ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಮಹಾವರಾಹೋ ಗೋವಿಂದಃ ಸುಷೇಣಃ ಕನಕಾಂಗದೀ |
ಗುಹ್ಯೋ ಗಭೀರೋ ಗಹನೋ ಗುಪ್ತಶ್ಚಕ್ರಗದಾದರಃ || 58 ||
೫೪೨) ಮಹಾವರಾಹಃ
ವರಾಹ ಅಂದರೆ ನಮಗೆ ಗೊತ್ತಿರುವ ಅರ್ಥ 'ಹಂದಿ'; ಆದರೆ ಪ್ರಾಚೀನ ಸಂಸ್ಕೃತದಲ್ಲಿ ಬೇರೆ ಅರ್ಥವಿದೆ. ಶ್ರೇಷ್ಠನಾದವ, ಮೋಡ ಎನ್ನುವ ಅರ್ಥ ವೇದಕಾಲದಲ್ಲಿತ್ತು, ಆದರೆ ಈಗ ಪ್ರಚಲಿತದಲ್ಲಿಲ್ಲ. ವರಾಹ ಎಂದರೆ ಎಲ್ಲರೂ ವರ್ಣನೆ ಮಾಡತಕ್ಕ ಎಲ್ಲರಿಗಿಂತ ಎತ್ತರದಲ್ಲಿರುವ ವಸ್ತು, ಎಲ್ಲರೂ ಆಶ್ರಯಿಸುವ ವಸ್ತು. ಅದಕ್ಕಾಗಿ ಎಲ್ಲರಿಗೂ ಬೇಕಾದ ಮಳೆಯನ್ನು ಕೊಡುವ ಎತ್ತರದಲ್ಲಿರುವ ಮೋಡವನ್ನು ಸಹ ವರಾಹ ಎಂದು ಕರೆಯುತ್ತಾರೆ. ಆದರೆ ನಿಜವಾಗಿ ಎತ್ತರದಲ್ಲಿರುವ ವಸ್ತು ಮೋಡವಲ್ಲ ಭಗವಂತ. ಮಹಾವರಾಹ ಎಂದರೆ ಎಲ್ಲಕ್ಕಿಂತಲೂ ಶ್ರೇಷ್ಠ ಹಾಗು ಎತ್ತರದಲ್ಲಿರುವ ಭಗವಂತ.
ಸಂಸ್ಕೃತದ ಮಂತ್ರಶಾಸ್ತ್ರದಲ್ಲಿ 'ವರಾಹಮಂತ್ರಕ್ಕೆ' ಬಹಳ ಮಹತ್ವವಿದೆ. ಸಾಮಾನ್ಯವಾಗಿ ವರಾಹ ಮಂತ್ರವನ್ನು ಭೂ ಪ್ರಾಪ್ತಿಗಾಗಿ ಉಪಾಸನೆ ಮಾಡುತ್ತಾರೆ. ಆದರೆ ವಾಸ್ತವಿಕವಾಗಿ ನಾವು ಈ ಮಂತ್ರದಿಂದ ಪಡೆಯುವುದು ಭೂಮಿಯಲ್ಲ 'ಭೂ-ಪತಿತ್ವ', ಅಂದರೆ ಪೂರ್ಣತೆಯನ್ನು ಪಡೆಯುವುದು. ನಮ್ಮ ವ್ಯಕ್ತಿತ್ವದ ಪೂರ್ಣ ವಿಕಾಸವೇ ಭೂ-ಪತಿತ್ವ. ಇಂತಹ ಸರ್ವ ಶ್ರೇಷ್ಠವಾದ ವರಾಹ ಮಂತ್ರದಲ್ಲಿ ಸನ್ನಿಹಿತನಾಗಿರುವ ಭಗವಂತ ಮಹಾವರಾಹಃ.
