ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿಃ ಶುಚಿಶ್ರವಾಃ |
ಅಮೃತಃ ಶಾಶ್ವತಃ ಸ್ಥಾಣುರ್ವರಾರೋಹೋ ಮಹಾತಪಾಃ || 13 ||
114) ರುದ್ರಃ
ರುದ್ರ ಎಂದರೆ ಮೇಲ್ನೋಟಕ್ಕೆ ದುಃಖ ಕೊಡುವವನು, ಸುಡುವವನು ಎನ್ನುವ ಅರ್ಥವನ್ನು ಕೊಡುತ್ತದೆ.
ವೇದಗಳಲ್ಲಿರುವ ರುದ್ರಸೂಕ್ತಗಳಿಗೆ ಸಾಯಣರು ಅರ್ಥ ಬರೆಯುವಾಗ, ರುದ್ರ ಎಂದರೆ ಅಗ್ನಿ ಎಂದು ಬರೆಯುತ್ತಾರೆ. ಮುಟ್ಟಿದರೆ ಕಣ್ಣೀರು ಬರುವುದು ಪಂಚಭೂತಗಳಲ್ಲಿ ಅಗ್ನಿಯಿಂದ ಮಾತ್ರ. ಆದ್ದರಿಂದ ಅಗ್ನಿ ಕೂಡ ರುದ್ರ. ಆದರೆ ಭಗವಂತ ಏಕೆ ದುಃಖ ಕೊಡುತ್ತಾನೆ? ಭಗವಂತ ದುಃಖ ಕೊಡುವುದು ಪಾಪಿಗಳಿಗೆ ಮಾತ್ರ. ದುಃಖ ಕೊಡುವ ಉದ್ದೇಶ ಶಿಕ್ಷಣ.
ಇನ್ನು ಈ ಪದವನ್ನು ಒಡೆದು ನೋಡಿದಾಗ ರುಕ್+ದ್ರಾ, ಇಲ್ಲಿ 'ರುಕ್' ಎಂದರೆ ಭವರೋಗ, ಹಾಗೂ 'ದ್ರಾ' ಎಂದರೆ ನಾಶಕ ಅಥವಾ ಪಾರುಮಾಡುವವನು ಎಂದರ್ಥ . ಆದ್ದರಿಂದ ರುದ್ರ ಎಂದರೆ ಭವರೋಗ ನಾಶಕ. ಈ ನಾಮವನ್ನು ನಾವು ರುತ್+ದ್ರಾ ಎಂದೂ ಒಡೆದು ಅರ್ಥೈಸಬಹುದು. ಇಲ್ಲಿ ರುತ್ ಎಂದರೆ ದುಃಖ. ಆದ್ದರಿಂದ ರುದ್ರ ಅಂದರ ದುಃಖನಾಶಕ.
115) ಬಹುಶಿರಾಃ
‘ಸಹಸ್ರ ಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ ಎಂದು ಭಗವಂತನನ್ನು ಪುರುಷಸೂಕ್ತದಲ್ಲಿ ವರ್ಣಿಸಿದ್ದಾರೆ. ಇಲ್ಲಿ ಬಹುಶಿರ ಎಂದರೆ ಸಹಸ್ರ-ಸಹಸ್ರ ಶಿರಸ್ಸನ್ನು ಹೊಂದಿರುವವನು ಎಂದರ್ಥ. ಈ ಹಿಂದೆ ಹೇಳಿದಂತೆ ಭಗವಂತ ಬಿಂಬ ರೂಪಿಯಾಗಿ ಪ್ರತಿಯೊಂದೂ ಜೀವರಲ್ಲಿ ತುಂಬಿದ್ದಾನೆ. ಆದ್ದರಿಂದ ಆತ ಬಹುಶಿರಾ.
