Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ-22


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಅಮೃತ್ಯುಃ ಸರ್ವದೃಕ್ ಸಿಂಹಃ ಸಂಧಾತಾ ಸಂಧಿಮಾನ್ ಸ್ಥಿರಃ |
ಅಜೋ ದುರ್ಮರ್ಷಣಃ ಶಾಸ್ತಾ ವಿಶ್ರುತಾತ್ಮಾ ಸುರಾರಿಹಾ || 22 ||

೧೯೯) ಅಮೃತ್ಯು

ಭಗವಂತ ಮೃತ್ಯು ಇಲ್ಲದವನು. ಮೃತ್ಯುವಿಗೆ ಇನ್ನೊಂದು ಹೆಸರು 'ಅಪಸ್ಮೃತಿ', ಅಂದರೆ ನೆನಪನ್ನು ಅಳಿಸುವುದು. ಭಗವಂತ ಮೃತ್ಯುವನ್ನು ದಾಟಿನಿಂತವ. ಇತರ ದೇವಾದಿದೇವತೆಗಳಿಗೂ ಕೂಡ ಮೋಕ್ಷಕ್ಕೆ ಮೊದಲು ಮೃತ್ಯುವಿದೆ. ನಮಗೆ ಮೃತ್ಯುವೇ ಮೋಕ್ಷದ ಮಾರ್ಗ. ಅನೇಕ ಮೃತ್ಯುವಿನ ಬಳಿಕ, ಮೃತ್ಯು ರಹಿತ ಭಗವಂತನ ಸಾನ್ನಿಧ್ಯವಾದ ಮೋಕ್ಷ ದೊರೆಯುತ್ತದೆ.

೨೦೦) ಸರ್ವದೃಕ್

ಭಗವಂತನಿಗೆ ತಿಳಿಯಲಾಗದ್ದು ಯಾವುದೂ ಇಲ್ಲ. ಅವನು ಎಲ್ಲವನ್ನೂ ಕಾಣುವವನು. ನಮಗೆ ಈ ಪ್ರಪಂಚವನ್ನು ನೋಡುವ ಶಕ್ತಿಯನ್ನು ಕರುಣಿಸಿದವನು. ಸಾಕ್ಷಿ ಮತ್ತು ಸರ್ವದೃಕ್ ಸುಮಾರಾಗಿ ಒಂದೇ ಅರ್ಥವನ್ನು ಕೊಡುತ್ತದೆ. ಹೀಗೆ ಸರ್ವವನ್ನೂ ಕಾಣಬಲ್ಲ ಭಗವಂತ ಸರ್ವದೃಕ್.

