Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -55


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಜೀವೋ ವಿನಯಿತಾ ಸಾಕ್ಷೀ ಮುಕುಂದೋsಮಿತವಿಕ್ರಮಃ |
ಅಂಭೋನಿಧಿರನಂತಾತ್ಮಾ ಮಹೋದಧಿಶಯೋಂತಕಃ || 55 ||

೫೧೬) ಜೀವಃ

ಉಸಿರಾಟ ಉಳ್ಳವರು ಜೀವರು, ಆದರೆ ಪ್ರಾಣಶಕ್ತಿಯನ್ನು ಧಾರಣೆ ಮಾಡುವ  ನಿಜವಾದ ಶಕ್ತಿ ಭಗವಂತ. ಪ್ರಾಣ ಶಕ್ತಿಯನ್ನು ಧಾರಣೆ ಮಾಡಿ, ಪ್ರಾಣಧಾರಕನಾಗಿ ಒಳಗೆ ಕುಳಿತು ನಮ್ಮನ್ನು ಬದುಕಿಸುವ ಭಗವಂತ ಜೀವಃ.

೫೧೭) ವಿನಯಿತಾಸಾಕ್ಷೀ

ಭಕ್ತರ ವಿನಯ ಶೀಲತೆಗೆ ಸಾಕ್ಷಿಯಾದವನು ವಿನಯಿತಾಸಾಕ್ಷೀ. ಈ ನಾಮವನ್ನು ಕೆಲವರು ಎರಡು ಶಬ್ದವಾಗಿ ಬಳಸುತ್ತಾರೆ. ಆದರೆ ಇದು ಒಂದೇ ಶಬ್ದ. ವಿನಯಿತಾ ಎಂದರೆ ಒಬ್ಬ ಮನುಷ್ಯನಲ್ಲಿರುವ ಸೌಜನ್ಯ ಅಥವಾ ನಿಯಾಮಕತ್ವ. ಪ್ರತಿಯೊಬ್ಬನಲ್ಲಿಯೂ ಕೂಡಾ ಎರಡು ಗುಣಗಳಿವೆ. ದೊಡ್ಡವರಿಗೆ ವಿನಯವನ್ನು ತೋರಿಸುವ ಹಾಗು ಚಿಕ್ಕವರಿಗೆ ನಿಯಾಮಕತ್ವವನ್ನು ತೋರಿಸುವ ಗುಣ. ನಗಗಿಂತ ಹೆಚ್ಚು  ಜ್ಞಾನವಿರುವವರತ್ತ ವಿನಯ ಹಾಗೂ ಕಡಿಮೆ ಬುದ್ಧಿ ಇರುವವರತ್ತ ನಿಯಾಮಕತ್ವ.

ಭಗವಂತ ಸಾಕ್ಷಿ ಪುರುಷನಾಗಿ ಎಲ್ಲರಲ್ಲೂ ಈ ಗುಣಗಳನ್ನು ಯಾವ ಲೇಪವೂ ಇಲ್ಲದೆ ಅವರವರ ಯೋಗ್ಯತೆಗೆ ತಕ್ಕಂತೆ ನಿಯಂತ್ರಿಸುತ್ತಿದ್ದಾನೆ. ಆದ್ದರಿಂದ ಜನಾಂಗದಲ್ಲಿರುವ ವಿನಯಿತಾ ಗುಣಕ್ಕೆ ಕಾರಣೀಭೂತ ಹಾಗು ಸಾಕ್ಷಿ ಭಗವಂತ ವಿನಯಿತಾಸಾಕ್ಷೀ.

೫೧೮) ಮುಕುಂದಃ

ಈ ನಾಮ ಬಹಳ ಪ್ರಸಿದ್ಧ. 'ಮುಕು' ಎಂದರೆ ಮುಕ್ತಿ; ಮುಕುಂದಃ ಎಂದರೆ ಮುಕ್ತಿಯನ್ನು ಕೊಡುವವ. ನಿದ್ರೆಯಲ್ಲಿ ನಿತ್ಯ ಮೋಕ್ಷದ ಅನುಭವ ಕೊಡುವವ, ಅಜ್ಞಾನದಿಂದ ಬಿಡುಗಡೆ ಮಾಡಿ, ಸಂಸಾರ ಬಂಧದಿಂದ ಮುಕ್ತಿಯನ್ನು ದಯಪಾಲಿಸುವ, ಮೊಕ್ಷಪ್ರದ ಭಗವಂತ ಮುಕುಂದಃ.

೫೧೯) ಅಮಿತವಿಕ್ರಮಃ

'ವಿಕ್ರಮ' ಎಂದರೆ ಎಲ್ಲವನ್ನೂ ನಿಗ್ರಹಿಸುವ, ಎಲ್ಲವನ್ನೂ ನಿರ್ವಹಿಸುವ, ಎಲ್ಲವನ್ನೂ ಮೀರಿನಿಲ್ಲುವ ಎಂದರ್ಥ. 'ಅಮಿತ' ಎಂದರೆ ಅಳತೆಗೆ ಸಿಗದವ. ಅನಂತ ಸಾಮರ್ಥ್ಯವುಳ್ಳ, ಎಣೆಯಿರದ ಪೌರುಷವುಳ್ಳ, ಎಲ್ಲೆಡೆ ತುಂಬಿರುವ  ಭಗವಂತ ಅಮಿತವಿಕ್ರಮಃ.

