ಯ ಚಂದ್ರರ ಸೃಷ್ಟಿ ಮುಖೇನ, ಅನೇಕ ಭಾಗಗಳನ್ನಾಗಿ ಮಾಡಿ ಹೊಸ ರೂಪ ಕೊಡುವುದು. ಹೀಗೆ ಇಡೀ ವಿಶ್ವದ ಸೃಷ್ಟಿಕರ್ತ ಭಗವಂತ ಸರ್ಗಃ

160) ಧೃತಾತ್ಮಾ

ಧೃತಾತ್ಮಾ ಎಂದರೆ ಎಲ್ಲವನ್ನು ಧರಿಸಿದವನು ಎಂದರ್ಥ. ಆತ ಬಿಂಬ ರೂಪನಾಗಿ, ಅನೇಕರೂಪಿಯಾಗಿ, ನಮ್ಮೊಳಗೇ  ಇದ್ದಾನೆ. ಈ ದೇಹದ ಪಂಚ ಕೋಶಗಳಲ್ಲಿ, ಪಂಚ ಜ್ಞಾನೇಂದ್ರಿಯಗಳಲ್ಲಿ, ಪಂಚ ಕರ್ಮೇಂದ್ರಿಯಗಳಲ್ಲಿ, ಪಂಚ ರೂಪನಾಗಿ ಭಗವಂತನಿದ್ದಾನೆ.
ಸಪ್ತ ಧಾತುಗಳಲ್ಲಿ ಸಪ್ತರೂಪನಾಗಿ, 360 ಅಸ್ಥಿಗಳಲ್ಲಿ , 72,000 ನಾಡಿಗಳಲ್ಲಿ, ಅನಂತ ರೂಪನಾಗಿ ವ್ಯಾಪಿಸಿದ್ದಾನೆ.  ಪ್ರತಿಯೊಂದು ಮಾನವ ಶರೀರದಲ್ಲೂ ಭಗವಂತನ ಅನಂತ ರೂಪವಡಗಿದೆ. ಆದ್ದರಿಂದ ಇಂತಹ ದೇವಾಲಯವನ್ನು ಛಿದ್ರಗೊಳಿಸುವ ಆತ್ಮಹತ್ಯೆ ಮಹಾ ಪಾಪ. ಜಗತ್ತಿನ ಇತರ ಜೀವ ಜಂತುಗಳಲ್ಲಿ ಭಗವಂತನಿದ್ದರೂ ಕೂಡಾ, ಪೂರ್ಣತೆ ಪಡೆಯದ ಇತರ ಜೀವಗಳಿಗಿಂತ, ಮನುಷ್ಯನಲ್ಲಿ ಆತನ ಅಭಿವ್ಯಕ್ತ  ಅತೀ ಹೆಚ್ಚು. ಈ ರೀತಿ ನಮ್ಮೊಳಗಿದ್ದು ಎಲ್ಲಾ ದೇವತೆಗಳನ್ನು ಧಾರಣೆ ಮಾಡಿ, ಎಲ್ಲಾ ಕಡೆ ತುಂಬಿರುವ ಆ ಭಗವಂತ ಧೃತಾತ್ಮಾ.