೨೦೧) ಸಿಂಹಃ

ಸಿಂಹಃ ಎಂದರೆ ಸರ್ವ ಸಂಹಾರಕ! ಯಾವುದೂ ನಮಗೆ ಬೇಡವಾಗಿದೆಯೋ ಅದನ್ನು ಸಂಹಾರ ಮಾಡುವವನು. ನಮಗೆ ನಿಜವಾಗಿ ಏನು ಬೇಕು ಎನ್ನುವ ಅರಿವು ಕೂಡಾ ನಮಗಿರುವುದಿಲ್ಲ. ಭಗವಂತನಲ್ಲಿ ನಮ್ಮ ಬೇಕು-ಬೇಡಗಳ ಪಟ್ಟಿಯಿರುತ್ತದೆ ಹಾಗೂ ಅದು ನಮ್ಮ ಪಟ್ಟಿಗಿಂತ ತೀರ ಭಿನ್ನವಾಗಿರಬಹುದು. ನಾವು ಅನೇಕ ಕಾಯಿಲೆಯಿಂದ ಬಳಲುತ್ತಿದ್ದರೂ ಕೂಡ ನಮಗೆ ಬದುಕಬೇಕು ಎನ್ನುವ ಆಸೆ ಇರುತ್ತದೆ. ಆದರೆ ಈ ಸ್ಥಿತಿಯಲ್ಲಿ ಸಾವು ನಿಜವಾದ ವರ. ಈ ಸ್ಥೂಲ ಶರೀರದಲ್ಲಿದ್ದು ಒದ್ದಾಡುತ್ತಿರುವ ಜೀವ ತನ್ನ ಸ್ವಾತಂತ್ರ್ಯಕ್ಕಾಗಿ ಕಾದು ಕುಳಿತಿರುತ್ತದೆ. ಏಕೆಂದರೆ ಕಾಯಿಲೆ ಮತ್ತು ಅಂಗ ಹೀನತೆ ಕೇವಲ ಸ್ಥೂಲ ಶರೀರಕ್ಕೆ ಸಂಬಂಧಪಟ್ಟಿದ್ದೇ ಹೊರತು, ಸೂಕ್ಷ್ಮ ಶರೀರಕ್ಕಲ್ಲ. ಆದ್ದರಿಂದ ಸಾವು ಜೀವವನ್ನು ಅದರ ಸಹಜ ಸ್ಥಿತಿಗೆ ಕೊಂಡೊಯ್ಯವ ಸಹಜ ಕ್ರಿಯೆ. ಪಾಂಚಭೌತಿಕವಾದ ಈ ಶರೀರದ ಸಂಹಾರವಾಗದೆ, ನಮಗೆ ಮುಕ್ತಿಯಿಲ್ಲ. ಆದರೆ ಆತ್ಮಹತ್ಯೆ ಮಹಾ ಪಾಪ. ಹಿಮಾಲಯದಲ್ಲಿರುವ ಮಹಾತ್ಮ ಸಾಧುಗಳಿಗೆ ದೇಹ ತ್ಯಾಗ ಎನ್ನುವುದು ತೀರಾ ಸಹಜ ಮತ್ತು ಆನಂದದ ಕ್ರಿಯೆ, ಅವರಿಗೆ ತಮ್ಮ ಸಾವಿನ ದಿನಾಂಕ ಗೊತ್ತಿರುತ್ತದೆ. ಸ್ವಾಮಿರಾಮ್ ಅವರು ಬರೆದ "ಲಿವಿಂಗ್ ವಿಥ್ ಹಿಮಾಲಯನ್ ಮಾಸ್ಟರ್ಸ್" ಎನ್ನುವ ಪುಸ್ತಕದಲ್ಲಿ ಈ ಬಗ್ಗೆ ದಾಖಲೆಗಳಿವೆ. ನಮ್ಮಲ್ಲಿರುವ ದೋಷದ ನಿವಾರಣೆಗಾಗಿ ನರಸಿಂಹ ಸ್ವರೂಪವನ್ನು ಉಪಾಸನೆ ಮಾಡುವುದು ಶಾಸ್ತ್ರೋಕ್ತ. ಹೀಗೆ ಎಲ್ಲಾ ದೋಷಗಳ ಸಂಹಾರಕ, ಜೀವದ ಸಂಹಾರಕ ಮತ್ತು ಪೌರುಷದ ಗಣಿಯಾದ ಸರ್ವಶ್ರೇಷ್ಠ ಭಗವಂತ "ಸಿಂಹಃ".

೨೦೨) ಸಂಧಾತಾ

ಧಾತಾ, ವಿಧಾತಾ, ಸಂಧಾತ ಇತ್ಯಾದಿ ನಾಮಗಳನ್ನು ವೇದಗಳಲ್ಲಿ ಕಾಣಬಹುದು. ಇಲ್ಲಿ 'ಧಾತಾ' ಎಂದರೆ ನಮ್ಮನ್ನು ಪೋಷಣೆ ಮಾಡುವ ಶಕ್ತಿ. ಸಂಧಾತ ಎಂದರೆ ಸರ್ವರನ್ನು ಧಾರಣೆ ಮಾಡಿ, ಸರ್ವರನ್ನು ಪೋಷಣೆ ಮಾಡುವ ಮಹಾ ಕರುಣಾ ಮೂರ್ತಿ.

ಇನ್ನು ಸಂಧಾತಾ ಎಂದರೆ ಜೋಡಿಸುವುದು ಎನ್ನುವ ಅರ್ಥವನ್ನೂ ಕೊಡುತ್ತದೆ. ಈ ಬ್ರಹ್ಮಾಂಡದಲ್ಲಿ ಜ್ಯೋತಿರ್ವರ್ಷದಿಂದಲೂ ಅಳೆಯಲು ಸಾಧ್ಯವಾಗದಷ್ಟು ದೂರದವರೆಗೆ, ನಮ್ಮ ಕಣ್ಣಿಗೆ ಕಾಣುವ, ಕಾಣದಿರುವ ಎಲ್ಲಾ ಗ್ರಹ-ಗೋಲಗಳನ್ನು ನಿರಾಲಂಬ ಆಕಾಶದಲ್ಲಿ ನಿಯಮಿತವಾಗಿ ಜೋಡಿಸಿ ಹಿಡಿದಿಟ್ಟಿರುವ ಶಕ್ತಿ ಭಗವಂತ "ಸಂಧಾತಾ".