೫೨೦) ಅಂಭೋನಿಧಿಃ

'ಅಂಭೋನಿಧಿ' ಎಂದರೆ ನೀರಿನ ನೆಲೆ, ಅಂದರೆ ಸಮುದ್ರ. ಸಮುದ್ರದಷ್ಟು ವಿಶಾಲವಾದ ನೀರಿನ ನೆಲೆ ಇನ್ನೊಂದಿಲ್ಲ, ಇಂತಹ ಕಡಲಿನಲ್ಲಿ ಸನ್ನಿಹಿತನಾಗಿರುವ ಭಗವಂತ ಅಂಭೋನಿಧಿಃ. ಆದರೆ ಇದು ಕೇವಲ ಮೇಲ್ನೋಟದ ಅರ್ಥ. ಎಲ್ಲಕ್ಕಿಂತ ವಿಲಕ್ಷಣನಾದ, ಎಲ್ಲಾ ದೋಷಗಳಿಂದ ದೂರವಾದ, ಸರ್ವಗುಣಪೂರ್ಣ, 'ಅ'ಕಾರ ವಾಚ್ಯ ಭಗವಂತನನ್ನು ಹೃದಯದಲ್ಲಿ ಭರಿಸಿದವರು 'ಅಂಭಸ್ಸುಗಳು' (ದೇವತೆಗಳು, ಋಷಿಗಳು, ಪಿತೃಗಳು, ಮಾನವರು ಮತ್ತು ಅಸುರರು). ಹೀಗೆ ತಮ್ಮ ಹೃದಯದಲ್ಲಿ ಭಗವಂತನನ್ನು ಹೊತ್ತ ಅಂಭಸ್ಸುಗಳಿಗೆ 'ನಿಧಿ'ಯಾದ  ಭಗವಂತ ಅಂಭೋನಿಧಿಃ.

ವಿಶೇಷವಾಗಿ ಭಗವಂತನನ್ನು ಹೃದಯದಲ್ಲಿ ಧರಿಸಿದವನು ಆಂಜನೇಯ.ಇದನ್ನೇ ಕಲಾವಿದರು ಆಂಜನೇಯನ ಎದೆ ಬಿಚ್ಚಿ ಅದರೊಳಗೆ ರಾಮ-ಸೀತೆಯನ್ನು ತೋರಿಸುವಂತೆ ಚಿತ್ರಿಸುತ್ತಾರೆ. ಇಂತಹ ಆಂಜನೇಯ 'ಅಂಭ'. ಆತನ ನಿಧಿ, ಲಕ್ಷ್ಮಿಯ ಅತಿದೊಡ್ಡ ಸಂಪತ್ತು, ಕ್ಷೀರ ಸಾಗರವಾಸಿ ಭಗವಂತ ಅಂಭೋನಿಧಿಃ.

೫೨೧) ಅನಂತಾತ್ಮಾ

ಭಗವಂತನ ಸ್ವರೂಪ ಅನಂತವಾದದ್ದು. ಏಕೆಂದರೆ ಆತ ಪ್ರಪಂಚದಲ್ಲಿ ಕಾಲತಃ, ದೇಶತಃ, ಗುಣತಃ ಅನಂತ. ಎಲ್ಲಾ ಕಾಲದಲ್ಲೂ 'ಇರುವಿನ ಅರಿವಿನೊಂದಿಗೆ' ಅನಾದಿ ಅನಂತ ಕಾಲದಲ್ಲಿರುವ ಭಗವಂತ ಸರ್ವವ್ಯಾಪಿ, ಸರ್ವಶಕ್ತ  ಹಾಗು ಸರ್ವ ಗುಣಪೂರ್ಣ. ಅನಂತ ಜೀವರನ್ನು ನಿಯಾಮಿಸುವ,ಅನಂತ ಜೀವರ ಒಡೆಯ, ಮುಕ್ತರ(ಅನಂತರು) ಸ್ವಾಮಿ ಭಗವಂತ ಅನಂತಾತ್ಮಾ.

೫೨೨) ಮಹೋದಧಿಶಯಃ

'ಮಹೋದಧಿ' ಎಂದರೆ ದೊಡ್ಡ ಸಮುದ್ರ. ಸಪ್ತಸಾಗರ(ಉಪ್ಪು, ಕಬ್ಬಿನ ಹಾಲು, ಸುರ, ಬೆಣ್ಣೆ/ತುಪ್ಪ, ಮೊಸರು, ಕ್ಷೀರ ಹಾಗೂ ಅಮೃತ)ಗಳಲ್ಲಿ ಒಂದಾದ ಕ್ಷೀರಸಾಗರಶಾಯಿ ಭಗವಂತ, ಪ್ರಳಯ ಸಮುದ್ರದಲ್ಲಿ ಪವಡಿಸುವ ಹೃತ್ಕಮಲ(ಹೃದಯ ಸಮುದ್ರ) ಮಧ್ಯ ನಿವಾಸಿ.

