Sunday, May 28, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -77


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ವಿಶ್ವಮೂರ್ತಿರ್ಮಹಾಮೂರ್ತಿಃ ದೀಪ್ತಮೂರ್ತಿರಮೂರ್ತಿಮಾನ್ |
ಅನೇಕಮೂರ್ತಿರವ್ಯಕ್ತಃ ಶತಮೂರ್ತಿಃ ಶತಾನನಃ  || 77 ||

೭೨೨) ವಿಶ್ವಮೂರ್ತಿಃ

ಭಗವಂತ ವಿಶ್ವಮೂರ್ತಿ, ವಿಶ್ವದ ಎಲ್ಲಾ ವಸ್ತುಗಳಲ್ಲೂ ಆತನ ಸನ್ನಿಧಾನವಿದೆ. ನಾವು ಮಾಡುವ ಪ್ರತಿಮೆಗಿಂತ ಹಿರಿಮೆಯುಳ್ಳ ಪ್ರತಿಮೆ ಭಗವಂತನೇ ಮಾಡುವ ಪ್ರತಿಮೆ. ಉದಾಹರಣೆಗೆ ನೇಪಾಳದ ಘಂಡಕಿ ನದಿಯಲ್ಲಿ ಸಿಗುವ ಶಾಲಿಗ್ರಾಮ, ನರ್ಮದಾ ನದಿಯಲ್ಲಿ ಸಿಗುವ ಶಿವಲಿಂಗ ಇತ್ಯಾದಿ. ಇಷ್ಟೇ ಅಲ್ಲದೆ ಬೆಟ್ಟಗಳು, ನದಿಗಳೂ  ಕೂಡಾ ಆತನ ಪ್ರತೀಕ. ಬದರಿಯ ನರ-ನಾರಾಯಣ ಪರ್ವತ, ಹಿಮಾಲಯದ ಕೈಲಾಸ ಪರ್ವತ, ಗಂಗಾತೀರ್ಥ  ಇತ್ಯಾದಿ.  ಅಗ್ನಿಯಲ್ಲಿ ಅಗ್ನಿನಾರಾಯಣ, ಸೂರ್ಯನಲ್ಲಿ ಸೂರ್ಯನಾರಾಯಣ, ಮರದಲ್ಲಿ(ಅಶ್ವತ್ಥ), ಗೋವುಗಳಲ್ಲಿ ಹೀಗೆ ಸಮಸ್ಥ ವಿಶ್ವವೇ ಆತನ ಪ್ರತೀಕ.

೭೨೩) ಮಹಾಮೂರ್ತಿಃ

ಇಡೀ ಬ್ರಹ್ಮಾಂಡವೇ ಪ್ರತೀಕವಾಗಿರುವ, ಸರ್ವವ್ಯಾಪಿ ರೂಪವುಳ್ಳ ಭಗವಂತ ಮಹಾಮೂರ್ತಿಃ.

೭೨೪) ದೀಪ್ತಮೂರ್ತಿಃ

ಎಲ್ಲಾ ಕಡೆಯೂ ಬೆಳಕಿನ ಪುಂಜವಾಗಿರುವ, ಪ್ರಕಾಶ ಸ್ವರೂಪ ಭಗವಂತ ದೀಪ್ತಮೂರ್ತಿಃ.

೭೨೫) ಅಮೂರ್ತಿಮಾನ್

ಭಗವಂತ ಜ್ಞಾನಾನಂದ ಸ್ವರೂಪಿ, ಆತನಿಗೆ ಪಾಂಚಭೌತಿಕವಾದ ರೂಪವಿಲ್ಲ. ಆದ್ದರಿಂದ ಆತ ಅಮೂರ್ತಿಮಾನ್.

೭೨೬) ಅನೇಕಮೂರ್ತಿಃ

ಭಗವಂತ ಒಂದೊಂದು ಕಡೆ ಒಂದೊಂದು ರೂಪದಲ್ಲಿ ತುಂಬಿದ್ದಾನೆ. ಪಂಚಕೋಶಗಳಲ್ಲಿ, ಕರ್ಮೆಂದ್ರಿಯಗಳಲ್ಲಿ, ಜ್ಞಾನೇಂದ್ರಿಯಗಳಲ್ಲಿ, ಪಂಚಭೂತಗಳಲ್ಲಿ, ಹೀಗೆ ಅನೇಕ ರೂಪದಲ್ಲಿ ನಮ್ಮ ಒಳಗೂ ಹೊರಗೂ ತುಂಬಿರುವ ಭಗವಂತ ಅನೇಕಮೂರ್ತಿಃ.

೭೨೭) ಅವ್ಯಕ್ತಃ

ಭಗವಂತ ಸರ್ವವ್ಯಾಪಿಯಾದರೂ ಸಹ ಆತ ವ್ಯಕ್ತನಾಗಿ ಕಾಣಿಸಿಕೊಳ್ಳದ ಅವ್ಯಕ್ತ ಮೂರ್ತಿ.

೭೨೮) ಶತಮೂರ್ತಿಃ

ಅನಂತ ರೂಪಿ ಭಗವಂತ ಶತಮೂರ್ತಿಃ. ಆತನ ಒಂದೊಂದು ಅವತಾರದಲ್ಲೂ ನೂರಾರು ರೂಪಗಳು. ಇದನ್ನು ಕೃಷ್ಣ ಅಷ್ಟೋತ್ತರ ಶತನಾಮದಲ್ಲಿ, ನರಸಿಂಹ ಅಷ್ಟೋತ್ತರ ಶತನಾಮದಲ್ಲಿ ಹಾಗು ರಾಮ ಅಷ್ಟೋತ್ತರ ಶತನಾಮದಲ್ಲಿ ಕಾಣಬಹುದು.ನಾರಾಯಣ ಅಷ್ಟೋತ್ತರದಲ್ಲಿ ಆತನ ೧೦೮ ರೂಪಗಳ ವರ್ಣನೆಯಿದೆ; ಸಹಸ್ರನಾಮದಲ್ಲಿ  ಆತನ ಸಹಸ್ರ ರೂಪಗಳು, ಹೀಗೆ ನೂರಾರು ರೂಪಗಳುಳ್ಳ ಭಗವಂತ ಶತಮೂರ್ತಿಃ.

೭೨೯) ಶತಾನನಃ

ಭಗವಂತ ಅನಂತ ಮುಖದವನು. ಚತುರ್ಮುಖ ಬ್ರಹ್ಮ(ಶತಾನಂದ) ಮೊಟ್ಟಮೊದಲು ಸೃಷ್ಟಿಯ ಆದಿಯಲ್ಲಿ ಕಂಡ ವಿಶ್ವರೂಪ. ‘ಸಹಸ್ರ ಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್' ಎಂದು ಭಗವಂತನನ್ನು ಪುರುಷಸೂಕ್ತದಲ್ಲಿ ವರ್ಣಿಸಿದ್ದಾರೆ. ಇಲ್ಲಿ ಬಹುಶಿರ ಎಂದರೆ ಸಹಸ್ರ-ಸಹಸ್ರ ಶಿರಸ್ಸನ್ನು ಹೊಂದಿರುವವನು ಎಂದರ್ಥ.

ಮುಂದುವರೆಯುವುದು...✍️💐

No comments:

Post a Comment