161) ನಿಯಮಃ

ಭಗವಂತನನ್ನು ತಿಳಿಯಬೇಕಾದರೆ ನಾವು ನಮ್ಮಲ್ಲಿ ಐದು ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಅವುಗಳೆಂದರೆ: ಶೌಚ, ತಪಃ, ತೃಪ್ತಿಃ, ಸ್ವಾಧ್ಯಾಯ ಮತ್ತು ಪುರುಷಾರ್ಚನ.
೧)ಶೌಚ : ಕೊಳಕು ತುಂಬಿದ ಮೈ, ಕೊಳಕು ತುಂಬಿದ ಮನಸ್ಸಿಗೆ ಎಂದೂ ಭಗವಂತ ಗೋಚರಿಸುವುದಿಲ್ಲ. ನಮ್ಮ ದೇಹ-ಮನಸ್ಸು-ಮನೆ ಎಲ್ಲವೂ ಸ್ವಚ್ಛವಾಗಿರಬೇಕು. ನಾವು ನಮ್ಮ ತಲೆ ಮೇಲೆ ಒಂದು ಕೊಡ ನೀರು ಹಾಕಿ ಕೊಂಡಾಗ ಮಡಿಯಾಗುವುದಿಲ್ಲ . ಭಗವಂತನ ನೆನಪಿಗೆ ಪೋಷಕವಾದ ನಡೆ "ಮಡಿ". ನಿಜವಾದ ಮಡಿ ಎಂದರೆ ಏನೆಂದು ಈಗ ನೋಡೋಣ.
||ಅಥಃ ಪ್ರಾತಃ ಸಂಧ್ಯಾ|| ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ |ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
ಅಂದರೆ ನೀನು ಯಾವುದೇ ಸ್ಥಿತಿಯಲ್ಲಿರು, ಕೆಂದಾವರೆಯ ಅರಳಿದ ಎಸಳಿನಂತೆ, ನಸುಗೆಂಪಾಗಿ, ಪ್ರೀತಿಯ ಕಾರುಣ್ಯದ  ರಸಪೂರವನ್ನು ಹರಿಸುತ್ತಿರುವ,  ಅರಳುಗಣ್ಣಿನ ಭಗವಂತನನ್ನು ನೆನೆಸಿಕೂ. ಆತನ ರಸಧಾರೆ ನಿನ್ನ ಮೇಲೆ ಬೀಳುತ್ತಿದೆ ಎಂದು ಯೋಚಿಸು. ಆಗ ನೀನು ಮಡಿಯಾಗುತ್ತೀಯ. ಈ ಸ್ಥಿತಿಯಲ್ಲಿ  ನೀನು ಮೈಲಿಗೆಯಾಗಲು ಸಾಧ್ಯವಿಲ್ಲ. ನಿನ್ನನ್ನು ಮುಟ್ಟಿದವರೂ ಕೂಡ ನಿನ್ನಿಂದ ಮಡಿಯಾಗುತ್ತಾರೆ!  ನೀನು ಧರಿಸಿರುವ   ಬಟ್ಟೆಯಾಗಲಿ, ಇತರ ಯಾವುದೇ ವಸ್ತು ನಿನ್ನನ್ನು ಮೈಲಿಗೆ ಮಾಡಲಾರದು.  ಭಗವಂತನ ಚಿಂತನೆ, ಭಗವಂತನ ಪ್ರಜ್ಞೆಯನ್ನು ಜಾಗೃತಗೊಳಿಸುವ ನೆಡೆಯೇ 'ಮಡಿ'. ಭಗವಂತನಿಂದ ದೂರ ಸರಿಸುವ ಅಜ್ಞಾನವೇ ಮೈಲಿಗೆ. ಇತರರನ್ನು ಮೈತ್ರಿಭಾವದಿಂದ ಕಾಣುವುದು. ಸಕಲವೂ ಪರಮಾತ್ಮನಸ್ವರೂಪವೇ ಎಂದು ಭಾವಿಸುವುದು ಶೌಚ. ಈ ಮನಃಸ್ಥಿತಿಯಿಂದ ನಿಜವಾದ ಸುಖ ದೊರೆಯುವುದು.
