ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಅಜೋ ಮಹಾರ್ಹಃ ಸ್ವಾಭಾವ್ಯೋ ಜಿತಾಮಿತ್ರಃ ಪ್ರಮೋದನಃ |
ಆನಂದೋ ನಂದನೋ ನಂದಃ ಸತ್ಯಧರ್ಮಾ ತ್ರಿವಿಕ್ರಮಃ || 56 ||
೫೨೪) ಅಜಃ
'ನ ಜಾಯತೇ ಇತಿ ಅಜಃ'; 'ಜ' ಎಂದರೆ ಜನನ; ಅ+ಜಃ-ಅಜಃ ಎಂದರೆ ಹುಟ್ಟಿರದವನು. ಹುಟ್ಟದವನ ಹೊಕ್ಕುಳಲ್ಲಿ ಹುಟ್ಟಿದ ಚತುರ್ಮುಖನನ್ನು ಅಜ ಎನ್ನುತ್ತಾರೆ. ಇಂತಹ ಚತುರ್ಮುಖನೊಳಗೆ ಸನ್ನಿಹಿತನಾಗಿ ಸೃಷ್ಟಿ ಮಾಡುವ ಭಗವಂತ, ತಾನು ಹುಟ್ಟದೆ, ಎಲ್ಲವನ್ನೂ ಸೃಷ್ಟಿ ಮಾಡಿ ಸಂಹಾರ ಮಾಡುವ ಭಗವಂತ ಅಜಃ.
೫೨೫) ಮಹಾರ್ಹಃ
ಪೂಜ್ಯರಿಗೆಲ್ಲ ಹಿರಿಯ ಪೂಜ್ಯ ಮಹಾರ್ಹಃ. ಇಲ್ಲಿ ಅರ್ಹ ಎಂದರೆ ಪೂಜೆಗೆ ಯೋಗ್ಯರು, ಪೂಜನೀಯರು; ನಾವು ಪೂಜಿಸಬೇಕಾದ ವಸ್ತುವಿನಲ್ಲಿ ಸರ್ವಶ್ರೇಷ್ಠನಾಗಿ ಸನ್ನಿಹಿತನಾಗಿರುವ ಭಗವಂತ ಮಹಾರ್ಹಃ.
೫೨೬) ಸ್ವಾಭಾವ್ಯಃ
ನಿರ್ಮಾಣ ಮಾಡಲು ಅಸಾಧ್ಯವಾದವ ಹಾಗು ಸ್ವತಂತ್ರವಾಗಿದ್ದು ಇನ್ನೊಬ್ಬರ ನಿಯಂತ್ರಣಕ್ಕೊಳಪಡದವನು ಸ್ವಾಭಾವ್ಯಃ.
೫೨೭) ಜಿತಾಮಿತ್ರಃ
ಅಮಿತ್ರರನ್ನು(ಶತ್ರುಗಳನ್ನು) ಗೆದ್ದವ. ಭಗವಂತನ ಶತ್ರುಗಳು ಧರ್ಮದ ಮತ್ತು ಜ್ಞಾನದ ವಿರೋಧಿಗಳು. ಯಾರು ಪಾತಕಿಗಳೋ, ಧರ್ಮ ಮತ್ತು ಜ್ಞಾನವನ್ನು ದ್ವೇಷಿಸುತ್ತಾರೋ ಅವರನ್ನು ಭಗವಂತ ಶಿಕ್ಷಿಸುತ್ತಾನೆ. ಆತ ದುಷ್ಟರ ನಿಗ್ರಹ ಮಾಡುವುದು ಯಾವುದೇ ದ್ವೇಷದಿಂದಲ್ಲ. ಇದು ತಂದೆ-ತಾಯಿ ಮಕ್ಕಳಿಗೆ ಶಿಕ್ಷೆ ಕೊಟ್ಟಂತೆ. ಏಕೆಂದರೆ ಅಸುರರೂ ಕೂಡಾ ಭಗವಂತನ ಮಕ್ಕಳೇ. ಜೀವ ಸ್ವಭಾವಕ್ಕನುಗುಣವಾಗಿ ಅವರ ಸ್ವಭಾವ ವೃದ್ಧಿಯಾಯಿತು ಅಷ್ಟೇ. ಅಲ್ಲಿ ದೋಷ ಕಂಡುಬಂದಾಗ ಅದನ್ನು ಭಗವಂತ ನಿಗ್ರಹ ಮಾಡುತ್ತಾನೆ.
