Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -39


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಅತುಲಃ ಶರಭೋ ಭೀಮಃ ಸಮಯಜ್ಞೋ ಹವಿರ್ಹರಿಃ |
ಸರ್ವಲಕ್ಷಣಲಕ್ಷಣ್ಯೋ ಲಕ್ಷ್ಮೀವಾನ್ ಸಮಿತಿಂಜಯಃ || 39 ||

೩೫೭) ಅತುಲಃ

ಭಗವಂತ ಯಾವುದೇ ತುಲನೆಗೆ ನಿಲುಕುವವನಲ್ಲ. ಆತನನ್ನು ಇನ್ನೊಂದು ವಸ್ತುವಿನೊಂದಿಗೆ ತುಲನೆ ಮಾಡಲು ಸಾದ್ಯವಿಲ್ಲ; ಏಕೆಂದರೆ ಭಗವಂತ ನಮಗೆ ತಿಳಿದ ಯಾವುದೇ ವಸ್ತುವಿನಂತಿಲ್ಲ. ಭಗವಂತನನ್ನು ತಿಳಿಸುವ ಅತಿದೊಡ್ಡ ಬೀಜಾಕ್ಷರ ಓಂಕಾರದಲ್ಲಿ(ಅ+ಉ+ಮ) ಬರುವ ಮೊದಲ ಅಕ್ಷರ ಅ 'ಅಲ್ಲ' ಎನ್ನುವ ಅರ್ಥವನ್ನು ಕೊಡುತ್ತದೆ. ಅಂದರೆ ಭಗವಂತ ನಿನಗೆ ತಿಳಿದ ಯಾವುದೇ ವಸ್ತುವಲ್ಲ ಹಾಗು ಆತನನ್ನು ಪೂರ್ಣವಾಗಿ ತಿಳಿಯಲು ಸಾದ್ಯವಿಲ್ಲ ಎಂದರ್ಥ. ಭಗವಂತನಿಗೆ ಸದೃಶವಾದ ಯಾವುದೇ ವಸ್ತುವಿಲ್ಲ. ಹೀಗೆ ಸರಿಸಾಟಿಯಿಲ್ಲದ, ಎಲ್ಲಾ ಪ್ರಶ್ನೆಗೂ ಪ್ರಶ್ನೆಯಾಗಿ ಉಳಿಯುವ ಭಗವಂತ ಅತುಲಃ.

೩೫೮) ಶರಭಃ

ಇಲ್ಲಿ ಶರ ಎಂದರೆ ಒಂದು ದಿನ ಬಿದ್ದು ಹೋಗುವ ಶರೀರ. ಶರಭ ಎಂದರೆ ನಮ್ಮ ಶರೀರದೊಳಗೆ ಬೆಳಗುವ ಶಕ್ತಿ. ಹೊರಗಣ್ಣನ್ನು ಮುಚ್ಚಿ ಒಳಗಣ್ಣಿನಿಂದ ನೋಡಿದಾಗ ಮಾತ್ರ ಶರೀರದೊಳಗಿನ ಪ್ರಕಾಶಮಾನವಾಗಿರುವ ಭಗವಂತನನ್ನು ಕಾಣಬಹುದು. ಇಡೀ ಪ್ರಪಂಚದಲ್ಲಿ ತುಂಬಿರುವ; ಪ್ರಳಯ ಕಾಲದಲ್ಲಿ ಇಡೀ ಪ್ರಪಂಚವನ್ನು ಸಂಹಾರ ಮಾಡುವ ಶಕ್ತಿ, ಅಣುವಿನೊಳಗೆ ಅಣುವಾಗಿ ಎಲ್ಲರಲ್ಲೂ ತುಂಬಿದ್ದಾನೆ. ಇಂತಹ ಭಗವಂತನನ್ನು ತಿಳಿಯಬೇಕಾದರೆ ನಮ್ಮ ಮನಸ್ಸನ್ನು ಶರ(ಬಾಣ)ವಾಗಿಸಿ ಆತನೆಡೆಗೆ ಗುರಿಯಿಟ್ಟು ಸಾಗಬೇಕು.(ಇಲ್ಲಿ ಬಾಣ ಎಂದರೆ ಏಕಾಗ್ರತೆ). ಮನಸ್ಸು ಮತ್ತು ಆತ್ಮ ಬಾಣವಾಗಿ ಭಗವಂತನ ಪಾದವನ್ನು ಸೇರಿದಾಗ ಆತ ನಮಗೆ ತಿಳಿಯುತ್ತಾನೆ.
ಪುರಾಣಗಳಲ್ಲಿ ಶರಭ ಎನ್ನುವ ಪ್ರಾಣಿಯ ಉಲ್ಲೇಖವಿದೆ. ಈ ಪ್ರಾಣಿ ಎಂಟು ಕಾಲುಗಳುಳ್ಳ ಅತ್ಯಂತ ಬಲಿಷ್ಠ ಪ್ರಾಣಿಯಾಗಿತ್ತು. ಆದರೆ ಈ ಪ್ರಾಣಿಯ ಯಾವುದೇ ಕುರುಹು ನಮಗೆ ದೊರೆತಿಲ್ಲ. ಇಂತಹ ವಿಶಿಷ್ಟ ಪ್ರಾಣಿಯಲ್ಲಿ ಸನ್ನಿಹಿತನಾಗಿರುವ ಭಗವಂತನಿಗೆ ಶರಭಃ ಎನ್ನುವುದು ಅನ್ವರ್ಥ ನಾಮ.