೨೦೩) ಸಂಧಿಮಾನ್

ನಮ್ಮ ದೇಹದಲ್ಲಿರುವ ೩೬೦ ಮೂಳೆಗಳ ಅಪೂರ್ವ ಜೋಡಣೆ, ಅಸ್ಥಿ ಸಂಧಿಯಲ್ಲಿನ ಚಲನೆ ಮತ್ತು ನಿರ್ವಹಣೆಯ ಅಪೂರ್ವ ವಿನ್ಯಾಸಕಾರ ಭಗವಂತ ಸಂಧಿಮಾನ್. ಅನೇಕ ವರ್ಣಗಳ ಸಂಧಿಯಿಂದ ಶಬ್ದಗಳ ರಚನೆ, ಶಬ್ದಗಳ ಸಂಧಿಯಿಂದ ವಾಕ್ಯದ ರಚನೆ, ವಾಕ್ಯಗಳ ಸಂಧಿಯಿಂದ ಗ್ರಂಥಗಳ ರಚನೆ, ಹೀಗೆ ಅಕ್ಷರಗಳ ಸಮಾಗಮದಿಂದ ಹೊಸ ಅರ್ಥದ ಪದ ಹಾಗೂ ಗ್ರಂಥ ಸೃಷ್ಟಿಮಾಡುವ ಭಗವಂತ ಸಂಧಿಮಾನ್. ಇಷ್ಟೇ ಅಲ್ಲದೆ ಗಂಡು ಹೆಣ್ಣುಗಳ ಸಮಾಗಮದಲ್ಲಿ ಸನ್ನಿಹಿತನಾಗಿದ್ದು, ಜೀವದ ಸೃಷ್ಟಿಗೆ ಕಾರಣನಾದ ಭಗವಂತ ಸಂಧಿಮಾನ್.

೨೦೪) ಸ್ಥಿರಃ

ಭಗವಂತ ಬದಲಾಗದವನು, ಅವನಿಗೆ ಬಾಲ್ಯ-ಯೌವನ-ಮುದಿತನವೆನ್ನುವುದಿಲ್ಲ. ಅವನು ಅಚಲ. ಹೀಗೆ ಅಚಲ ಮತ್ತು ಅನಂದಮಯನಾಗಿ ಎಲ್ಲೆಡೆ ತುಂಬಿರುವ ಭಗವಂತ ಸ್ಥಿರಃ.

೨೦೫) ಅಜ

ಅಜ ಎಂದರೆ ಎಂದೂ ಹುಟ್ಟದವನು. ಎಲ್ಲರೂ ಭಗವಂತನ ಮಕ್ಕಳು, ಆದರೆ ಆತ ಯಾರಿಗೂ ಹುಟ್ಟಿದವನಲ್ಲ. ಭಗವಂತನ ಹುಟ್ಟಿನ ಬಗ್ಗೆ ಚರ್ಚೆ 'ಬೀಜ ಮೊದಲೋ ಮರ ಮೊದಲೋ' ಎನ್ನುವ ಚರ್ಚೆಯಂತೆ. ಆತನ ತಂದೆ ಯಾರೂ ಅಲ್ಲ. ಏಕೆಂದರೆ ಅವನಿಗೆ ಹುಟ್ಟು-ಸಾವು ಎಂಬುದಿಲ್ಲ. ಇನ್ನು ಅಜಃ ಎಂದರೆ ಎಲ್ಲಾ ಕಡೆ ವ್ಯಾಪಿಸಿರುವವನು ಕೂಡಾ ಹೌದು. ಅ+ಜ-ಅಜಃ. ಇಲ್ಲಿ 'ಅ' ಎಂದರೆ 'ಅಲ್ಲ' ಅಥವಾ ಇಲ್ಲ! ಅಂದರೆ ಅವನು ನಾವು ತಿಳಿದ ಯಾವ ವಸ್ತುವೂ ಅಲ್ಲ, ಅವನಲ್ಲಿ ಯಾವ ದೋಷವೂ ಇಲ್ಲ. 'ಜ' ಎಂದರೆ 'ಜನಕ'. ಭಗವಂತ ಎಲ್ಲರ ತಂದೆ.

೨೦೬) ದುರ್ಮರ್ಷಣ

'ಮರ್ಷಣ' ಎಂದರೆ ಎಂತಹ ವಿರೋಧವನ್ನೂ ತಡೆಯಬಲ್ಲ ಶಕ್ತಿ. ದುರ್ಮರ್ಷಣ ಎಂದರೆ ಯಾರೂ ತಡೆಯಲು ಅಸಾಧ್ಯವಾದ ಶಕ್ತಿ. ಭಗವಂತನನ್ನು ತಡೆದು ನಿಲ್ಲುವ ಶಕ್ತಿ ಇನ್ನೊಂದಿಲ್ಲ. ಸರ್ವಜ್ಞನಾದ ಆತನ ಆನಂದ ಸ್ವರೂಪ ಎಲ್ಲಾ ಕಡೆ ತುಂಬಿ ತುಳುಕುತ್ತಿರುತ್ತದೆ ಹಾಗೂ ಅದನ್ನು ತಡೆಯಲು ಯಾರಿಂದಲೂ ಸಾದ್ಯವಿಲ್ಲ.

