ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಅಶೋಕಸ್ತಾರಣಸ್ತಾರಃ ಶೂರಃ ಶೌರಿರ್ಜನೇಶ್ವರಃ |
ಅನಕೂಲಃ ಶತಾವರ್ತಃ ಪದ್ಮೀಪದ್ಮನಿಭೇಕ್ಷಣಃ || 37 ||
೩೩೮) ಅಶೋಕಃ
ಅ+ಶೋಕ; ಅಂದರೆ ದುಃಖವಿಲ್ಲದವನು ಹಾಗೂ ದುಃಖವಿಲ್ಲದಂತೆ ಮಾಡುವವನು. ಭಗವಂತನಿಗೆ ಸೃಷ್ಟಿಯಲ್ಲಾಗಲಿ-ಸಂಹಾರದಲ್ಲಾಗಲಿ ಹುಟ್ಟಿನಲ್ಲಾಗಲಿ-ಸಾವಿನಲ್ಲಾಗಲಿ ಯಾವುದೇ ರೀತಿಯ ಮೋಹವಿಲ್ಲ; ಆತ ಎಲ್ಲಾ ಮೋಹ ಪಾಶಗಳಿಂದ ಮುಕ್ತನಾದ ವಿರಕ್ತ. ರೈತ ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸಿ ಕೊನೆಗೆ ಹೇಗೆ ಕತ್ತರಿಸುತ್ತನೋ ಅದೇ ರೀತಿ ಭಗವಂತನ ಸೃಷ್ಟಿ ಹಾಗೂ ಸಂಹಾರ ಕ್ರಿಯೆ. ಇಲ್ಲಿ ದುಃಖಕ್ಕೆ ಎಡೆಯಿಲ್ಲ. ಒಂದು ಪುಟ್ಟ ಮಗು ಹುಟ್ಟು ಹಾಗೂ ಸಾವನ್ನು ಹೇಗೆ ಸಮನಾಗಿ ಕಾಣುತ್ತದೋ ಹಾಗೆ. ಈ ರೀತಿ ಶೋಕ ರಹಿತನಾದ ಭಗವಂತ ಅಶೋಕಃ.
೩೪೦) ತಾರಣಃ
ಭಗವಂತ ಈ ಸಂಸಾರದ ಬಂಧನದ ಕಡಲೆಂಬ ತಾಪತ್ರಯಗಳಿಂದ ನಮ್ಮನ್ನು ಪಾರುಮಾಡುವ ತಾರಣಃ.
೩೪೦) ತಾರಃ
ಸರ್ವ ತಾರಕವಾದ; ಬ್ರಹ್ಮಾದಿ ದೇವತೆಗಳು ತಮ್ಮ ಉದ್ದಾರಕ್ಕೊಸ್ಕರ ಜಪಿಸುವ 'ಓಂಕಾರ' ಪ್ರತಿಪಾದ್ಯನಾದ ಭಗವಂತ ತಾರಃ.
೩೪೧) ಶೂರಃ
ಈ ಜಗತ್ತಿನಲ್ಲಿ ಯಾರಲ್ಲಿ ಏನೇನು ಪರಾಕ್ರಮವಿದೆ, ಪೌರುಷವಿದೆ, ಅದೆಲ್ಲವೂ ಭಗವಂತನ ಕೊಡುಗೆ. ನಿಜವಾದ ಶೂರ ಭಗವಂತ. ಒಂದು ಶಕ್ತಿಯಾಗಿ ಭಗವಂತ ನಮ್ಮೊಳಗೆ ತುಂಬಿದರೆ ಮಾತ್ರ ಶತ್ರುಗಳನ್ನು ಗೆದೆಯುವ ಸಾಮರ್ಥ್ಯ ನಮಗೆ ಬರುತ್ತದೆ. 'ಶೂ' ಎಂದರೆ ಆನಂದವುಳ್ಳವರು ಅಥವಾ ಮುಕ್ತರು. ಮುಕ್ತರನ್ನು ಸ್ವೀಕರಿಸಿ ತನ್ನ ಬಳಿಯಲ್ಲಿರಿಕೊಂಡು ನಿತ್ಯಾನಂದವನ್ನು ಕೊಡುವ ಭಗವಂತ ಶೂರಃ.
