ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ |
ಅಹಃ ಸಂವತ್ಸರೋ ವ್ಯಾಲಃ ಪ್ರತ್ಯಯಸ್ಸರ್ವದರ್ಶನಃ || 10 ||
85) ಸುರೇಶಃ
ಸುರರು ಅಂದರೆ ದೇವತೆಗಳು. ಭಗವಂತ ಸುರರ-ಈಶ ಆದ್ದರಿಂದ ಆತ ಸುರೇಶ.
86) ಶರಣಮ್
ಶರಣು ಎಂದರೆ ಮೂಲತಃ ಆಶ್ರಯ ಅನ್ನುವ ಅರ್ಥವನ್ನು ಕೊಡುತ್ತದೆ. ಆದರೆ ವಾಡಿಕೆಯಲ್ಲಿ ಈ ಅರ್ಥ ತಪ್ಪಿಹೋಗಿ ವಿಪರೀತ ಅರ್ಥದಲ್ಲಿ ಪ್ರಚಲಿತದಲ್ಲಿದೆ. ಮೂಲ ಅರ್ಥದ ಪ್ರಕಾರ ದೇವರು ನಮಗೆ ಶರಣು ಹೊರತು ನಾವು ದೇವರಿಗೆ ಶರಣಾಗಲು ಸಾಧ್ಯವಿಲ್ಲ. ಅಂದರೆ ದೇವರೇ ನಮಗೆ ಆಶ್ರಯದಾತ ಹೊರತು ನಾವು ದೇವರಿಗೆ ಆಶ್ರಯದಾತರಾಗಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ಜೀವ ಜಂತುಗಳಿಗೂ ಆಶ್ರಯದಾತನಾದ ಭಗವಂತ ಶರಣು.
87) ಶರ್ಮ
ಶರ್ಮ ಅಂದರೆ ಆನಂದ. ಜ್ಞಾನಾನಂದಮಯನಾದ ಭಗವಂತ ಶರ್ಮ.
88) ವಿಶ್ವರೇತಾಃ
ಭಗವಂತನ ರೇತಸ್ಸಿನಿಂದ ಈ ವಿಶ್ವ ಸೃಷ್ಟಿಯಾದ್ದರಿಂದ ಆತನನ್ನು ವಿಶ್ವರೇತಾ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ಆದರೆ ಈ ನಾಮಕ್ಕೆ ಇನ್ನೂ ಹೆಚ್ಚಿನ ಅರ್ಥವಿದೆ. ರೇತನ್ ಅಂದರೆ ಆನಂದ ರೂಪ ಎಂದರ್ಥ. ವಿಶ್ವರೇತಾ ಎಂದರೆ ಜೀವಕೋಟಿಯ ಆನಂದದಲ್ಲಿ ಪರಿಪೂರ್ಣ ಆನಂದ ರೂಪ ಎಂದರ್ಥ. ರೇತಸ್ಸು ಅಂದರೆ ಸಾರಭೂತವಾದದ್ದು ಎನ್ನುವ ಅರ್ಥವನ್ನೂ ಕೊಡುತ್ತದೆ. ಆದ್ದರಿಂದ ಇಡೀ ಬ್ರಹ್ಮಾಂಡದಲ್ಲಿ ಸಾರಭೂತನಾಗಿರುವ ಭಗವಂತ ವಿಶ್ವರೇತಾ.
89) ಪ್ರಜಾಭವಃ
ಧರ್ಮದ ಮಾರ್ಗದಲ್ಲಿ, ಜ್ಞಾನದ ಹಸಿವಿನಿಂದ, ಭಗವಂತನಲ್ಲಿ ಶರಣುಕೋರಿ ಬಂದ ಭಕ್ತರನ್ನು ಪ್ರಜಾ ಎನ್ನುತ್ತಾರೆ. ಭವ ಎಂದರೆ ಆನಂದವನ್ನು ದಯಪಾಲಿಸುವುದು ಎಂದರ್ಥ. ಆದ್ದರಿಂದ ಪ್ರಜಾಭವ ಎಂದರೆ ಧರ್ಮ ಮತ್ತು ಜ್ಞಾನ ಮಾರ್ಗದಲ್ಲಿರುವವರಿಗೆ ಆನಂದಪ್ರದನಾದ ಭಗವಂತ ಎಂದರ್ಥ.