೨) ತಪಃ : ನಮ್ಮ ದೇಹ ಮತ್ತು ಮನಸ್ಸಿನ ಖಯಾಲಿಗಳಿಗೆ ಒಳಗಾಗದೆ, ನಮ್ಮ ಇಷ್ಟಕ್ಕೆ ತಕ್ಕಂತೆ  ನಮ್ಮ ದೇಹ ಮನಸ್ಸನ್ನು ಮಣಿಸುವ ಕ್ರಿಯೆ ತಪಸ್ಸು. ಇವುಗಳ ಆಚರಣೆಯಿಂದ ಅಶುದ್ಧಿ ನಾಶವಾಗಿ ಅಂತಃಕರಣವು ಶುದ್ಧವಾಗುತ್ತದೆ.
೩) ತೃಪ್ತಿಃ : ಇದ್ದದರಲ್ಲಿ ತೃಪ್ತಿಪಟ್ಟು, ಹರಿಯ ಚರಣದ ಅರಿವಿನಿಂದ ನಮ್ಮ ಪಾಲಿನ ಕರ್ಮ ನಾವು ಮಾಡುವುದು.
೪) ಸ್ವಾಧ್ಯಾಯ: ಅಂದರೆ ನಿರಂತರ ಅಧ್ಯಯನ. ವೈದಿಕಮಂತ್ರಗಳ ಅರ್ಥಾನುಸಂಧಾನದಿಂದ ಸಿದ್ಧಿ ದೊರೆಯುತ್ತದೆ. ಮಂತ್ರರಹಸ್ಯ ಅರಿಯಲು ಸದ್ಗುರುವಿನ ಆಶ್ರಯ ಅವಶ್ಯ. (ಸ್ವಾಧ್ಯಾಯಾದಿಷ್ಟದೇವತಾ ಸಂಪ್ರಯೋಗಃ).
೫) ಪುರುಷಾರ್ಚನ: ಬದುಕಿನ ಪ್ರತಿಯೊಂದು ಕ್ರಿಯೆಯೂ ಭಗವಂತನ ಆರಾಧನೆ, ಹರಿಯ ಪೂಜೆ ಎನ್ನುವ ಎಚ್ಚರ, ಸಕಲಕ್ರಿಯಾದಿಗಳ ಫಲವನ್ನು ಅಪೇಕ್ಷಿಸದೇ ಈಶ್ವರನಲ್ಲಿ ಅರ್ಪಣೆ ಮಾಡುವುದು ಪುರುಷಾರ್ಚನ
"ಕಾಮತೋಕಾಮತೋವಾಪಿ ಯತ್ಕರೋಮಿ ಶುಭಾಶುಭಂ |
ತತ್ಸರ್ವಂ ತ್ವಯಿ ವಿನ್ಯಸ್ಯ ತ್ವತ್ಪ್ರಯುಕ್ತಃ ಕರೋಮ್ಯಹಂ ||"
ಅಂದರೆ, ಆಸೆಯಿಂದಲೋ ಆಥವಾ ಆಸೆ ಇಲ್ಲದೆಯೋ ಯಾವ ಶುಭಾಶುಭ ಕರ್ಮಗಳನ್ನು ಮಾಡುತ್ತೇವೆಯೋ ಅವೆಲ್ಲವನ್ನೂ ಅವನಲ್ಲಿ ಅರ್ಪಿಸಿ ಅವನ ಪ್ರಯುಕ್ತವೇ ಅಂದರೆ ಭಗವಂತನಿಗಾಗಿಯೇ ನಾನು ಎಲ್ಲಾ  ಕರ್ಮಗಳನ್ನೂ ಮಾಡುತ್ತೇನೆ ಎಂದು ಈಶ್ವರನಲ್ಲಿ ಕಾಯಾ, ವಾಚಾ, ಮನಸಾ  ಅರ್ಪಣೆ ಮಾಡುವುದು.
ಈ  ರೀತಿ ಮೇಲಿನ ಐದು ನಿಯಮಗಳಿಂದ ತಿಳಿಯಲ್ಪಡುವವನು,  ಹಾಗೂ ನಮ್ಮ ಅಭಿವೃದ್ಧಿಗಾಗಿ ಈ ಐದು ನಿಯಮಗಳನ್ನು ನಿಯಮಿಸಿದವನು ನಿಯಮಃ