೩೫೯) ಭೀಮಃ (ಅಭೀಮಃ)

ಯಾರು ಒಳಗಿನ ಪ್ರಪಂಚವನ್ನು ಮರೆತು ಹೊರಪ್ರಪಂಚದಲ್ಲಿ ಬದುಕುತ್ತಾರೋ ಅವರಿಗೆ ಭಗವಂತ ಭಯಂಕರ(ಭೀಮಃ). ಯಾರು ಒಳಪ್ರಪಂಚದ ಅರಿವಿನಿಂದ ಬದುಕುತ್ತಾರೋ ಅವರಿಗೆ ಭಗವಂತ ಅಭಯ(ಅಭೀಮಃ). ಅವನು ಭಯಂಕರನೂ ಹೌದು; ಅಭಯಂಕರನೂ ಹೌದು. ಹಿರಣ್ಯಕಶಿಪುವಿಗೆ ನರಸಿಂಹ ಅವತಾರದಲ್ಲಿ ಭಯಂಕರನಾದ ಭಗವಂತ ಪ್ರದ್ಯುಮ್ನನಿಗೆ ಅದೇ ರೂಪದಲ್ಲಿ ಅಭಯಂಕರನಾದ. ಇಂತಹ ಭಗವಂತ ಭೀಮಃ ಅಥವಾ ಅಭೀಮಃ.

೩೬೦) ಸಮಯಜ್ಞಃ

ಈ ನಾಮವನ್ನು ಸಮಯ+ಜ್ಞಾ ಮತ್ತು ಸಮ+ಜ್ಞಾ ಎಂದು ಎರಡು ಬಗೆಯಲ್ಲಿ ಅರ್ಥೈಸಬಹುದು. ಭಗವಂತ ಸಮಯ ಅಥವಾ ಹೊತ್ತು ತಿಳಿದವನು. ಸೃಷ್ಟಿಯಿಂದ ಸಂಹಾರ ತನಕದ ಸ್ಥಿತಿ ಕಾಲದಲ್ಲಿ ನಿರಂತರ ಹುಟ್ಟು-ಸಾವು ನಡೆಯುತ್ತಿರುತ್ತದೆ. ಯಾವುದು ಯಾವಾಗ ನಡೆಯುತ್ತದೆ ಎನ್ನುವ ಅರಿವು ನಮಗಿರುವುದಿಲ್ಲ. ಯಾವುದೂ ನಮಗೆ ತಿಳಿದಿಲ್ಲವೋ ಅದನ್ನು ನಾವು ಆಕಸ್ಮಿಕ ಎನ್ನುತ್ತೇವೆ. ಆದರೆ ಭಗವಂತನಿಗೆ ಯಾವುದೂ ಆಕಸ್ಮಿಕವಲ್ಲ. ಆತ ಸರ್ವಜ್ಞ. ಯಾವ ಕಾಲದಲ್ಲಿ ಏನು ನಡೆಯುತ್ತದೆ ಎನ್ನುವ ಸಂಪೂರ್ಣ ಅರಿವು ಇರುವುದು ಭಗವಂತನೊಬ್ಬನಿಗೆ. ಈ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆ ಹಿಂದೆ ಒಂದು ಕಾರಣವಿರುತ್ತದೆ. ಇಂತಹ ಕಾಲಜ್ಞಾನಿ ಭಗವಂತ ಸಮಯಜ್ಞ.