೩೪೨) ಶೌರಿಃ
ವಾಸುದೇವನ ತಂದೆ ಶೂರಸೇನ; ಈ ವಂಶದಲ್ಲಿ ಅವತರಿಸಿದ ಭಗವಂತನನ್ನು ಶೌರಿ ಎನ್ನುತ್ತಾರೆ. ಶೌರಿ ಎಂದರೆ ಶೂರರಲ್ಲಿ ಇರುವವನು. ಗೀತೆಯಲ್ಲಿ ಹೇಳುವಂತೆ:
ಯದ್ಯದ್ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಮೇವ ವಾ
ತತ್ತದೇವಾವಗಚ್ಛ ತ್ವಂ ಮಮ ತೆಜೋಂಶಸಂಭವಂ
"ಎಲ್ಲಿ ಯಾರಲ್ಲಿ ವಿಶಿಷ್ಟ ಶಕ್ತಿಯಿದೆ ಆ ಶಕ್ತಿಯಲ್ಲಿ ನಾನೇ ಅಡಗಿದ್ದೇನೆ ; ನನ್ನ ತೇಜಸ್ಸಿನ ಕಿಡಿ ಆತನ ಶೌರ್ಯವಾಗಿ ಮೂಡಿಬರುತ್ತದೆ" ಎಂಬ ಕೃಷ್ಣನ ನುಡಿ ಆತನ ಈ ನಾಮವನ್ನು ನೆನಪಿಸುತ್ತದೆ. ಪುರಾಣದಲ್ಲಿ ಕಾಣುವ ಪ್ರತಿಯೊಬ್ಬ ಶೂರರ ಶೌರ್ಯಕ್ಕೆ ಮೂಲ ಕಾರಣ ಅವರೊಳಗೆ ಕುಳಿತ 'ಶೌರಿ' ನಾಮಕ ಭಗವಂತನ ವಿಭೂತಿ.
೩೪೩) ಜನೇಶ್ವರಃ
ಭಗವಂತ ಬರೀ ಶೂರರಲ್ಲಿ ಮಾತ್ರವಲ್ಲ ಈ ಜಗತ್ತಿನಲ್ಲಿ ಜನಿಸುವ ಎಲ್ಲಾ ಜೀವಜಾತದೊಳಗೆ ತುಂಬಿರುವ ಈಶ್ವರ (ನಿಯಾಮಕ ಶಕ್ತಿ). ಈ ಭೂಮಿಯಲ್ಲಿ ಜನಿಸುವ ಪ್ರತಿಯೊಂದು ವಸ್ತುವಿನೊಳಗೆ ಭಗವಂತ ನಿಯಾಮಕ ಶಕ್ತಿಯಾಗಿ ತುಂಬಿದ್ದಾನೆ. ಈ ಜಗತ್ತಿನಲ್ಲಿ ಹುಟ್ಟುವ ಒಂದು ಹುಲ್ಲು ಕಡ್ಡಿ ಕೂಡಾ ವ್ಯರ್ಥವಲ್ಲ, ಅದರಲ್ಲಿ ಭಗವಂತನ ವಿಭೂತಿಯಾದ ವಿಶಿಷ್ಟ ಶಕ್ತಿ ಅಡಗಿರುತ್ತದೆ.
ಉದಾಹರಣೆಗೆ :
(೧)ದರ್ಬೆ:
ಮೇಲ್ನೋಟಕ್ಕೆ ವ್ಯರ್ಥವಾಗಿ ಬೆಳೆಯುವ ಹುಲ್ಲು; ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಬೆಗಿದೆ. ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ದರ್ಬೆಯನ್ನು ಉಂಗುರವಾಗಿ ಧರಿಸುತ್ತಾರೆ ಹಾಗು ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ಇಡುತ್ತಾರೆ.
(೨)ಅಶ್ವತ್ಥ ಮರ:
ಮರಗಳಲ್ಲಿ ಅತ್ಯಂತ ಹೆಚ್ಚು ಆಮ್ಲಜನಕ ಕೊಡುವ ವೃಕ್ಷ ಅಶ್ವತ್ಥ. ಇದಕ್ಕಾಗಿ ಈ ಮರವನ್ನು ಸುತ್ತುವುದರಿಂದ ಸ್ತ್ರೀಯರ ಗರ್ಭಕೋಶ ಸ್ವಚ್ಛವಾಗಿ ತಾಯ್ತನದ ಭಾಗ್ಯ ಬರುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ ಹಾಗೂ ಇದು ನಿಜ.
