Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ 5


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸ್ವಯಂಭೂಃ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ |
ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ || 5 || 

37) ಸ್ವಯಂಭೂಃ 

ಸ್ವಯಂಭೂಃ ಅಂದರೆ ತಾನೇ ತಾನಾಗಿ ಪೂರ್ಣವಾಗಿರುವವನು, ತನ್ನಿಂದ ತಾನೆ ಆವಿರ್ಭೂತನಾಗುವವನು.
ನಮ್ಮ ಪೂರ್ಣತೆ ಇನ್ನೊಬ್ಬರು ಕೊಟ್ಟರೆ ಮಾತ್ರ, ಆದರೆ ಭಗವಂತ ಸ್ವಯಂಪೂರ್ಣ. ಭಗವಂತ ಅವತರಿಸಲು ಯಾರು ಕಾರಣ? ಅವನು ಹುಟ್ಟಿಬರುವುದಕ್ಕೆ  ಯಾರೂ ಕಾರಣರಲ್ಲ , ಆತನು  ಸ್ವಯಂಭೂಃ , ಅಂದರೆ  ತಾನೇ ತಾನಾಗಿ ಹುಟ್ಟಿ ಬರುವವನು. ಭಕ್ತರ  ಬಯಕೆ  ಈಡೇರಿಸಲು ಸ್ವಯಂಇಚ್ಛೆಯಿಂದ  ಅವತರಿಸಿ ಬರುತ್ತಾನೆ.
ಭಗವಂತ  ಜ್ಞಾನದಿಂದ-ಜ್ಞಾನದಂತೆ, ದೀಪದಿಂದ-ದೀಪದಂತೆ. ಒಂದು ದೀಪದಿಂದ ಇನ್ನೊಂದು ದೀಪ ಹಚ್ಚಿದರೆ ಮೂಲ ದೀಪದ ಪ್ರಕಾಶ ಕಡಿಮೆ ಆಗುವುದಿಲ್ಲ .ಭಗವಂತ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಅಭಿವ್ಯಕ್ತ  ಆಗುತ್ತಾ ಹೋಗುತ್ತಾನೆ . ಆದರೆ  ಮೂಲವೂ ಪೂರ್ಣ , ಮೂಲದಿಂದ ಬಂದ ಅವತಾರವೂ ಪೂರ್ಣ.
ಈ ರೀತಿ ಅವತಾರಕ್ಕೆ ಮೊದಲೂ ಪೂರ್ಣತೆಯಲ್ಲಿದ್ದು, ಅವತಾರದಲ್ಲೂ ಪೂರ್ಣವಾಗಿ, ಅವತಾರದ ನಂತರ ಮತ್ತೆ ಹೋಗಿ  ಪೂರ್ಣತೆಯಲ್ಲೇ  ಉಳಿಯುವ ಭಗವಂತ ಸ್ವಯಂಭೂಃ .

38) ಶಂಭುಃ

ಶಂ-ಭವತಿ' ಎಂದರೆ ಆನಂದ ರೂಪ,'ಶಂ-ಭವತಿ ಅನೇನ' ಎಂದರೆ ಆನಂದ ಕೊಡುವವನು ಎಂದರ್ಥ.ಇಲ್ಲಿ 'ಶಂ' ಎಂದರೆ ಆನಂದ. ಉದಾಹರಣೆಗೆ  "ಹರಿಃ ಓಮ್, ಶಂ ನೋ ಮಿತ್ರಃ, ಶಂ ವರುಣಃ, ಶಂ ನೋ ಭವತ್ವರ್ಯಮಾ,  ಶಂ ನೋ ಇಂದ್ರೋ ಬೃಹಸ್ಪತಿಃ, ಶಂ ನೋ ವಿಷ್ಣುರುರುಕ್ರಮಃ" ಇಲ್ಲಿ ಶಂ ಎನ್ನುವ ಪದವನ್ನು  ಆನಂದಮಯ ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಎಲ್ಲಾ ಶಾಸ್ತ್ರಗಳೂ  ಭಗವಂತನನ್ನು ಆನಂದಮಯನೆಂದು ಹೇಳುತ್ತವೆ.ಯಾರು ಸ್ವಯಂ ಆನಂದಮಯನೋ , ಯಾರು ಎಲ್ಲರಿಗೂ ಆನಂದವನ್ನು ಕೊಡಬಲ್ಲನೂ ಅವನು ಶಂಭು.

39) ಆದಿತ್ಯಃ 

ಆದಿತ್ಯ ಅಂದರೆ ಅದಿತಿಯ ಮಗ ಎಂಬುದು ಒಂದು ಅರ್ಥ. ಅದಿತಿ ಕಶ್ಯಪ ಮಹರ್ಷಿಯ ಹೆಂಡತಿ ಹಾಗೂ ದೇವತೆಗಳ ತಾಯಿ. ಅದಿತಿಗೆ ಹನ್ನೆರಡು ಮಂದಿ ಮಕ್ಕಳು. ಅವರನ್ನು ದ್ವಾದಶಾದಿತ್ಯರು ಎಂದು ಕರೆಯುತ್ತಾರೆ. ವಿವಸ್ವಾನ್ , ಆರ್ಯಮಾನ್, ಪೂಷನ್, ತ್ವಷ್ಟೃ, ಸವಿತೃ, ಭಗ, ದಾತ, ವಿಧಾತ, ವರುಣ, ಮಿತ್ರ , ಶಕ್ರ, ಉರುಕ್ರಮ -ಇವರೇ ಆ ಹನ್ನೆರಡು ಮಂದಿ ಆದಿತ್ಯರು. ಈ ಹನ್ನೆರಡು ದೇವತೆಗಳೇ ವರ್ಷದ ಹನ್ನೆರಡು ಮಾಸದ ದೇವತೆಗಳು. ಇವರಲ್ಲಿ ಒಬ್ಬ  ಸೂರ್ಯ ,ಒಬ್ಬ ವರುಣ , ಮತ್ತೊಬ್ಬ ಮಿತ್ರ ,ಮತ್ತೊಬ್ಬ ಇಂದ್ರ , ಹಾಗೇ ಕೊನೇ ಮಗನೇ  ವಾಮನ ರೂಪಿ ವಿಷ್ಣು . ಅವನು ಎಲ್ಲರಿಗಿಂತ ಕೊನೆಗೆ ಹುಟ್ಟಿದರೂ, ಆತ ಆದಿಯಲ್ಲಿ ಇದ್ದವನು ಆದ್ದರಿಂದ ಆತ ಆದಿತ್ಯಃ. ಅವನು  ಆದಿ+ತಿ+ಯ ಅಂದರೆ ಆದಿಯಲ್ಲಿ ಜ್ಞಾನಾನಂದ ಸ್ವರೂಪನಾಗಿದ್ದವ, ಎಲ್ಲಕ್ಕೂ ಕಾರಣಕರ್ತ. ಇಷ್ಟೇ ಅಲ್ಲದೆ ಸೂರ್ಯ ಮಂಡಲದಲ್ಲಿ  (ಆದಿತ್ಯನಲ್ಲಿ) ಸನ್ನಿಹಿತನಾಗಿರುವ  ಭಗವಂತನನ್ನು ಆದಿತ್ಯಃ  ಎನ್ನುತ್ತಾರೆ.

40) ಪುಷ್ಕರಾಕ್ಷಃ

ಪುಷ್ಕರ ಎಂದರೆ ಕಮಲ, ಅಕ್ಷ ಎಂದರೆ ಕಣ್ಣು . ಪುಷ್ಕರಾಕ್ಷ ಎಂದರೆ ನೀರನ್ನು ಹೀರುವ ಬಳ್ಳಿಯಲ್ಲಿ ಈಗಷ್ಟೇ  ಅರಳಿದ ಕಮಲದಂತೆ ಅರಳುಗಣ್ಣು ಉಳ್ಳವನು. 'ಅರಳುಗಣ್ಣು' ಎಂದರೆ ಆನಂದಮಯ ವ್ಯಕ್ತಿತ್ವ, ಭಗವಂತ ಅನಂದಮಯಪೂರ್ಣ. ಕಣ್ಣು ಅರಳುವುದು ಆನಂದದ ಜೊತೆಗೆ  ಕಾರುಣ್ಯದ ಸಂಕೇತ ಕೂಡ ಹೌದು. ಪುಷ್ಟಿಕರ ನೋಟ ಉಳ್ಳವನು ಹಾಗೂ ನಮ್ಮನ್ನು ಸದಾ ರಕ್ಷಿಸುವ ಕಾರುಣ್ಯಮೂರ್ತಿ  ಭಗವಂತ ಪುಷ್ಕರಾಕ್ಷಃ.  ವೇದಗಳಲ್ಲಿ  ಹೇಳುವಂತೆ ಯಾವುದರಲ್ಲಿ ಇಡೀ ಪ್ರಪಂಚ ಹುದುಗಿದೆಯೋ ಅದು  “ಹುಟ್ಟದವನ ಹೊಕ್ಕುಳಲ್ಲಿ ಹುಟ್ಟಿತು".  ಹೊಕ್ಕುಳಲ್ಲಿ ಹುಟ್ಟಿದ್ದು ತಾವರೆರೂಪದ ಬ್ರಹ್ಮಾಂಡ (ಬ್ರಹ್ಮನ ಮೊಟ್ಟೆ). 14 ಎಸಳುಗಳುಳ್ಳ ತಾವರೆ ಅಂದರೆ ಹದಿನಾಲ್ಕು ಲೋಕಗಳುಳ್ಳ ಈ ಬ್ರಹ್ಮಾಂಡ. ಆದ್ದರಿಂದ ಭಗವಂತ ಪುಷ್ಕರದಲ್ಲಿ ತುಂಬಿರುವ ಅಕ್ಷ -ಪುಷ್ಕರಾಕ್ಷ.