ಸಮಯ ಎನ್ನುವುದಕ್ಕೆ ಇನ್ನೊಂದು ಅರ್ಥ "ವೇದಾದಿ ಶಾಸ್ತ್ರಗಳು". ಯಾವುದರಿಂದ ನಮಗೆ ಸಮೀಚೀನವಾದ ಜ್ಞಾನ ಬರುತ್ತದೋ ಅದು ಸಮಯ. ಸಮಗ್ರ ವೇದದ, ಶಾಸ್ತ್ರದ ಅಂತರಂಗದ ರಹಸ್ಯ ತಿಳಿದವನು ಭಗವಂತನೊಬ್ಬನೇ. ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ:

ಸರ್ವಸ್ಯ ಚಾಹಂ ಹೃದಿ ಸನ್ನಿ ವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ
ವೇದೈಸ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃದ್ ವೇದವಿದೇವ ಚಾಹಮ್

"ಎಲ್ಲರ ಹೃದಯದಲ್ಲಿ ನಾನು ನೆಲೆಸಿರುವೆ, ನೆನಪು, ಅರಿವು, ಮರೆವು ಎಲ್ಲ ನನ್ನ ಕೊಡುಗೆ. ಎಲ್ಲ ವೇದಗಳಿಂದ ಅರಿಯಬೇಕಾದವನು ನಾನೆ. ವೇದಾಂತಸೂತ್ರಗಳನೊರೆದವನು, ವೇದಗಳ ಮರ್ಮವನ್ನರಿತವನು ನಾನೆ".

ಭಗವಂತ ಸಮ-ಯಜ್ಞ. ಯಜ್ಞ ಎಂದರೆ ಪೂಜೆ; ಒಳ್ಳೆಯ ಕಾರ್ಯಕ್ಕಾಗಿ ಒಟ್ಟಿಗೆ ಸೇರುವುದು; ದಾನ ಮಾಡುವುದು ಇತ್ಯಾದಿ . ನಮ್ಮಲ್ಲೇನಿದೆ ಅದನ್ನು ಇಲ್ಲದವರಿಗೆ ಕೊಡುವುದು ಒಂದು ಯಜ್ಞ. ಭಗವಂತನನ್ನು ಅಂತರಂಗದ ಸಮದೃಷ್ಟಿಯಿಂದ ಪೂಜಿಸಬೇಕು. ಸಮಾಜದಲ್ಲಿ ಎಲ್ಲರನ್ನೂ ಅವರ ಯೋಗ್ಯತೆಗೆ ತಕ್ಕಂತೆ ದ್ವೇಷವಿಲ್ಲದೆ, ಅವರೊಳಗಿರುವ ಭಗವಂತನನ್ನು ಹಾಗೂ ಅವನ ಅಭಿವ್ಯಕ್ತವನ್ನು ತಿಳಿದು ಗೌರವಿಸಬೇಕು.ಎಲ್ಲರ ಒಳಗಿರುವ ಭಗವಂತ ಒಬ್ಬನೇ. ಕೇವಲ ಅವನ ಅಭಿವ್ಯಕ್ತ ಮಾತ್ರ ಬೇರೆ ಬೇರೆ. ಈ ಸಮಭಾವಕ್ಕೆ ಯೋಗವೆಂದು ಹೆಸರು. (ಸಮತ್ವಂ ಯೋಗ ಉಚ್ಯತೇ)