ಇನ್ನು ನಮ್ಮ ಪಿಂಡಾಂಡವನ್ನು ನೋಡಿದಾಗ, ಇಲ್ಲಿ ಏಳು ಶಕ್ತಿಚಕ್ರಗಳಿವೆ. ಇದರಲ್ಲಿ ಮೊದಲನೆಯದ್ದು ನಮ್ಮ ಮಲ-ಮೂತ್ರದ್ವಾರದ ಮಧ್ಯದಲ್ಲಿರುವ 'ಮೂಲಾಧಾರಚಕ್ರ' - ಇದೇ 'ಉಪ್ಪಿನ ಸಮುದ್ರ'. ಎರಡನೆಯದ್ದು  ಹೊಕ್ಕುಳಿನಿಂದ ಸ್ವಲ್ಪ ಕೆಳಗಿರುವ 'ಸ್ವಾಧಿಷ್ಟಾನಚಕ್ರ'; ಇದು 'ಕಬ್ಬಿನಹಾಲಿನ ಸಮುದ್ರ'. ಇದು ಬದುಕಿನಲ್ಲಿ ಐಹಿಕ ಸುಖದ ಖುಷಿ ಕೊಡುವ ಚಕ್ರ. ಇದಕ್ಕೂ ಮೇಲೆ ಹೊಕ್ಕುಳಿನ ಭಾಗದಲ್ಲಿ 'ಮಣಿಪುರ ಚಕ್ರ'ವಿದೆ. ಇದು ಕಾಮದ ಅಮಲಿನ ಸುಖ ಕೊಡುವ 'ಸುರ ಸಮುದ್ರ'. ಇದಕ್ಕೂ ಮೇಲೆ 'ಅನಾಹತ ಚಕ್ರ'. ಇದನ್ನೇ ತುಪ್ಪ/ಬೆಣ್ಣೆಯ ಸಮುದ್ರ ಅಥವಾ ಹೃದಯ ಸಮುದ್ರ ಎನ್ನುತ್ತಾರೆ. ಇಲ್ಲಿಂದ ಮೇಲೆ ಅಧ್ಯಾತ್ಮದ ವಿಶ್ವ ತೆರೆದುಕೊಳ್ಳುತ್ತದೆ. ಮೊತ್ತ ಮೊದಲು ಭಕ್ತಿಯ ನವನೀತವನ್ನು ಹೃದಯದಲ್ಲಿ ತುಂಬಿ ಭಗವಂತನಿಗೋಸ್ಕರ ಕಾಯುವ  ಸಾಧನೆ ಪ್ರಾರಂಭವಾಗುವುದೇ ಇಲ್ಲಿಂದ. ಈ ಹೃದಯ ಸಮುದ್ರಶಾಯಿ ಭಗವಂತನನ್ನು ಮಹೋದಧಿಶಯಃ ಎಂದು ಕರೆದಿದ್ದಾರೆ. ಇನ್ನೂ ಮೇಲಕ್ಕೆ ಹೋದರೆ 'ವಿಶುದ್ಧಿಚಕ್ರ'. ಅಥವಾ ಮೊಸರಿನ ಸಮುದ್ರ. ಇಲ್ಲಿ ಜ್ಞಾನಿಯು ತ್ರಿಕಾಲದರ್ಶಿಯಾಗುತ್ತಾನೆ. ಅದರಿಂದಾಚೆಗೆ ಕ್ಷೀರಸಾಗರ ಅಥವಾ ಆಜ್ಞಾಚಕ್ರ. ಇದು ಭ್ರೂ- ಮಧ್ಯದಲ್ಲಿ ಭಗವಂತನನ್ನು ಕಾಣುವಂತದ್ದು. ಇದೇ ಕ್ಷೀರಸಾಗರಶಾಯಿಯಾದ ಭಗವಂತನ ದರ್ಶನ. ಆತನೇ ಮಹೋದಧಿಶಯಃ. ಇದರಿಂದಾಚೆಗೆ ಸಹಸ್ರಾರ ಅಥವಾ ಅಮೃತಸಾಗರ. ಇವು ಮನುಷ್ಯನ ಬದುಕನ್ನು ನಿರ್ಧರಿಸುವ ಏಳು ಮಹಾಸಮುದ್ರಗಳು.ಇಂತಹ ಅಂತರಂಗದ ಸಮುದ್ರದಲ್ಲಿ ನೆಲೆಸಿ ನಮ್ಮನ್ನು ಎತ್ತರಕ್ಕೇರಿಸುವ ಭಗವಂತ ಮಹೋದಧಿಶಯಃ.

೫೨೩) ಅಂತಕಃ
ಸಮಸ್ತ  ವಿಶ್ವವನ್ನು ಸಂಹಾರ ಮಾಡಿ ಪ್ರಳಯ ಸಮುದ್ರದಲ್ಲಿ ಪವಡಿಸುವ ಆನಂದಪ್ರದ ಭಗವಂತ ಅಂತಕಃ.

ಮುಂದುವರೆಯುವುದು...

No comments:

Post a Comment