೫೪೩) ಗೋವಿಂದಃ
ಈ ಹಿಂದೆ ವಿಶ್ಲೇಷಿಸಿದಂತೆ ಗೋವು ಎನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಭೂಮಿ, ನೀರು, ಕೂದಲು, ಕಿರಣ, ವೇದ, ಪ್ರಕಾಶ, ಇತ್ಯಾದಿ. ಗೋವಿಂದಃ ಎಂದರೆ ವೇದವನ್ನು ರಕ್ಷಿಸುವುದಕ್ಕೊಸ್ಕರ ಪ್ರಳಯ ಜಲದಲ್ಲಿ ಮತ್ಸ್ಯನಾಗಿ ಸಂಚರಿಸಿದವ; ಭೂಮಿ ಹಿರಣ್ಯಾಕ್ಷನಿಂದ ತನ್ನ ಕಕ್ಷೆಯನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾಗ ವರಾಹನಾಗಿ ರಕ್ಷಣೆ ಮಾಡಿದವ ಗೋವಿಂದಃ; ಗೋವುಗಳ ಜೊತೆಗೆ ಗೋಪಾಲಕನಾಗಿ ಆಟವಾಡಿದ ಭಗವಂತ, ವೇದವ್ಯಾಸನಾಗಿ ವೇದಗಳನ್ನು ಕೊಟ್ಟ ವೇದವೇದ್ಯ. ಹೀಗೆ ಗೋವಿಂದಃ ಎನ್ನುವ ನಾಮಕ್ಕೆ ಅನೇಕ ಅರ್ಥಗಳಿವೆ.
೫೪೫) ಸುಷೇಣಃ
ಸು+ಸೇನಾ; ಸೇನಾ ಎಂದರೆ ಸೇನೆ. ಸಮರ್ಥವಾದ ಸೇನೆ ಉಳ್ಳವ ಸುಷೇಣಃ. ಸು ಅಂದರೆ ಸುಗ್ರೀವ, ಸಮರ್ಥವಾದ ಕಪಿ ಸೇನೆಯೊಂದಿಗೆ ಲಂಕೆಗೆ ಹೋದವ ಸುಷೇಣಃ. ಜಗತ್ತಿನಲ್ಲಿರುವ ಸೇನೆಗಳಿಗೆ ಧರ್ಮದ ಪರ ಗೆಲ್ಲುವ ಶಕ್ತಿಯನ್ನು ಕೊಟ್ಟ ಭಗವಂತ ಸುಷೇಣಃ.
೫೪೫) ಕನಕಾಂಗದೀ
'ಅಂಗದ' ಎಂದರೆ 'ತೊಳ್ಭಂದಿ', ತೋಳಿನಲ್ಲಿ ತೊಡುವ ಬಳೆ, ಗಂಡಸರು ಹಾಗೂ ಹೆಂಗಸರು ತೊಡುವ ಆಭರಣ. ಚಿನ್ನದ ತೊಳ್ಭಂದಿ ತೊಟ್ಟ ಭಗವಂತ ಕನಕಾಂಗದೀ. ಇದು ಮೇಲ್ನೋಟಕ್ಕೆ ಕಾಣುವ ಅರ್ಥ. ಹಿಂದಿನವರು ತಮ್ಮ ದೇಹವನ್ನು ಭಗವಂತನ ಪ್ರತಿಮೆ, ಇದರೊಳಗೆ ಬಿಂಬರೂಪಿ ಭಗವಂತನಿದ್ದಾನೆ ಎನ್ನುವ ಭಾವನೆಯಿಂದ ಆಭರಣಗಳನ್ನು ಧರಿಸುತ್ತಿದ್ದರು. ಚಿನ್ನದ ವರ್ಣದ ಮೈಯವನು, ಉದಿಸುವ ಸೂರ್ಯನ ಬಣ್ಣದವನು, ಭಕ್ತರ ದುರಿತವನ್ನು ನಾಶಮಾಡುವವನು ಆದ ಭಗವಂತ ಕನಕಾಂಗದೀ. 'ಕನಕ' ಅಂದರೆ 'ಅಂತರಂಗದ ಆನಂದ'. ಜ್ಞಾನಾನಂದಮಯವಾದ ಶರೀರವುಳ್ಳ ಭಗವಂತ ಕನಕಾಂಗದೀ.