ಕೃಷ್ಣ ಭಗವದ್ಗೀತೆಯಲ್ಲಿ ಹೇಳುವಂತೆ:

ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ

"ಪಾಂಡಿತ್ಯ-ಸೌಜನ್ಯಗಳ ನೆಲೆಯಾದ ಬ್ರಹ್ಮಜ್ಞಾನಿ, ಆಕಳು, ಆನೆ, ನಾಯಿ, ಹೊಲಗೇಡಿಯಾದ ಹೀನ ಮಾನವನಲ್ಲಿ ಕೂಡಾ ಏಕರೂಪದ ಭಗವಂತನನ್ನು ಕಾಣಬಲ್ಲರು"

ಭಗವಂತ ಯಾರಿಗೂ ತಾರತಮ್ಯ ಮಾಡುವುದಿಲ್ಲ. ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಸಮ ದೃಷ್ಟಿಯಿಂದ ನೋಡುತ್ತಾನೆ. ಇಲ್ಲಿ ಸಮ ದೃಷ್ಟಿ ಎಂದರೆ ಎಲ್ಲರನ್ನೂ ಏಕ ರೂಪದಲ್ಲಿ ನೋಡುವುದು ಎಂದರ್ಥವಲ್ಲ, ಯೋಗ್ಯತೆಗನುಗುಣವಾದ ಸಮ ದೃಷ್ಟಿ. ಒಂದು ಶಾಲೆಯಲ್ಲಿ ಚೆನ್ನಾಗಿ ಓದಿ ಬರೆದ ವಿದ್ಯಾರ್ಥಿ ಹಾಗೂ ಓದದೆ ಪೋಲಿಯಾಗಿರುವ ಇನ್ನೊಬ್ಬ ವಿದ್ಯಾರ್ಥಿಗೆ ಸಮನಾದ ಅಂಕವನ್ನು ಕೊಡುವುದು ಸಮಾನತೆ ಅಲ್ಲ. ಯಾವುದೇ ದ್ವೇಷವಿಲ್ಲದೆ, ಶತ್ರು, ಮಿತ್ರ, ಸ್ಥಳೀಯ, ಪರಕೀಯ ಎನ್ನುವ ಬೇದವಿಲ್ಲದೆ ಅವರವರ ಯೋಗ್ಯತೆಗೆ ತಕ್ಕಂತೆ ಅಂಕ ವಿತರಣೆ ಮಾಡುವುದು ಸಮಾನತೆ. ಹೀಗೆ ಸಮ ದೃಷ್ಟಿಯಿಂದ ಮಾಡುವ ಕ್ರಿಯೆ ಮಹಾನ್ ಯಜ್ಞ, ಹಾಗೂ ಭಗವಂತನಿಗೆ ಅತ್ಯಂತ ಪ್ರಿಯವಾದದ್ದು. ಹೀಗೆ ಸಮದೃಷ್ಟಿಯ ಯಜ್ಞಪ್ರಿಯ ಭಗವಂತ ಸಮಯಜ್ಞಃ