ತಲೆಯನ್ನು ಐದು ಶ್ರೀಗಳು (ಚಕ್ಷು-ಕಣ್ಣು, ಶ್ರೋತ್ರ-ಕಿವಿ, ಮನಃ-ಮನಸ್ಸು , ವಾಕ್-ಮಾತು, ಪ್ರಾಣ-ಉಸಿರು) ಆಶ್ರಿಸಿರುವುದರಿಂದ ಅದನ್ನು ಶಿರಸ್ಸು ಎನ್ನುತ್ತಾರೆ. ಭಗವಂತ ಸರ್ವಾಶ್ರಯದಾತ ಆದ್ದರಿಂದ ಆತ ಬಹುಶಿರಾ.
116) ಬಭ್ರುಃ
ಈ ನಾಮ ಭಗವಂತನ ಚಿದಾನಂದ ಸ್ವರೂಪವನ್ನು ಹೇಳುತ್ತದೆ. ಭಗವಂತ ಉದಿಸುವ ಸೂರ್ಯನಂತೆ ನಸುಗೆಂಪು ಬಣ್ಣದವನು, ಆತ ನೀಲಮೇಘಶ್ಯಾಮ. ಸಾಮಾನ್ಯವಾಗಿ ದೇವಸ್ತಾನಗಳಲ್ಲಿ ಮೂರ್ತಿ ಕಪ್ಪಗಿದ್ದು (ನೀಲ), ಪ್ರಭಾವಳಿ ಚಿನ್ನದಿಂದ ಮಾಡಿರುತ್ತಾರೆ. ಇಲ್ಲಿ ನೀಲ ಅಘಾದತೆಯನ್ನು, ಅನಂತತೆಯನ್ನು ಸೂಚಿಸುತ್ತದೆ. ನಸುಗೆಂಪು ಜ್ಞಾನಾನಂದದ ಸಂಕೇತ. ಬಭ್ರು ಎನ್ನುವುದು ಬಲಸ್ವರೂಪ(ಬ), ಪೂರ್ಣಕಾಮ(ಭ್ರು-ಸರ್ವ ಕಾಮನೆಗಳನ್ನು ಈಡೇರಿಸುವವನು), ಎನ್ನುವ ಅರ್ಥವನ್ನೂ ಕೊಡುತ್ತದೆ. ಇಂತಹ ಅಗಾಧ, ಅನಂತ, ಜ್ಞಾನಾನಂದಮಯ, ಬಲಸ್ವರೂಪ ಮತ್ತು ಪೂರ್ಣಕಾಮನಾದ ಭಗವಂತ ಬಭ್ರು.
117) ವಿಶ್ವಯೋನಿಃ
ಸಂಸ್ಕೃತದಲ್ಲಿ ಯೋನಿ ಎಂದರೆ ಕಾರಣ ಕರ್ತ. ಇಡೀ ವಿಶ್ವಕ್ಕೆ ಕಾರಣಪುರುಷನಾದ ಭಗವಂತ ವಿಶ್ವಯೋನಿ.
118) ಶುಚಿಶ್ರವಾಃ
ಶ್ರವಸ್ಸು ಎಂದರೆ ಕೀರ್ತಿ. ಭಗವಂತ ಪುಣ್ಯಕೀರ್ತಿ. ಪವಿತ್ರವಾದ ಕೀರ್ತಿಯುಳ್ಳ ಭಗವಂತನನ್ನು ಎಲ್ಲರೂ ಕೀರ್ತನೆ ಮಾಡುತ್ತಾರೆ. ಭಗವಂತನ ಗುಣ ಕೀರ್ತನ ಶ್ರವಣದಿಂದ ನಾವು ಪವಿತ್ರವಾಗುತ್ತೇವೆ. ಇಂತಹ ಪವಿತ್ರವಾದ ಹಾಗೂ ನಮ್ಮನ್ನು ಪವಿತ್ರ ಮಾಡುವ ಭಗವಂತ ಶುಚಿಶ್ರವಾ.