ಸಂಸ್ಕೃತದಲ್ಲಿ ಮಿತ್ರ ಎನ್ನುವ ಪದಕ್ಕೆ ಎರಡು ಅರ್ಥವಿದೆ. ಒಂದು ಸೂರ್ಯ ಇನ್ನೊಂದು ಗೆಳೆಯ. ಸೂರ್ಯ 'ಮಿತಿ-ಅರಿವು' ಕೊಡುವವ. ಅಂದರೆ ಬೆಳಕು ಹರಿಸಿ ವಸ್ತುವಿನ ಜ್ಞಾನ ಕೊಡುವವ. ನಾವು ದಾರಿ ತಪ್ಪಿದಾಗ ದಾರಿ ತೋರಿಸಿ ನಮ್ಮನ್ನು ಸರಿ ದಾರಿಗೆ ತರುವವ ನಿಜವಾದ ಮಿತ್ರ.ಆದ್ದರಿಂದ ಸೂರ್ಯನನ್ನು ಮಿತ್ರ ಎನ್ನುತ್ತಾರೆ. 'ಅಮಿತ್ರ' ಎಂದರೆ ಅಜ್ಞಾನವನ್ನು ಹರಡುವವ. ಕತ್ತಲ ದಾರಿಯನ್ನು (ಅಜ್ಞಾನವನ್ನು) ಕಳಚಿ ಬೆಳಕಿನತ್ತ ಕೊಂಡೊಯ್ಯುವ ಭಗವಂತ ಜಿತಾಮಿತ್ರಃ.
೫೨೮) ಪ್ರಮೋದನಃ
ಪ್ರಮೋದಂ ನಯತಿ ಇತಿ ಪ್ರಾಮಯತಿ. ಅರಿವು ಕೊಟ್ಟು, ಅರಿವಿನ ಮುಖೇನ ನಮ್ಮನ್ನು ಆನಂದದ ದಾರಿಯಲ್ಲಿ ಕೊಡೊಯ್ಯುವವನು, ಕೊನೆಗೆ ಮುಕ್ತಿಯಲ್ಲಿ ಪೂರ್ಣಾನಂದವನ್ನು ಕೊಡುವವನು ಪ್ರಮೋದನಃ. ನಿಜವಾದ ಆನಂದ ಯಾವುದು? ಕೆಲವರಿಗೆ ಹೊನ್ನು, ಇನ್ನು ಕೆಲವರಿಗೆ ಹೆಣ್ಣು, ಮತ್ತೆ ಕೆಲವರಿಗೆ ಮಣ್ಣು. ಆದರೆ ನಿಜವಾದ ಆನಂದ ಇದಲ್ಲ. ಜ್ಞಾನದಿಂದ ಮನಸ್ಸು ಅರಳುವುದು ನಿಜವಾದ ಆನಂದ. ನಮಗೆ ಅತ್ಯಂತ ಅಮೂಲ್ಯವಾದ ಅರಿವನ್ನು ಕೊಟ್ಟು, ಅದರಿಂದ ಆನಂದದ ಮಾರ್ಗವನ್ನು ತೋರಿ ಆನಂದದತ್ತ ಕೊಡೊಯ್ಯುವವನು ಪ್ರಮೋದನಃ
೫೨೯) ಆನಂದಃ
ಯಾವುದೇ ಹೊರಗಿನ ಸಂಗತಿಯಿಲ್ಲದೆ ಒಳಗಿನ ಆತ್ಮಸ್ವರೂಪ ಖುಷಿಪಡುವುದು ಆನಂದ. ಭಗವಂತ ಆನಂದದ ಕಡಲು, ನಮ್ಮ ಆನಂದ ಆ ಆನಂದದ ಒಂದು ಕಿಡಿ ಅಷ್ಟೇ. ಅಪರಂಪಾರವಾದ ಸ್ವರೂಪಾನಂದದ ಕಡಲಾದ ಭಗವಂತ ಆನಂದಃ.