(೩)ಮುಟ್ಟಿದರೆ ಮುನಿ ಗಿಡ:
ಯಾರಿಗೂ ಬೇಡವಾಗಿ ಬೆಳೆಯುವ ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ. ಈ ಗಿಡವನ್ನು (ಹೂ ರಹಿತ) ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಗಂಜಿಯಲ್ಲಿ ಹಾಕಿ ತಿಂದರೆ ಅಥವಾ ಕಷಾಯಮಾಡಿ ಕುಡಿದರೆ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಮೂಲವ್ಯಾಧಿ ಗುಣಮುಖವಾಗುತ್ತದೆ.
ಹೀಗೆ ಈ ಪ್ರಪಂಚದಲ್ಲಿ ಏನೇನು ಹುಟ್ಟಿದೆ ಅದರೊಳಗೆ ವಿಶಿಷ್ಟ ಶಕ್ತಿಯಾಗಿ ತುಂಬಿರುವ ನಿಯಾಮಕ ಶಕ್ತಿ ಭಗವಂತ ಜನೇಶ್ವರಃ.
೩೪೪) ಅನುಕೂಲಃ
ಭಗವಂತ ಎಂದೂ ಯಾರಿಗೂ ಪ್ರತಿಕೂಲ ಅಲ್ಲ. ನಾವು ಕೆಲವೊಮ್ಮೆ ಹೇಳುವುದಿದೆ "ಜೀವನದಲ್ಲಿ ನಾನು ಎಂದೂ ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ, ಆದರೆ ಭಗವಂತ ನನಗೆ ಇಂತಹ ಕಷ್ಟ ಕೊಟ್ಟ; ಅವನು ಅನುಗ್ರಹಿಸಲಿಲ್ಲ; ಆತನನ್ನು ಪೂಜಿಸುವುದು ವ್ಯರ್ಥ.." ಇತ್ಯಾದಿ. ಆದರೆ ನಮಗೆ ಪ್ರತಿಕೂಲ ದೇವರಲ್ಲ, ನಾವು ನಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮ! ವೇದದಲ್ಲಿ ಭಗವಂತನನ್ನು "ಅಗ್ನಿಮೀಳೇ ಪುರೋಹಿತಂ" ಎನ್ನುತ್ತಾರೆ. ಇಲ್ಲಿ ಪುರೋಹಿತಂ ಎಂದರೆ ಮೊದಲೇ ನಮ್ಮ ಹಿತದ ದಾರಿಯನ್ನು ತಿಳಿದು, ಅದಕ್ಕೆ ತಕ್ಕಂತೆ ನಮ್ಮನ್ನು ನಡೆಸುವ ಶಕ್ತಿ. ಭಗವಂತನಿಗೆ ಯಾರ ಮೇಲೂ ದ್ವೇಷವಿಲ್ಲ, ಅವರವರ ಜೀವ ಸ್ವರೂಪಕ್ಕೆ ಸಂಬಂಧಪಟ್ಟ ಯೋಗ್ಯತೆ ಏನಿದೆ ಅದಕ್ಕೆ ತಕ್ಕಂತೆ ಕ್ರಿಯೆ ಏನಾಗುತ್ತದೋ ಅದನ್ನು ಮಾಡಿಸುತ್ತಾನೆ. ಎಷ್ಟೋ ಸಲ ನಮಗೆ ಜೀವನದಲ್ಲಿ ಕಷ್ಟಬಂದಾಗ, ಹಿಡಿದ ಕಾರ್ಯ ವಿಫಲವಾದಾಗ, "ಭಗವಂತ ನಮಗೆ ಕೆಟ್ಟದ್ದನ್ನು ಮಾಡಿದ" ಎಂದುಕೊಳ್ಳುತ್ತೇವೆ. ಆದರೆ ನಮ್ಮ ಕಷ್ಟದ ಹಿಂದೆ ನಮ್ಮ ಉದ್ಧಾರದ ಬೀಜವಿರುತ್ತದೆ ಎನ್ನುವ ವಿಷಯ ನಮಗೆ ತಿಳಿದಿರುವುದಿಲ್ಲ. ಶಾಲೆಯಲ್ಲಿ ಅದ್ಯಾಪಕರು ವಿದ್ಯಾರ್ಥಿಗೆ ಕೊಡುವ ಶಿಕ್ಷೆ, ತಂದೆ ತಾಯಿ ಮಗುವಿಗೆ ಕೊಡುವ ಶಿಕ್ಷೆ - ಮಗುವಿನ ಉದ್ದಾರಕ್ಕೆ ಹೊರತು ಇನ್ಯಾವುದೋ ದ್ವೇಷದಿಂದಲ್ಲ. ಭಗವಂತ ಕೊಡುವ ಕಷ್ಟದಲ್ಲಿ ನಮ್ಮನ್ನು ತಿದ್ದುವ ಕಾರುಣ್ಯವಿದೆ ಹಾಗು ನಮ್ಮ ಉದ್ಧಾರದ ರಹಸ್ಯ ಅಡಗಿದೆ. ಅವನು ಎಂದೂ ಪ್ರತಿಕೂಲ ಅಲ್ಲ, ಆತ ಎಂದೆಂದೂ ಎಲ್ಲರಿಗೂ ಅನುಕೂಲ.