119 ) ಅಮೃತಃ
ಅಮೃತಃ ಅಂದಾಗ ನಮಗೆ ತಕ್ಷಣ ಹೊಳೆಯುವುದು 'ಎಂದೆಂದೂ ಸಾವಿಲ್ಲದವರು' ಎನ್ನುವ ಅರ್ಥ. ಸಾಮಾನ್ಯವಾಗಿ ಸಂಸ್ಕೃತದಲ್ಲಿ ಮನುಷ್ಯರನ್ನು ಮರ್ತ್ಯರು ಎಂದು ಕರೆಯುತ್ತಾರೆ. ಅಂದರೆ ಒಂದು ದಿನ ಸಾಯುವವರು ಎಂದರ್ಥ. ಈ ಸಾವಿನಲ್ಲಿ ನಾಲ್ಕು ವಿಧ.
೧. ಸ್ವರೂಪ ನಾಶ. ಅಂದರೆ ಮಣ್ಣಿನಿಂದ ಮಾಡಿದ ಮಡಿಕೆ ಕೈಜಾರಿ ಬಿದ್ದಾಗ ಅದರ ಸ್ವರೂಪವಾದ ಆಕಾರ ನಾಶವಾಗುತ್ತದೆ.
೨. ದೇಹ ನಾಶ. ಅಂದರೆ ನಮ್ಮ ದೇಹದಿಂದ ಪ್ರಾಣ ಪಕ್ಷಿ ಹಾರಿ ಹೋದಮೇಲೆ ನಮ್ಮ ದೇಹ ನಾಶವಾಗುತ್ತದೆ.
೩. ದುಃಖ ಪ್ರಾಪ್ತಿ. ದುಃಖ ಕೂಡಾ ಒಂದು ರೀತಿಯ ಸಾವು.
೪. ಅಪೂರ್ಣತೆ (Imperfection is death)
ಆದರೆ ಭಗವಂತ ಈ ನಾಲ್ಕು ರೀತಿಯ ನಾಶವಿಲ್ಲದ ನಿತ್ಯ ಸ್ವರೂಪ. ಆದ್ದರಿಂದ ಆತ ಅಮೃತ. ಉಪನಿಷತ್ತುಗಳು ಹೇಳುವಂತೆ ಭಗವಂತನಿಗೆ ಮೂರು ಸ್ಥಾನಗಳಿವೆ. ಅಮೃತ, ಕ್ಷೇಮ ಹಾಗೂ ಅಭಯ. ಇಂತಹ ಅಮೃತ ಸ್ಥಾನದಲ್ಲಿರುವ ಭಗವಂತ ಅಮೃತಃ.
ದೇವತೆಗಳ ಆಯಸ್ಸು ಅತೀ ದೀರ್ಘ, ಅದರಲ್ಲೂ ವಾಯುದೇವರ ಮತ್ತು ಚತುರ್ಮುಖನ ಆಯಸ್ಸು ಮತ್ತೂ ದೀರ್ಘ. ಈ ರೀತಿ ಪ್ರಾಣದೇವರಿಗೆ, ಚತುರ್ಮುಖನಿಗೆ, ದೇವತೆಗಳಿಗೆ, ಮುಕ್ತಿ ಪಡೆದ ಜೀವರಿಗೆ, ಅಮರತ್ವವನ್ನು ಕರುಣಿಸಿದ, ಲಕ್ಷ್ಮೀ ಪತಿ ಭಗವಂತ ಅಮೃತಃ.
