ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಭಗವಾನ್ ಭಗಹಾನಂದೀ ವನಮಾಲೀ ಹಲಾಯುಧಃ |
ಆದಿತ್ಯೋ ಜ್ಯೋತಿರಾದಿತ್ಯಃ ಸಹಿಷ್ಣುರ್ಗತಿಸತ್ತಮಃ || 60 ||
೫೬೨) ಭಗವಾನ್
ಈ ನಾಮ ಬಹಳ ಪ್ರಸಿದ್ಧವಾದ, ಎಲ್ಲಾ ಭಾಷೆಯಲ್ಲಿ, ಎಲ್ಲಾ ಜಾತಿ-ಧರ್ಮಗಳಲ್ಲಿ ಇರುವ ನಾಮ. ಸಾಮಾನ್ಯವಾಗಿ ಭಗವಂತನಿಗೆ ಬ್ರಹ್ಮ, ಪರಬ್ರಹ್ಮ, ಆತ್ಮ, ಪರಮಾತ್ಮ ಹಾಗೂ ಭಗವಾನ್ - ಈ ನಾಮಗಳು ವಿಶಿಷ್ಟ ನಾಮಗಳು. ಇಲ್ಲಿ 'ಭಗ' ಎಂದರೆ ಭಾಗ್ಯ, ಭಗವಾನ್ ಎಂದರೆ ಭಾಗ್ಯಸ್ವರೂಪ.
ಮಹಾಭಾರತದಲ್ಲಿ ಹೇಳಿದಂತೆ: "ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಶ್ರೀಹ ಜ್ಞಾನ ವೈರಾಗ್ಯ ಯೋಗಸ್ಚೈವ ಶನ್ನುಂ ಭಗಃ". ಆರು ಗುಣಗಳನ್ನು 'ಭಗ' ಶಬ್ದ ಹೇಳುತ್ತದೆ. ಐಶ್ವರ್ಯ, ವೀರ್ಯ, ಯಶಸ್ಸು, ಶ್ರೀ, ಜ್ಞಾನ ಮತ್ತು ವೈರಾಗ್ಯ.
೧) ಐಶ್ವರ್ಯ: ಪೂರ್ಣ ಐಶ್ವರ್ಯ ಅಂದರೆ ಸರ್ವ ಸಮರ್ಥ.
೨) ವೀರ್ಯ: ಶತ್ರುಗಳನ್ನು, ದೋಷವನ್ನು ನಿರ್ನಾಮ ಮಾಡುವ ಶಕ್ತಿ.
೩) ಯಶಸ್ಸು: ಯಶಸ್ಸು ಎಂದರೆ ಕೀರ್ತಿ. ಭಗವಂತನ ಸರ್ವ ನಿಯಾಮಕತ್ವವನ್ನು ಎಲ್ಲರೂ ಕೀರ್ತನೆ ಮಾಡುತ್ತಾರೆ, ಅದರಿಂದ ಯಶಸ್ಸು.
೪) ಶ್ರೀ: ಶ್ರೀ ಎಂದರೆ ಸಂಪತ್ತು. ಇಡೀ ಜಗತ್ತಿನ ಸಮಸ್ತ ವಸ್ತುವು ಯಾರಿಗೆ ಸೇರಿದ್ದೋ ಅವನು ನಿಜವಾದ ಶ್ರೀ. ಈ ಬ್ರಹ್ಮಾಂಡವೇ ಅತೀ ದೊಡ್ಡ ಸಂಪತ್ತು.
೫) ಜ್ಞಾನ: ಜ್ಞಾನಪೂರ್ಣ, ಸರ್ವಜ್ಞ.
೬) ವೈರಾಗ್ಯ: ಯಾವುದರ ಬಗ್ಗೆಯೂ 'ನನ್ನದು' ಅನ್ನುವ ಭಾವನೆ ಇಲ್ಲದಿರುವುದು.
ಈ ಆರು ಗುಣಗಳು ಪೂರ್ಣಪ್ರಮಾಣದಲ್ಲಿರುವ, ಸತ್ವ-ರಜ-ತಮೋಗುಣಗಳ ಸ್ಪರ್ಶವೇ ಇಲ್ಲದವ ಭಗವಾನ್.
೫೬೩) ಭಗಹಾ
ದುಷ್ಟರ ಭಾಗ್ಯವನ್ನು ಕಸಿವವನು ಹಾಗು ಪುಣ್ಯಾತ್ಮರಿಗೆ ಭಾಗ್ಯಪ್ರದನಾಗಿರುವ ಭಗವಂತ ಭಗಹಾ.
೫೬೫) ಆನಂದೀ
ಪೂರ್ಣಾನಂದವುಳ್ಳವನು; ಪೂರ್ಣಾನಂದ ಸ್ವರೂಪ ಭಗವಂತ ಆನಂದೀ.
೫೬೬) ವನಮಾಲೀ
ಇದು ವಿಶೇಷವಾಗಿ ಕೃಷ್ಣಾವತಾರಕ್ಕೆ ಸಂಬಂಧಪಟ್ಟ ಹೆಸರು. ಕೃಷ್ಣ ಗೋಪಾಲಕರ ಜೊತೆ ಗೋವುಗಳನ್ನು ಕಾಯುತ್ತಿದ್ದ. ಆಗ ಪ್ರಕೃತಿಯಲ್ಲಿರುವ ಹೂ, ನವಿಲುಗರಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ. ಕುತ್ತಿಗೆಯಿಂದ ಕಾಲಿನಗಂಟಿನವರೆಗೆ ಹೂ ಮಾಲೆಯನ್ನು ಮಾಡಿ ಹಾಕಿಕೊಳ್ಳುತ್ತಿದ್ದ ಭಗವಂತನನ್ನು ವನಮಾಲೀ ಎನ್ನುತ್ತಿದ್ದರು.
