ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಓಜಸ್ತೇಜೋ ದ್ಯುತಿಧರಃ ಪ್ರಕಾಶಾತ್ಮಾ ಪ್ರತಾಪನಃ |
ಋದ್ಧಃ ಸ್ಪಷ್ಟಾಕ್ಷರೋ ಮಂತ್ರಶ್ಚಂದ್ರಾಂಶುರ್ಭಾಸ್ಕರದ್ಯುತಿಃ ||30||
೨೭೭) ಓಜಸ್ತೇಜೋ ದ್ಯುತಿಧರಃ
ಆತ್ಮಬಲ,ಪರಾಕ್ರಮ ಹಾಗೂ ಕಾಂತಿಗಳಿಗಾಸರೆಯಾದ ಭಗವಂತ ಓಜಸ್ತೇಜೋ ದ್ಯುತಿಧರಃ
೨೭೮) ಪ್ರಕಾಶಾತ್ಮಾ
ಭಗವಂತ ಪ್ರಕಾಶ ಸ್ವರೂಪ; ಪರಿಶುದ್ಧವಾದ ಜ್ಞಾನದ ಬೆಳಕು ನೀಡುವವ. ಗೀತೆಯಲ್ಲಿ ಹೇಳುವಂತೆ:
ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ
ತೇಷಾಮಾದಿತ್ಯವಜ್ ಜ್ಞಾನಂ ಪ್ರಕಾಶಯತಿ ತತ್ ಪರಮ್
ಅಂದರೆ ಭಗವಂತನ ಅರಿವಿನಿಂದ ಅವಿದ್ಯೆಯನ್ನು ಅಳಿಸಿಕೊಂಡವರ ಆ 'ಅರಿವು' ಸೂರ್ಯನಂತೆ ಪರತತ್ತ್ವವನ್ನು ಬೆಳಗಿಸುತ್ತದೆ. ಹೀಗೆ ಪ್ರಕಾಶ ಸ್ವರೂಪನಾದ ಭಗವಂತ ಪ್ರಕಾಶಾತ್ಮಾ.
೨೭೯) ಪ್ರತಾಪನ.
ಶತ್ರುಗಳನ್ನು ಸದೆಬಡಿಯುವ ಪ್ರತಾಪಶಾಲಿ, ಬೆಂಕಿಯೊಳಗಿರುವವನು, ಸೂರ್ಯನೊಳಗಿರುವ ಭಗವಂತ ಪ್ರತಾಪನ. ಅರ್ಜುನನಿಗೆ ವಿಶ್ವರೂಪ ದರ್ಶನದಲ್ಲಿ ಭಗವಂತ ಕಾಣಿಸಿದ್ದು ಹೀಗೆ:
ಲೇಲಿಹ್ಯಸೇ ಗ್ರಸಮಾನಃ ಸಮಂತಾತ್ ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿಃ
ತೇಜೋಭಿರಾಪೂರ್ಯ ಜಗತ್ ಸಮಗ್ರಂ ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ
ಎಲ್ಲೆಲ್ಲೂ ತುಂಬಿರುವ, ಬೆಂಕಿ ಕಾರುವ ಬಾಯಿಗಳಿಂದ ಎಲ್ಲಾ ಲೋಕಗಳನ್ನು ಎಲ್ಲೆಡೆಯು ನುಂಗಿ ನೊಣೆಯುತ್ತಿರುವ, ವಿಶ್ವವನ್ನು ಕೋರೈಸಿ ಸುಡುವ ಮೈಯ ಹೊಳಪುಳ್ಳ ಭಗವಂತ. ಇದು ಭಗವಂತನ ದುಷ್ಟ ನಿಗ್ರಹ ರೂಪ. ಇಂತಹ ಭಗವಂತ ಪ್ರತಾಪನ.
೨೭೯) ಋದ್ಧ
ಋದ್ಧ ಎಂದರೆ ಪೂರ್ಣನಾದವನು. ಭಗವಂತನೊಬ್ಬನೇ ಎಂದೆಂದೂ ಪರಿಪೂರ್ಣ. ಅದಕ್ಕಾಗಿ ವೇದದಲ್ಲಿ ಬರುವ ಶಾಂತಿ ಮಂತ್ರಗಳಲ್ಲಿ ಹೀಗೆ ಹೇಳಿದ್ದಾರೆ:
ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಶ್ಯತೇ
ಓಂ ಶಾಂತಿಃ ಶಾಂತಿಃ ಶಾಂತಿಃ
ಅಂದರೆ ಅದೂ ಪೂರ್ಣ ಹಾಗು ಇದೂ ಪೂರ್ಣ. ಪೂರ್ಣದಿಂದ ಪೂರ್ಣಬರುತ್ತದೆ, ಪೂರ್ಣದಲ್ಲಿ ಪೂರ್ಣ ಸೇರಿ ಪೂರ್ಣವಾಗುತ್ತದೆ. ಇಂತಹ ಭಗವಂತ ಋದ್ಧ.