೫೩೦) ನಂದನಃ
ವಸುದೇವಾದಿಗಳಿಗೊಲಿದು ಮಗನಾಗಿ ಬಂದವನು; ಸಂತಸವನ್ನೀಯುವವನು;ಒಬ್ಬ ವ್ಯಕ್ತಿಯ ಪೂರ್ಣತೆಗೆ ಏನು ಬೇಕು ಅದೆಲ್ಲವೂ ಪರಿಪೂರ್ಣವಾಗಿ ತುಂಬಿದ್ದು ನಮ್ಮನ್ನು ಪೂರ್ಣತೆಯತ್ತ ಕೊಂಡೊಯ್ಯುವ ಶಕ್ತಿ ನಂದನಃ.
೫೩೧) ನಂದಃ
ನಂದಃ ಎಂದರೆ ಪೂರ್ಣಃ. ಅವರವರ ಯೋಗ್ಯತೆಗೆ ತಕ್ಕಂತೆ ಪೂರ್ಣತೆಯನ್ನೀಯುವವನು ಹಾಗೂ ಭಕ್ತರಿಗೆ ಸಂತಸವನ್ನೀಯುವ ಭಗವಂತ ನಂದಃ.
೫೩೨) ಸತ್ಯಧರ್ಮಾ
ಜಗತ್ತಿನಲ್ಲಿ ವೈವಿಧ್ಯವನ್ನು ಸೃಷ್ಟಿಸಿದ ಸತ್ಯಕರ್ಮನಾದ ಭಗವಂತನ ಗುಣಕ್ರಿಯೆ ಎಲ್ಲವೂ ಸತ್ಯ ಸ್ವರೂಪ. ಸತ್ಯ ಆತನ ಧರ್ಮ. ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ ಹಾಗು ಜ್ಞಾನ-ಅಜ್ಞಾನ-ಬಂಧ-ಮೋಕ್ಷ ಯಾರ ಧರ್ಮವೋ ಅವನು ಸತ್ಯಧರ್ಮಾ.
೫೩೩) ತ್ರಿವಿಕ್ರಮಃ
ಮೂರು ಕಾಲದಲ್ಲಿ (ಭೂತ-ವರ್ತಮಾನ-ಭವಿಷ್ಯತ್), ಮೂರು ಲೋಕಗಳಲ್ಲಿ(ಭೂಃ ಭುವಃ ಸ್ವಃ) ತುಂಬಿ ಸಮಸ್ತ ವೇದ ವಾಚ್ಯನಾಗಿ(ಋಗ್ವೇದ-ಯಜುರ್ವೇದ-ಸಾಮವೇದ) ಮೂರು ವಿಧದ ಜೀವರನ್ನು (ಸಾತ್ವಿಕರು-ರಾಜಸರು-ತಾಮಸರು), ಮೂರು ಅವಸ್ಥೆಗಳಲ್ಲಿ (ಎಚ್ಚರ-ಕನಸು-ನಿದ್ದೆ) ನಿಯಂತ್ರಿಸುವ ಹಾಗೂ ರಕ್ಷಿಸುವ ಭಗವಂತ ತ್ರಿವಿಕ್ರಮಃ.
ಮುಂದುವರೆಯುವುದು...
No comments:
Post a Comment