41) ಮಹಾಸ್ವನಃ

ಮಹಾ ಎಂದರೆ ಮಹತ್ತಾದ , ಸ್ವನ ಎಂದರೆ ನಾದ. ಎಲ್ಲಕ್ಕಿಂತ ಮಹತ್ತಾದ ನಾದವಾದ ವೇದವನ್ನು ಸೃಷ್ಟಿ ಮಾಡಿದವನು ಮಹಾಸ್ವನ. ಮಹಾ+ಅಸು+ಅನ=ಮಹಾಸ್ವನ.ಇಲ್ಲಿ ಅಸು ಎಂದರೆ 'ಇಂದ್ರಿಯ', ಮಹಾಅಸು ಎಂದರೆ  'ಅತ್ಯಂತ ಮುಖ್ಯ ಇಂದ್ರಿಯ. ಅನ ಎಂದರೆ 'ಚಲನೆ'. ದೇಹದಲ್ಲಿ ಇರುವ ಎಲ್ಲಾ ಇಂದ್ರಿಯಗಳಲ್ಲಿ ಉಸಿರು(ಪ್ರಾಣ) ಅತ್ಯಂತ ಮುಖ್ಯ ಇಂದ್ರಿಯ. ಅದ್ದರಿಂದ ಅಸುಗಳಲ್ಲಿ ಮಹಾ ಅಸು ಉಸಿರು(ಮುಖ್ಯಪ್ರಾಣ). ಈ ಮುಖ್ಯಪ್ರಾಣನಿಗೂ ಕೂಡ ಚಲನೆ ಕೊಟ್ಟ ಭಗವಂತ ಮಹಾಸ್ವನಃ.

42) ಅನಾದಿನಿಧನಃ

ಭಗವಂತನಿಗೆ ಆದಿ-ಅಂತ, ಹುಟ್ಟು-ಸಾವು ಎನ್ನುವುದಿಲ್ಲ. ಪ್ರಾಣ(ಅನ)ನಲ್ಲಿ ಇದ್ದು, ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದ ಭಗವಂತ  ಅನಾದಿನಿಧನಃ

43) ಧಾತಾ

ಧಾತಾ ಅನ್ನುವ ಭಗವಂತನ ನಾಮ ಅನೇಕ ಅರ್ಥವನ್ನು  ಕೊಡುತ್ತದೆ. ಇಡೀ ಜಗತ್ತನ್ನು ಧಾರಣೆ ಮಾಡುವ ಮತ್ತು ಪೋಷಣೆ ಮಾಡುವ ಶಕ್ತಿ ಉಳ್ಳವನು,ಎಲ್ಲರಿಗೂ ಏನು  ಬೇಕೋ ಅದನ್ನು ಕೊಟ್ಟವನು, ಎಲ್ಲಾ ನಾಮವನ್ನು ಧರಿಸಿದವನು ಇತ್ಯಾದಿ. ಇಂತಹ   ಭಗವಂತ ಧಾತಾ.

44) ವಿಧಾತಾ

ಸಂಸಾರ ಅವಸ್ಥೆಯಲ್ಲಿ ಮಾತ್ರ ಅಲ್ಲ, ವಿಶಿಷ್ಟ ಅವಸ್ಥೆಯಲ್ಲಿಯೂ ಭಗವಂತ ಧಾತಾ ಅದ್ದರಿಂದ ಆತ ವಿಧಾತಾ.

45) ಧಾತುರುತ್ತಮಃ

ಧಾತುಃ ಎಂದರೆ  ಚತುರ್ಮುಖ ಬ್ರಹ್ಮನಿಗೂ ಉತ್ತಮನಾಗಿರುವವನು ಎಂದರ್ಥ. ಆತ ತ್ರಿಧಾತು ಅಂದರೆ ಮೂರನ್ನು ಧರಿಸಿರುವವನು. ಮೂರು ವೇದಗಳನ್ನು, ಮೂರು ಕಾಲ ಮತ್ತು ಮೂರು ಲೋಕವನ್ನು ಧರಿಸಿರುವ, ಎಲ್ಲರಿಗಿಂತ  ಶ್ರೇಷ್ಠನಾಗಿರುವ ಸರ್ವಾಧಾರನಾದ  ಭಗವಂತ ಧಾತುರುತ್ತಮಃ.

ಮುಂದುವರೆಯುವುದು.....

No comments:

Post a Comment