೩೪೫) ಶತಾವರ್ತಃ
ಇಲ್ಲಿ ಆವರ್ತ ಎಂದರೆ ಅವತರಣ. ಭಗವಂತ ಶತಾವರ್ತ, ಅಂದರೆ ನೂರಾರು ಬಾರಿ ನಮಗಾಗಿ ಭೂಮಿಯಲ್ಲಿ ಇಳಿದು ಬಂದವ. ರಾಮನಾಗಿ, ಕೃಷ್ಣನಾಗಿ, ಬುದ್ಧನಾಗಿ, ಪರಶುರಾಮನಾಗಿ, ವಾಮನನಾಗಿ, ನರಸಿಂಹನಾಗಿ, ವರಾಹನಾಗಿ, ಮತ್ಸ್ಯನಾಗಿ, ಕೂರ್ಮನಾಗಿ, ಕಪಿಲನಾಗಿ, ದತ್ತಾತ್ರಯನಾಗಿ, ವ್ಯಾಸನಾಗಿ, ಹೀಗೆ ನೂರಾರು ಅವತಾರದಲ್ಲಿ ಭೂಮಿಗೆ ಇಳಿದು ಬಂದವ. ಕೇವಲ ರಾವಣನನ್ನು ಕೊಲ್ಲಲು ಭಗವಂತ ಅವತಾರವೆತ್ತಬೇಕಿರಲಿಲ್ಲ. ಆತನ ಅವತಾರದ ಹಿಂದೆ ಅನೇಕ ರಹಸ್ಯವಡಗಿದೆ. ನಾವು ಆತನನ್ನು ನೋಡುವಷ್ಟು ಎತ್ತರಕ್ಕೆ ಏರಲು ಆಗದಿದ್ದಾಗ ಆತ ಸ್ವಯಂ ಭೂಮಿ ಮೇಲೆ ಅವತಾರವೆತ್ತುತ್ತಾನೆ ಅಥವಾ ಸಿದ್ಧ ಜ್ಞಾನಿಗಳನ್ನು ನಮ್ಮ ಉದ್ದಾರಕ್ಕಾಗಿ ಕಳುಹಿಸುತ್ತಾನೆ. ಇಂತಹ ಭಗವಂತನ ವರ್ತನೆ ಅನೇಕ ಹಾಗೂ ತಿಳಿದು ಕೊಳ್ಳುವುದು ಕಷ್ಟ. ಭಗವಂತನ ವರ್ತನೆಯನ್ನು ಸಾಮಾನ್ಯ ಮನುಷ್ಯನೊಂದಿಗೆ ಹೋಲಿಸಲಾಗದು. ಆತನ ವರ್ತನೆ ಹಿಂದೆ ಒಂದು ಮಹತ್ತಾದ ಸಂದೇಶವಿರುತ್ತದೆ. ಹೀಗೆ ನೂರಾರು ಬಾರಿ ಅವತರಿಸುವ, ವಿಶಿಷ್ಟವಾದ ವರ್ತನೆಯುಳ್ಳ ಹಾಗೂ ಸಂಸಾರದಲ್ಲಿರುವ ಲೆಕ್ಕವಿಲ್ಲದಷ್ಟು ಸುಳಿಯನ್ನು ನಿಯಂತ್ರಿಸುವ ಭಗವಂತ ಶತಾವರ್ತಃ
೩೪೬) ಪದ್ಮೀ