೫೪೬) ಗುಹ್ಯಃ
ಹೃದಯ ಗುಹೆಯೊಳಗೆ ಗುಟ್ಟಾಗಿ ನೆಲೆಸಿರುವವನು! ; ಇದರಿಂದಾಗಿ ಆತ ಹೊರಪ್ರಪಂಚದಲ್ಲಿ ಎಷ್ಟೇ ಹುಡುಕಿದರೂ ಸಿಗಲಾರ; ಆದರೆ ಒಳಪ್ರಪಂಚದಲ್ಲಿ ಆತನನ್ನು ಹುಡುಕುವ ಪ್ರಯತ್ನ ಮಾಡಿದರೆ ಹೃದಯ ಗುಹೆಯಲ್ಲಿ ನೆಲೆಸಿದ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಉಪನಿಷತ್ತುಗಳನ್ನು 'ಗುಹ್ಯ' ಎನ್ನುತ್ತಾರೆ. ವೇದೊಪನಿಷತ್ತುಗಳಿಂದ ವೇದ್ಯನಾಗಿ ಹೃದಯಗುಹೆಯಲ್ಲಿ ನಿಗೂಢವಾಗಿರುವ ಭಗವಂತ ಗುಹ್ಯಃ.
೫೪೭) ಗಭೀರಃ
ಎಷ್ಟೇ ಆಳಕ್ಕಿಳಿದರೂ ತುದಿ ಸಿಗದ, ಅಳೆಯಲಾಗದ ಆಳದವನು ಗಭೀರಃ. ಎಷ್ಟೇ ಚಿಂತನೆ ಮಾಡಿದರೂ ಆಳ ತಿಳಿಯಲು ಅಸಾಧ್ಯವಾದ, ಅಳತೆಗೆ ಸಿಗದಷ್ಟು ಅಗಾಧವಾದ, ಸೀಮೆ ಇಲ್ಲದ ಭಗವಂತ ಗಭೀರಃ.
೫೪೮) ಗಹನಃ
ಭಗವಂತನ ಹುಡುಕಾಟ 'ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟಂತೆ'. ಆತ ತಿಳಿಯಲಾಗದ ತಿಟ್ಟಿನವನು, ಆತನನ್ನು ಏನು ಎತ್ತ ಎಂದು ಪತ್ತೆ ಹಚ್ಚುವುದು ಅಸಾಧ್ಯ. ಹೀಗೆ ಎಷ್ಟೇ ಅಲೆದಾಡಿದರೂ ಸಿಗದ ಭಗವಂತ ಗಹನಃ.
೫೪೯) ಗುಪ್ತಃ
ಭಗವಂತ ಎಂದೂ ತನ್ನನ್ನು ತಾನು ತೆರೆದು ತೋರಿಸುವುದಿಲ್ಲ ಆತ ಗುಪ್ತಃ. ಮೊದಲು ನಾವು ಆತನ ಮುಂದೆ ಬತ್ತಲಾಗಬೇಕು, ಆಗ ಆತ ನಮ್ಮ ಮುಂದೆ ತೆರೆದುಕೊಳ್ಳುತ್ತಾನೆ. ಯಾರು ತಮ್ಮನ್ನು ತಾವು ಆತನಲ್ಲಿ ಅರ್ಪಿಸಿಕೊಳ್ಳುತ್ತಾರೋ ಅವರಿಗೆ ಭಗವಂತ ತೆರೆದುಕೊಳ್ಳುತ್ತಾನೆ.
೫೫೦) ಚಕ್ರಗದಾಧರಃ
ಭಗವಂತ ಚಕ್ರ ಗದೆಗಳನ್ನು ತೊಟ್ಟವನು. ಚಕ್ರ-ದುರ್ಗಾರೂಪ, ಗದೆ ವಾಯು ರೂಪ. ಶ್ರಿತತ್ವ ಹಾಗೂ ವಾಯು ತತ್ವ ಸದಾ ಭಗವಂತನೊಂದಿಗಿರುತ್ತಾರೆ. ಚಕ್ರ ಸಂಹಾರ ಶಕ್ತಿಯ ಪ್ರತಿರೂಪವಾದರೆ, ಗದಾ ಕಾಮನಿಗ್ರಹದ ಸಂಕೇತ. ಚಕ್ರದಿಂದ ಧರ್ಮದ ನಿರಂತರ ಚಲನೆ, ಹಾಗೂ ಮನುಷ್ಯನ ಸ್ವಚ್ಛಂದತೆಗೆ ಕಡಿವಾಣವಾಗಿದ್ದು, ಧರ್ಮ ಸಂರಕ್ಷಣೆ ಮಾಡುವ ಭಗವಂತ ಚಕ್ರಗದಾಧರಃ.
ಮುಂದುವರೆಯುವುದು...
No comments:
Post a Comment