90) ಅಹಃ
ಅಹಃ ಅಂದರೆ ಮೇಲ್ನೋಟದ ಅರ್ಥ 'ನಾನು' . ಪ್ರತಿಯೊಂದು ಮಾತಿನಲ್ಲೂ ನಾವು 'ನಾನು' ಅನ್ನುವ ಪದವನ್ನು ಉಪಯೋಗಿಸುತ್ತೇವೆ. ಈಗ 'ನಾನು' ಅನ್ನುವ ಪದವನ್ನು ಸ್ವಲ್ಪ ಆಳವಾಗಿ ಯೋಚಿಸಿ. ನಾನು ಅಂದರೆ ನನ್ನ ಕೈ , ಕಾಲು, ತಲೆ,ಹೃದಯ ....... ನನ್ನ ದೇಹ ?? ಅಲ್ಲ ! ನನ್ನ ಉಸಿರು? ಅದೂ ಅಲ್ಲ ! ನನ್ನ ಜೀವ ........?? ಅಲ್ಲ. ಏಕೆಂದರೆ ಈ ಜೀವವನ್ನು ನೆಡೆಸುವವನು ಯಾರು? ಅವನೇ ಬಿಂಬ ರೂಪಿ ಭಗವಂತ. ಆದ್ದರಿಂದ ಆತ ಅಹಃ . ಒಂದು ಕೆಲಸವನ್ನು ನಾನು ಮಾಡಿದೆ, ನನ್ನಿಂದಾಯಿತು ಎಂದು ಜಂಬ ಪಡುವ ನಾವು, ಆ "ನಾನು" ಅಂದರೆ ನನ್ನೊಳಗೆ ಕುಳಿತ ಭಗವಂತ ಅನ್ನುವುದನ್ನು ಸಂಪೂರ್ಣ ಮರೆತಿರುತ್ತೇವೆ!
ಅಹಃ ಅನ್ನುವುದಕ್ಕೆ ಇನ್ನೊಂದು ಅರ್ಥ ಬೆಳಕು. ಅಂದರೆ ಬೆಳಕಿನ ಮೂಲವಾದ ಸೂರ್ಯನಲ್ಲಿ ತುಂಬಿ ಜಗತ್ತನ್ನು ಬೆಳಗುವವವನು. ಅದ್ದರಿಂದ ಪಿಂಡಾಂಡದಲ್ಲಿ ಬಿಂಬರೂಪಿಯಾಗಿ, ನಿಸರ್ಗದಲ್ಲಿ ಸೂರ್ಯಕಿರಣ ರೂಪದಲ್ಲಿ ತುಂಬಿರುವ ಭಗವಂತ ಅಹಃ.
91) ಸಂವತ್ಸರಃ
ಸಂವತ್ಸರ ಎಂದರೆ ಸಂಸ್ಕೃತದಲ್ಲಿ ವರ್ಷ ಎಂದು ಅರ್ಥ.ಈ ಒಂದು ಸಂವತ್ಸರದಲ್ಲಿ 360 ಹಗಲು ಹಾಗೂ 360 ರಾತ್ರಿಗಳಿರುತ್ತವೆ. ಇಂತಹ ನೂರು ಸಂವತ್ಸರಗಳು ಮನುಷ್ಯನ ಆಯಸ್ಸು ( 36,000 ಹಗಲು ಹಾಗೂ 36,೦೦೦ ರಾತ್ರಿ). ಮನುಷ್ಯ ದೇಹ 72,000 ನಾಡಿಗಳಿಂದ ಹಾಗೂ 360 ಅಸ್ಥಿಗಳಿಂದ ತುಂಬಿದೆ (ಅದಕ್ಕಾಗಿ ಯಜ್ಞ ಕುಂಡ ತಯಾರಿಸುವಾಗ 360 ಇಟ್ಟಿಗೆಗಳನ್ನು ಉಪಯೋಗಿಸುತ್ತಾರೆ, 360 ಅಸ್ಥಿಗಳಿಂದ ತುಂಬಿದ ಈ ದೇಹವೇ ಒಂದು ಕುಂಡ). ಈ ಎಲ್ಲಾ ನಾಡಿಗಳಲ್ಲಿ ತುಂಬಿರುವ ಕಾಲನಿಯಾಮಕನಾದ ಹಾಗೂ ಶರೀರ ನಿಯಾಮಕನಾದ ಭಗವಂತ ಸಂವತ್ಸರ.