೨೮೧) ಸ್ಪಷ್ಟಾಕ್ಷರೋ ಮಂತ್ರ.
(ಸ್ಪಷ್ಟಾಕ್ಷರಃ+ಮಂತ್ರಃ) ಸ್ಪಷ್ಟವಾಗಿ ಭಗವದ್ ವಾಚಕಗಳಾದ ಅಕ್ಷರಗಳುಳ್ಳ ಮಂತ್ರಗಳಿಂದ ವಾಚ್ಯನಾದವನು. ಉದಾಹರಣೆಗೆ ಮೂಲ ಮಂತ್ರವಾದ "ಓಂ ನಮೋ ನಾರಾಯಣಾಯ" ಈ ಅಷ್ಟಾಕ್ಷರಿ ಮಂತ್ರದಲ್ಲಿ 'ಓಂ', 'ನಮೋ', 'ನಾರಾಯಣಾಯ' ಎಲ್ಲವೂ ಭಗವಂತನ ನಾಮ. ಇಷ್ಟೇ ಅಲ್ಲದೆ ಪ್ರತಿಯೊಂದು ಅಕ್ಷರ ಕೂಡಾ ಭಗವಂತನ ನಾಮವನ್ನೇ ಹೇಳುತ್ತದೆ. ಇಂತಹ ಭಗವಂತ ಸ್ಪಷ್ಟಾಕ್ಷರೋ ಮಂತ್ರಃ.
೨೮೨) ಚಂದ್ರಾಂಶು.
'ಚಂದ್ರ' ಮತ್ತು 'ಚಂದ' ಎರಡೂ ಒಂದೇ ಅರ್ಥವನ್ನು ಕೊಡುವ 'ಚದಿ' ಧಾತುವಿನಿಂದ ಬಂದ ಪದ. 'ಚಡಿ' ಧಾತುವಿನಿಂದ ಇದು 'ಚಂಡಾ' ಆಗುತ್ತದೆ. ಚಂದ್ರ ಎಂದರೆ ಬಹಳ ತಂಪಾದ ತುಂಬಾ ಖುಷಿಯನ್ನು ಕೊಡುವ ಅಹ್ಲಾದಕರ ಎಂದರ್ಥ. ಚಂದ್ರ+ಅಂಶ ಎಂದರೆ ಜಗತ್ತಿಗೆಲ್ಲಾ ತಂಪನ್ನೀಯುವವ. ಭಗವಂತನನ್ನು ಧನ್ವಂತರಿಯಲ್ಲಿ ಹೀಗೆ ಹೇಳುತ್ತಾರೆ "ಶೀತಾಂಶು ಮಂಡಲಗತಂ ಸ್ಮರತಾತ್ಮ ಸಂಸ್ಥಂ" ಎಂದರೆ ಚಂದ್ರಮಂಡಲದಲ್ಲಿ ಕುಳಿತು ಚಂದ್ರನ ಕಿರಣಗಳ ಮೂಲಕ ಅಮೃತವನ್ನು ಕೆಳಕ್ಕೆ ಹರಿಸಿ ನಮಗೆ ಬದುಕಲು ಬೇಕಾದ ಚೈತನ್ಯ ಶಕ್ತಿ ಕೊಡುವವನು. ನಮ್ಮ ಒಳಗೆ ಕತ್ತಲು ತುಂಬಿದೆ. ಆ ಕತ್ತಲನ್ನು ಹೋಗಲಾಡಿಸಲು ಚಂದ್ರಾಂಶುವಾದ ಭಗವಂತನ ಬೆಳದಿಂಗಳು ಅಗತ್ಯ.
೨೮೩) ಭಾಸ್ಕರದ್ಯುತಿ.
ಯೋಗಿಗಳಿಗೆ ಭಗವಂತ ಒಳಗಣ್ಣಿನಲ್ಲಿ ಸಾವಿರ ಸೂರ್ಯರು ಏಕಕಾಲದಲ್ಲಿ ಉದಯಿಸಿದರೆ ಎಷ್ಟು ಪ್ರಖರವಾಗಿರುತ್ತದೋ ಅಷ್ಟು ಪ್ರಖರವಾಗಿ ಕಾಣಿಸುತ್ತಾನೆ. ಆದರೆ ಚಂದ್ರಾಂಶುವಾದ ಭಗವಂತ ಅಷ್ಟೇ ತಂಪು ಮತ್ತು ಅಹ್ಲಾದಮಯ. ಸೂರ್ಯನಂತೆ ಪ್ರಖರ ಆದರೆ ಚಂದ್ರನಂತೆ ತಂಪಾದ ಭಗವಂತ ಭಾಸ್ಕರದ್ಯುತಿ.
ಮುಂದುವರೆಯುವುದು....
No comments:
Post a Comment