೨೦೭) ಶಾಸ್ತಾ

ಶಾಸ್ತಾ ಎಂದರೆ ಶಾಸನ ಮಾಡುವವನು, ಕರ್ಮಕ್ಕೆ ತಕ್ಕಂತೆ ಜೀವರ ನಿಯಮನ ಮಾಡುವವವನು. ಭಗವಂತನ ನಿಯಮದಲ್ಲಿ ಸತ್ಯ, ಅಸತ್ಯ, ಹಿಂಸೆ, ಅಹಿಂಸೆ, ಧರ್ಮ-ಅಧರ್ಮಗಳಿಗೆ ವಿಶಿಷ್ಟವಾದ ವಿವರಣೆಯಿದೆ. ಇನ್ನೊಬ್ಬರ ಕ್ಷೇಮಕ್ಕೋಸ್ಕರ ಹೇಳುವ ಸುಳ್ಳು ಸತ್ಯ! ನಮ್ಮ ಸ್ವಾರ್ಥಕ್ಕೋಸ್ಕರ ಇನ್ನೊಬ್ಬರಿಗೆ ತೊಂದರೆಯಾಗುವಂತೆ ಹೇಳುವ ಸತ್ಯ ಸುಳ್ಳು! ಸದ್ಭಾವನೆಯಿಂದ ಮಾಡಿದ ಕಾರ್ಯ ಧರ್ಮ. ಸ್ವರಕ್ಷಣೆ, ದೇಶ ರಕ್ಷಣೆ ಕಾರ್ಯದಲ್ಲಿ ನಮ್ಮಿಂದ ನಡೆಯುವ ಹಿಂಸೆ ಅಹಿಂಸೆ! ಭಗವಂತನ ಈ ವಿಶಿಷ್ಟ ನಿಯಮಗಳ ಅನೇಕ ದೃಷ್ಟಾಂತಗಳನ್ನು ಮಹಾಭಾರತ ಅಥವಾ ಕೃಷ್ಣಾವತಾರದಲ್ಲಿ ಕಾಣುತ್ತೇವೆ. ಮೇಲ್ನೋಟಕ್ಕೆ ಕೃಷ್ಣ ಸುಳ್ಳು ಹೇಳಿಸಿದ, ಮೋಸ ಮಾಡಿಸಿದ ಎನ್ನುವಂತೆ ಕಾಣುವ ಅನೇಕ ಘಟನೆಗಳ ಹಿಂದೆ ಭಗವಂತನ ಕಾರುಣ್ಯಪೂರ್ಣ ಉದ್ದೇಶ ಅಡಗಿದೆ. ಹೀಗೆ ಶಾಸನಗಳನ್ನು ಬೋಧನೆ ಮತ್ತು ನೈಜ ಘಟನೆಗಳ ಮೂಲಕ ನಮ್ಮ ಮುಂದೆ ಇರಿಸಿದ ಭಗವಂತ ಶಾಸ್ತಾ.

೨೦೮) ವಿಶ್ರುತಾತ್ಮಾ

ವಿಶ್ರುತ ಎಂದರೆ ಎಲ್ಲರಿಂದ ಶ್ರುತನಾದವನು. ಸರ್ವ ಶಾಸ್ತ್ರಗಳಲ್ಲಿ ಖ್ಯಾತನಾದ, ಜ್ಞಾನಿಗಳಿಗೆ ಆತ್ಮೀಯನಾದ ಭಗವಂತ ವಿಶ್ರುತಾತ್ಮಾ.

೨೦೯) ಸುರಾರಿಹಾ

ಸುರರು ಎಂದರೆ ಆನಂದದ ಅರಿವಿನಲ್ಲಿ ಅಥವಾ ಭಗವಂತನ ಅರಿವಿನಲ್ಲಿ ಬದುಕುವವರು. ಸುರರಿಗೆ ಅರಿಗಳು ಸುರಾರಿಗಳು. ಭೋಗ ಭಾಗ್ಯಗಳಿಂದ ಆಚೆಗೆ ಏನೂ ಇಲ್ಲ ಎಂದು ತಿಳಿದು, ನಿಜವಾದ ಆನಂದದ ಅರಿವಿಲ್ಲದೆ ಬದುಕುವವರು ಸುರಾರಿಗಳು. ಇಂತಹ ದೇವತೆಗಳ ಹಗೆಗಳನ್ನು ಸಾವಿನ ಕಡೆಗೆ ತಳ್ಳುವ ಭಗವಂತ ಸುರಾರಿಹಾ.

ಮುಂದುವರೆಯುವುದು....

No comments:

Post a Comment