92) ವ್ಯಾಲಃ
ನಿಘಂಟಿನಲ್ಲಿ ವ್ಯಾಲ ಅನ್ನುವ ಪದ ಈ ಕೆಳಗಿನ ಅರ್ಥವನ್ನು ಕೊಡುತ್ತದೆ. ಮತ್ತೇರಿದ ಆನೆ, ಬುಸುಗುಡುವ ಸರ್ಪ ಅಥವಾ ಹೊಂಚು ಹಾಕಿ ಬಲಿತೆಗೆದುಕೊಳ್ಳಲು ಕಾದಿರುವ ಕ್ರೂರ ವ್ಯಾಘ್ರ !!!!
ಮೇಲಿನ ಅರ್ಥವನ್ನು ಓದಿ ಗಾಬರಿಯಾಗಬೇಡಿ. ಭಗವಂತ ವಿ+ಆ+ಲಾ. ಅಂದರೆ ಎಲ್ಲಾ ದೋಷಗಳನ್ನು ನಾಶ ಮಾಡುವವನು, ಪ್ರಳಯ ಕಾಲದಲ್ಲಿ ಎಲ್ಲವೂ ಅವನಲ್ಲಿ ಲೀನವಾಗುತ್ತವೆ. ಮೇಲ್ನೋಟಕ್ಕೆ ಪ್ರಳಯ ಒಂದು ಭಯಂಕರ ಕ್ರಿಯೆ ಆದರೂ ಕೂಡ, ಈ ಕ್ರಿಯೆಯಲ್ಲಿ ಭಗವಂತ ಎಲ್ಲವನ್ನೂ ಪ್ರೀತಿಯಿಂದ ಸ್ವೀಕರಿಸಿ , ಜೀವಕ್ಕೆ ವಿಶ್ರಾಂತಿ ಕೊಟ್ಟು, ಮರುಸೃಷ್ಟಿ ಕಾಲದಲ್ಲಿ ಪುನಃ ಜೀವರನ್ನು ಈ ಪ್ರಪಂಚಕ್ಕೆ ಪ್ರೀತಿಯಿಂದ ಕಳುಹಿಸಿಕೊಡುತ್ತಾನೆ ! ಇಂತಹ ಅದ್ಭುತವಾದ ಶಕ್ತಿ-ವ್ಯಾಲ.
93) ಪ್ರತ್ಯಯಃ
ಪ್ರತ್ಯಯ ಎಂದರೆ ಜ್ಞಾನಸ್ವರೂಪನಾಗಿ, ಪ್ರತಿಯೊಂದನ್ನೂ ತಿಳಿದವ ಹಾಗೂ ಪ್ರತಿಯೊಂದರೊಳಗೂ ಇರುವವನು (Omnipresent , Omniscience )
94) ಸರ್ವದರ್ಶನಃ.
ಭಗವಂತ ವಿಶ್ವಚಕ್ಷು, ವಿಶ್ವತೋಮುಖ. ಆತ ಪ್ರತಿಯೊಂದನ್ನೂ ಕಣ್ಣಾರೆ ಕಾಣುತ್ತಿರುತ್ತಾನೆ. ಅವನಿಂದ ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಸರ್ವ ವೇದ-ಶಾಸ್ತ್ರಗಳು ಯಾರನ್ನು ವರ್ಣಿಸುತ್ತವೋ ಅಂತಹ ಭಗವಂತ ಸರ್ವದರ್ಶನಃ.
ಮುಂದುವರೆಯುವುದು.....
No comments:
Post a Comment