ಪದ್ಮೀ ಎಂದರೆ ತಾವರೆಯನ್ನು ಕೈಯಲ್ಲಿ ಹಿಡಿದವನು. ನಾವು ಸಹಸ್ರಬಾಹು ಭಗವಂತನನ್ನು ನಾಲ್ಕು ಕೈಗಳ ಮೂರ್ತಿಯಾಗಿ ಉಪಾಸನೆ ಮಾಡುತ್ತೇವೆ. ಈ ನಾಲ್ಕು ಕೈಗಳು ನಾಲ್ಕು ಪುರುಷಾರ್ಥದ ಸಂಕೇತ. ನಾಲ್ಕು ಕೈಗಳಲ್ಲಿ ಹಿಡಿದಿರುವ ಚಕ್ರ, ಶಂಖ, ಗಧಾ ಹಾಗು ಪದ್ಮ ಕ್ರಮವಾಗಿ ಧರ್ಮ, ಅರ್ಥ, ಕಾಮ ಹಾಗು ಮೋಕ್ಷದ ಸಂಕೇತ. ಈ ಕಾರಣಕ್ಕಾಗಿ ಮೋಕ್ಷಪ್ರದನಾದ ಭಗವಂತನನ್ನು ಪದ್ಮೀ ಎಂದು ಸಂಭೋದಿಸುತ್ತಾರೆ. ಇಷ್ಟೇ ಅಲ್ಲದೆ ಜಗತ್ತಿನ ಮೂಲ ಪ್ರಕೃತಿಯಾದ ಲಕ್ಷ್ಮಿಯನ್ನು ಪದ್ಮಾ ಎಂದೂ ಹಾಗೂ ಚತುರ್ಮುಖ ಬ್ರಹ್ಮನನ್ನು ಕೂಡಾ ಪದ್ಮಾ ಎಂದು ಕರೆಯುತ್ತಾರೆ. ಲಕ್ಷ್ಮೀಪತಿಯಾದ ಭಗವಂತ ಪದ್ಮೀ; ಜಗತ್ತಿನ ಮೂಲಸೃಷ್ಟನಾದ ಚತುರ್ಮುಖನ ತಂದೆ ಪದ್ಮೀ. ಈ ರೀತಿ ಮೊಕ್ಷಪ್ರದನಾಗಿ ಕೈಯಲ್ಲಿ ತಾವರೆ ಹಿಡಿದಿರುವ, ಜಗತ್ತಿನ ಮೂಲಶಕ್ತಿಯಾದ ಪ್ರಕೃತಿಯ ಸ್ವಾಮಿ ಹಾಗೂ ಚತುರ್ಮುಖನ ತಂದೆ ಭಗವಂತ ಪದ್ಮೀ.
೩೪೭) ಪದ್ಮನಿಭೇಕ್ಷಣಃ
ಪದ್ಮನಿಭೇಕ್ಷಣ ಎಂದರೆ ತಾವರೆಯ ಎಸಳಿನಂತೆ ಕಣ್ಣುಳ್ಳವ. ಇಲ್ಲಿ ತಾವರೆಯ ಎಸಳು 'ಅನುಗ್ರಹವನ್ನು' ಸಂಕೇತಿಸುವ ಉಪಮಾನ. 'ದೇವರು ಕಣ್ಣುಬಿಟ್ಟ' ಎಂದರೆ ಭಗವಂತ ಅನುಗ್ರಹಿಸಿದ ಎಂದರ್ಥ. ತಾವರೆಯ ಎಸಳು ಏನನ್ನೂ ಅಂಟಿಸಿಕೊಳ್ಳುವುದಿಲ್ಲ; ಅದೇ ರೀತಿ ಏನನ್ನೂ ಅಂಟಿಸಿಕೊಳ್ಳದ ನಿರ್ಲಿಪ್ತ ಭಗವಂತ ಪದ್ಮನಿಭೇಕ್ಷಣಃ
ಮುಂದುವರೆಯುವುದು
No comments:
Post a Comment