120) ಶಾಶ್ವತಸ್ಥಾಣು
ಶಾಶ್ವತ ಎಂದರೆ ಎಂದೆಂದೂ ಬದಲಾವಣೆ ಹೊಂದದೆ, ಒಂದೇ ರೀತಿಯಾಗಿ ಇರುವವನು ಎಂದರ್ಥ. ಸ್ಥಾಣು ಎಂದರೆ ಸ್ಥಿರ. ನಮಗೆ ಬಾಲ್ಯ, ಯವ್ವನ, ಪ್ರೌಢ ಹಾಗೂ ವೃದ್ದಾಪ್ಯ, ಹೀಗೆ ಒಂದು ರೂಪದಲ್ಲಿ ಅನೇಕ ಬದಲಾವಣೆಗಳಿವೆ. ಆದರೆ ಭಗವಂತ ಬಿಂಬ ರೂಪನಾಗಿ ಎಲ್ಲರ ಒಳಗೂ-ಹೊರಗೂ ತುಂಬಿದ್ದರೂ ಸಹ, ಆತನಿಗೆ ಯಾವುದೇ ತರಹದ ವಿಕಾರವಿಲ್ಲ. ಅವನು ಶಾಶ್ವತ ಮತ್ತು ಸ್ಥಿರ(ಸ್ಥಾಣು).
121) ವರಾರೋಹಃ
ಯಾರು ತನ್ನ ಸಾಧನೆ ಮೂಲಕ ಮೋಕ್ಷಕ್ಕೆ ಅರ್ಹರಾಗುತ್ತಾರೋ, ಅಂತವರನ್ನು ಮೇಲಕ್ಕೆತ್ತುವವ ವರಾರೋಹ. ವರಂ-ಆರೋಹತಿ, ಅಂದರೆ ಯಾರು ಯಾವ ಪದವಿಗೆ ಅರ್ಹರೋ, ಅಂತವರನ್ನು ಆ ಪದವಿಗೇರಿಸುವವ. ಬ್ರಹ್ಮನಿಗೆ ಸತ್ಯಲೋಕದ ಪದವಿ, ಇಂದ್ರನಿಗೆ ದೇವ ಲೋಕದ ಪದವಿಯನ್ನು ಕರುಣಿಸಿ, ಸ್ವತಃ ತಾನು ಲಕ್ಷ್ಮಿ ಸಮೇತನಾಗಿ ನಿತ್ಯಲೋಕದ ಅಧಿಪತಿ ಎನಿಸಿರುವ ಭಗವಂತ ವರಾರೋಹ.
122) ಮಹಾತಪಾಃ
ಯಾವುದೇ ವಿಷಯವನ್ನು ಆಳವಾಗಿ ಚಿಂತಿಸಿ ತಿಳಿಯುವುದು ತಪಸ್ಸು. ಪ್ರತಿಯೊಬ್ಬರ ಆವಿಷ್ಕಾರ ಅವರ ತಪಸ್ಸಿನ ಫಲ. ತಪಸ್ಸಿಗೆ ವೇಷ ಮುಖ್ಯವಲ್ಲ, ಆದರೆ ಆಳವಾದ ಚಿಂತನೆ ಅತ್ಯಗತ್ಯ. ಕಾಮ-ಕ್ರೋಧಗಳನ್ನು ಗೆದ್ದು, ಪ್ರಶಾಂತಚಿತ್ತದಿಂದ, ವಿಷಯವನ್ನು ಆಳವಾದ ಚಿಂತನೆ ಮೂಲಕ ತಿಳಿದುಕೊಳ್ಳುವುದು ನಿಜವಾದ ತಪಸ್ಸು. ಸಾಮಾನ್ಯವಾಗಿ ಕಾಮವನ್ನು ಗೆಲ್ಲುವುದು ಸುಲಭ. ಆದರೆ ಕ್ರೋಧವನ್ನು ಗೆಲ್ಲುವುದು ತುಂಬಾ ಕಷ್ಟ. ನಮಗೆ ಕೋಪ ಬರಲು ಕಾರಣ ನಮ್ಮಲ್ಲಿ ಹುದುಗಿರುವ ಅಪೇಕ್ಷೆ, ಕಳೆದು ಕೊಳ್ಳುತ್ತೇನೆ ಎನ್ನುವ ಭಯ. ಮಹಾನ್ ಋಷಿ ಮುನಿಗಳು ಕೋಪವನ್ನು ಗೆಲ್ಲಲಿಲ್ಲ. ಉದಾಹರಣೆಗೆ ವಿಶ್ವಾಮಿತ್ರ . ಮೇನಕೆಯ ಪ್ರೇಮ ಪಾಶದಿಂದ ಹೊರಬಂದ ವಿಶ್ವಾಮಿತ್ರ ಪುನಃ ತಪಸ್ಸು ಮಾಡುತ್ತಾನೆ. ಆಗ ರಂಬೆ ಆತನ ತಪಸ್ಸನ್ನು ಕೆಡಿಸಲು ಬರುತ್ತಾಳೆ. ಸಿಟ್ಟಿಗೆದ್ದ ವಿಶ್ವಾಮಿತ್ರ "ನೀನು ಕಲ್ಲಾಗು" ಎಂದು ಆಕೆಗೆ ಶಾಪ ಕೊಡುತ್ತಾನೆ.. ಇಲ್ಲಿ ಆತ ಕಾಮಕ್ಕೆ ಸಮಾನಾದ ಕ್ರೋಧವನ್ನು ಗೆಲ್ಲದೆ ಸೋಲುತ್ತಾನೆ . ಭಗವಂತ ನಿಜವಾದ ತಪಸ್ಸು ಹೇಗಿರಬೇಕು ಎನ್ನುವುದನ್ನು ಸ್ವತಃ ಲೋಕಕ್ಕೆ ತೋರಿಸಿರುವ ಘಟನೆ ನಮಗೆ ತಿಳಿದಿದೆ. ಧರ್ಮ ಮತ್ತು ಮೂರ್ತಿಯ ಮಕ್ಕಳಾದ ನರ-ನಾರಾಯಣರ ದೀರ್ಘ ತಪಸ್ಸು, ಎಲ್ಲಾ ಋಷಿ-ಮುನಿಗಳಿಗೆ ಒಂದು ಅಮೂಲ್ಯ ದೃಷ್ಟಾಂತ. ನರ-ನಾರಾಯಣರ ತಪಸ್ಸನ್ನು ಕೆಡಿಸಲು ಬಂದ ತಿಲೋತ್ತಮೆಯನ್ನು, ಆದರದಿಂದ ಸತ್ಕರಿಸಿದ ನಾರಾಯಣ, ತನ್ನ ತೊಡೆಯಿಂದ ಉರ್ವಶಿಯನ್ನು ಸೃಷ್ಟಿ ಮಾಡಿ, ಇಂದ್ರನಿಗೆ ಕಾಣಿಕೆಯಾಗಿ ಕಳುಹಿಸುತ್ತಾನೆ. ಕಾಮ ಮತ್ತು ಕ್ರೋಧವನ್ನು ಸಂಪೂರ್ಣ ಗೆದ್ದು, ತಪಸ್ಸಿನ ಮೂಲಕ ನಾವು ಕಂಡುಕೊಳ್ಳುವ ಪರಬ್ರಹ್ಮ ಶಕ್ತಿಯಾದ ಭಗವಂತ ಮಹಾತಪಾಃ.
ತಪಸ್ಸಿನ ಅಭಿಮಾನಿ ದೇವತೆ ಶಿವ(ಹರ). ಹರಿ-ಹರ ಶಕ್ತಿಗಳು ಹಾಲಿನಲ್ಲಿ ಬೆಣ್ಣೆ ಇರುವಂತೆ. ಶಿವ ಶಕ್ತಿ ಭಗವಂತನ ಹೃದಯದಿಂದ ಆವಿಷ್ಕಾರವಾಗಿರುವುದು. ಇಂತಹ ಭಗವಂತನನ್ನು ಮಹಾತಪಾ ಎನ್ನುತ್ತೇವೆ.
ಮುಂದುವರೆಯುವುದು....
No comments:
Post a Comment