ಪ್ರಪಂಚ ಸೃಷ್ಟಿಯ ಮೊದಲ ಹಂತದಲ್ಲಿ ನಾನಾ ಬಗೆಯ ವನಸ್ಪತಿಗಳ ರೂಪದಲ್ಲಿ ಜೀವಸೃಷ್ಟಿ ಮಾಡಿದ ಭಗವಂತ ವನಮಾಲೀ.
೫೬೭) ಹಲಾಯುಧಃ
ನೇಗಿಲನ್ನು ಆಯುಧವಾಗಿ ಬಳಸಿದ ನರರೂಪಿ ಬಲರಾಮನೊಳಗೆ ಆವಿರ್ಭೂತಿಯಾದ ಭಗವಂತ ಹಲಾಯುಧಃ.
೫೬೮) ಆದಿತ್ಯಃ
ಭೂಮಿಯಲ್ಲಿ ಪ್ರತಿಯೊಂದು ಜೀವದೊಳಗೆ ಅಂತರ್ಯಾಮಿಯಾಗಿರುವ ಭಗವಂತನೇ ಸೂರ್ಯ ಮಂಡಲದಲ್ಲಿ ತುಂಬಿ ಸೂರ್ಯ ಕಿರಣಗಳ ಮೂಲಕ ಶಕ್ತಿಪಾತ ಮಾಡುತ್ತಿದ್ದಾನೆ. ಆದಿತ್ಯನಲ್ಲಿ ಸನ್ನಿಹಿತನಾಗಿರುವ ಭಗವಂತ ಆದಿತ್ಯಃ.
೫೬೯) ಜ್ಯೋತಿರಾದಿತ್ಯಃ.
ಜಗತ್ತಿನಲ್ಲಿ ಯಾವ ಯಾವ ಬೆಳಕುಗಳಿವೆ ಅದರ ಮೂಲ ಭಗವಂತ. ಗೀತೆಯಲ್ಲಿ ಹೇಳಿದಂತೆ:
ಯದಾದಿತ್ಯಗತಂ ತೇಜೋ ಜಗದ್ ಭಾಸಯತೇ s ಖಿಲಮ್ |
ಯಚ್ಚಂದ್ರಮಸಿ ಯಚ್ಚಾಗ್ನೋ ತತ್ ತೇಜೋ ವಿದ್ಧಿ ಮಾಮಕಮ್ ||
ಅಂದರೆ "ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲ ಬೆಳಗುವ ಬೆಳಕು, ಚಂದ್ರನಲ್ಲಿ, ಬೆಂಕಿಯಲ್ಲಿ ಕೂಡ, ಅದು ನನ್ನ ಬೆಳಕೆಂದು ತಿಳಿ". ಸಮಸ್ತ ಬೆಳಕಿನ ಪುಂಜಗಳನ್ನು ಬೆಳಗಿಸುವ ಮೂಲ ಜ್ಯೋತಿ, ಬೆಳಕಿನ ಮೂಲ ಕಾರಣಗಳಾದ ಸೂರ್ಯಾದಿಗಳಲ್ಲಿ ತುಂಬಿದ ಜ್ಞಾನ ಮೂರ್ತಿ ಭಗವಂತ ಜ್ಯೋತಿರಾದಿತ್ಯಃ
೫೭೦) ಸಹಿಷ್ಣುಃ
ಭಗವಂತ ಅಪರಾಧಗಳನ್ನು ಸಹಿಸುವ ಕರುಣಾಮೂರ್ತಿ. ನಾವು ಕೆಲವೊಮ್ಮೆ ದೇವರನ್ನು ತಪ್ಪಾಗಿ ತಿಳಿಯುತ್ತೇವೆ, ಬಯ್ಯುತ್ತೇವೆ, ತಪ್ಪು ಉಪಾಸನೆ ಮಾಡುತ್ತೇವೆ.ಆದರೆ ಆತ ಭಕ್ತರ ಸರ್ವಾಪರಾಧವನ್ನು ಮನ್ನಿಸುವ ಮಹಾ ಸಹಿಷ್ಣು, ಯಾರಾದರೂ ಅನನ್ಯ ಭಕ್ತಿಯಿಂದ ಕರೆದಾಗ ಅವರ ಸರ್ವಾಪರಾಧವನ್ನು ಮನ್ನಿಸುವ ಕರುಣಾಮೂರ್ತಿ. ಆದರೆ ತಪ್ಪುಮಾಡಿದವರ ತಪ್ಪನ್ನು ಭಗವಂತ ಕ್ಷಮಿಸುವುದಿಲ್ಲ. ಏಕೆಂದರೆ ಕ್ಷಮೆ ನಮ್ಮನ್ನು ಕೆಡಿಸಬಹುದು ಎನ್ನುವ ಕಾರುಣ್ಯ ಭಗವಂತನದ್ದು.
೫೭೧) ಗತಿಸತ್ತಮಃ
ನಮ್ಮ ಜೀವದ ಗತಿಯನ್ನರಿತ, ಎಲ್ಲರಿಗಿಂತ ಎತ್ತರದಲ್ಲಿರುವ ಕಾರುಣ್ಯಮೂರ್ತಿ.'ಗತಿ' ಎಂದರೆ ನಾವು ಹೋಗಿ ಸೇರಬೇಕಾದ ತಾಣ. ಗಮ್ಯವಾದ ಸ್ಥಾನದಲ್ಲಿ ಶ್ರೇಷ್ಠವಾದ ಹಿರಿಯ ತಾಣ ಭಗವಂತ ಗತಿಸತ್ತಮಃ.
ಮುಂದುವರೆಯುವುದು...
No comments:
Post a Comment