162) ಯಮಃ

ಯಮಃ  ಎಂದರೆ ಯಮನೊಳಗಿದ್ದು, ಪಾಪಿಗಳಿಗೆ ಶಿಕ್ಷೆ ಕೊಡುವವ, ಎಲ್ಲರನ್ನು ನಿಯಂತ್ರಿಸುವವ ಎನ್ನುವುದು ಸಾಮಾನ್ಯ ಅರ್ಥ. ಯಮಃ  ಅನ್ನುವುದಕ್ಕೆ "ಯಮಗಳಿಂದ ವೇದ್ಯನಾದವನು" ಎನ್ನುವ ವಿಶೇಷ ಅರ್ಥವಿದೆ. ನಮ್ಮ ಅಭಿವೃದ್ಧಿಗೊಸ್ಕರ, ಸಮಾಜದ ಸ್ವಾಸ್ಥ್ಯಕ್ಕೋಸ್ಕರ  ನಾವು ಬಿಡಬೇಕಾದ ಐದು ದುರ್ಗುಣಗಳನ್ನು ಯಮಗಳು ಎನ್ನುತ್ತಾರೆ. ಅವುಗಳೆಂದರೆ ೧) ಹಿಂಸೆ , ೨) ಸುಳ್ಳು ಹೇಳುವುದು , ೩) ಕಳ್ಳತನ ಮಾಡುವುದು , ೪) ಅನಗತ್ಯ ಇನ್ನೊಬ್ಬರ ಮುಂದೆ ಕೈ ಚಾಚುವುದು ಮತ್ತು ೫) ಅತಿ ಕಾಮುಕತೆ.
ಸಮಾಜಜೀವಿಯಾಗಿ  ನಾವು ಅನುಸರಿಸಬೇಕಾದ ಐದು ನೀತಿ ಸಂಹಿತೆಗಳೆಂದರೆ: ೧) ಅಹಿಂಸಾ, ೨) ಸತ್ಯ, ೩) ಅಸ್ತೇಯ, ೪) ಬ್ರಹ್ಮಚರ್ಯ ಮತ್ತು ೫) ಅಪರಿಗ್ರಹ.
೧) ಅಹಿಂಸ: ಇನ್ನೊಬ್ಬರಿಗೆ ನೋವುಂಟುಮಾಡದಂತೆ ಬದುಕುವುದು.
೨) ಸತ್ಯ : ಸ್ವಾರ್ಥಕ್ಕೋಸ್ಕರ ಇನ್ನೊಬ್ಬರಿಗೆ ಸುಳ್ಳು ಹೇಳದೇ, ಪ್ರಾಮಾಣಿಕನಾಗಿ ಬದುಕುವುದು. ಆದರೆ ಇನ್ನೊಬ್ಬರ ಮನ ನೋಯಿಸುವ  ಸತ್ಯ ನುಡಿಯಬಾರದು
೩) ಅಸ್ತೇಯ : ಕಳ್ಳತನ ಮಾಡದೇ ಇರುವುದು ನಮ್ಮ ನೀತಿಯಾಗಿರಬೇಕು.
೪) ಬ್ರಹ್ಮಚರ್ಯ: ಅತಿ ಕಾಮುಕನಾಗದೇ ಬದುಕುವುದು.  ಇಲ್ಲಿ ಬ್ರಹ್ಮಚರ್ಯ ಎಂದರೆ ಮಧುವೆಯಾಗದೇ ಇರುವುದು ಎನ್ನುವ ಅರ್ಥವಲ್ಲ. ಸಂಸಾರಿಯಾಗಿದ್ದು ಕೂಡಾ  ಬ್ರಹ್ಮಚರ್ಯ ಪಾಲಿಸಬಹುದು. ಆದರೆ ಕಾಮುಕನಾಗಿರಬಾರದು. 
೫) ಅಪರಿಗ್ರಹ : ಎಂದರೆ ಈ ಜಡ ಶರೀರಕ್ಕೆ ಬೇಕಾದ ಭೋಗವಸ್ತುಗಳನ್ನು ಬಯಸದಿರುವುದು. ನಮಗೆ ಬೇಕಾದ್ದನ್ನು ಇನ್ನೊಬ್ಬರಲ್ಲಿ ಒತ್ತಾಯ ಪೂರ್ವಕವಾಗಿ ಬಯಸದೇ, ಇನ್ನೊಬ್ಬರು ಕೊಟ್ಟಿದ್ದರಲ್ಲಿ ತೃಪ್ತಿ ಪಡುವುದು.
ಈ ರೀತಿ ಐದು ಯಮಗಳೆಂಬ ನೀತಿ ಸಂಹಿತೆಯನ್ನು ಸೃಷ್ಟಿಸಿದ ಭಗವಂತ ಯಮಃ

ಮುಂದುವರೆಯುವುದು....

No comments:

Post a Comment