೩೬೧) ಹವಿರ್ಹರಿಃ

ಹವಿಸ್ಸು ಎಂದರೆ ಭಗವಂತನಿಗೆ ಅರ್ಪಿಸುವ ಹೋಮ ದ್ರವ್ಯ. ನಾವು ಅರ್ಪಿಸುವ ಹವಿಸ್ಸು ಎಂದೂ ವ್ಯರ್ಥವಲ್ಲ. ಅಗ್ನಿಗೆ ಅರ್ಪಿಸಿದ ಹವಿಸ್ಸು ಅಗ್ನಿಯಿಂದ ಹೊರ ಹೊಮ್ಮುವ ಏಳು ಬಣ್ಣಗಳ ಮುಖೇನ ವಾತಾವರಣದಲ್ಲಿನ ಸೂರ್ಯ ಕಿರಣದೊಂದಿಗೆ ಸೇರಿ ಸಮಾಜಕ್ಕೆ ಫಲವನ್ನು ಕೊಡುತ್ತದೆ. ಹವಿರ್ಭಾಗವನ್ನು ಸ್ವೀಕರಿಸುವ ಭಗವಂತ ಹವಿರ್ಹರಿಃ . ನಾವು ಯಾವುದೇ ನಾಮವನ್ನುಚ್ಚರಿಸಿ ಹವಿಸ್ಸನ್ನು ಅರ್ಪಿಸಿದರೂ ಅದು ಸೇರುವುದು ಸರ್ವಶಬ್ದ ವಾಚ್ಯನಾದ ಭಗವಂತನನ್ನು. "ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ". ಭಗವಂತ ಎಲ್ಲಾ ಶಬ್ದಗಳಿಂದ ವಾಚ್ಯನಾದವನು. ಆದ್ದರಿಂದ ಯಾವ ಶಬ್ದವನ್ನು ಹೇಳಿದರೂ ಅದು ಸೇರುವುದು ಅವನನ್ನೇ. ಹೀಗೆ ಹವಿಸ್ಸನ್ನು ಸ್ವೀಕರಿಸಿ ಭಕ್ತರ ಪಾಪವನ್ನು ಪರಿಹರಿಸುವ ಭಗವಂತ ಹವಿರ್ಹರಿಃ. ಭಗವಂತನನ್ನು ಗಾಢವಾದ ಭಕ್ತಿಯಿಂದ ಪೂಜಿಸಿದಾಗ ಆತ ನಮ್ಮ ಒಳಗಣ್ಣಿಗೆ ಕಾಣಿಸುತ್ತಾನೆ. ಹೀಗೆ ಜ್ಞಾನದಲ್ಲಿ ಕಾಣುವ ಭಗವಂತನ ಪ್ರಭೆ ನೀಲ ವರ್ಣ. ಇಲ್ಲಿ ನೀಲ ಜ್ಞಾನದ ಸಂಕೇತ. ಇದು ದೇಹದ ಬಣ್ಣವಲ್ಲ, ದೇಹದ ಸುತ್ತಲಿನ ಪ್ರಭೆ. ಹೀಗೆ ನೀಲವರ್ಣನಾಗಿ ಜ್ಞಾನದಲ್ಲಿ ಕಾಣಿಸುವ ಭಗವಂತ ಹವಿರ್ಹರಿಃ

೩೬೨) ಸರ್ವಲಕ್ಷಣಲಕ್ಷಣ್ಯಃ

ಭಗವಂತನ ರೂಪ ನಮ್ಮ ಕಲ್ಪನೆಗೆ ಮಿಗಿಲು. ಒಂದು ದೇಹದ ಸೌಂದರ್ಯದ ಲಕ್ಷಣಗಳು ಎಂದು ನಾವು ಏನನ್ನೂ ಕಲ್ಪನೆ ಮಾಡಬಹುದೋ ಅದರ ಪರಾಕಾಷ್ಠೆ ಆತನ ರೂಪ. ಜಗತ್ತಿನ ಎಲ್ಲಾ ಬಣ್ಣ ಅವನ ಬಣ್ಣ. ಆತ ವಿಶ್ವವರ್ಣ. ಅಸಾದಾರಣ ಗುಣಗಳಿಂದ ತುಂಬಿದ ಸರ್ವ ಲಕ್ಷಣಗಳ ನೆಲೆಯಾದ, ಸೌಂದರ್ಯದ ಪರಾಕಾಷ್ಠೆಯ ಸ್ವರೂಪ ಹಾಗೂ ಸರ್ವ ಸೌಂದರ್ಯದ ಸಾರನಾದ ಭಗವಂತ ಸರ್ವಲಕ್ಷಣಲಕ್ಷಣ್ಯಃ.

೩೬೩) ಲಕ್ಷ್ಮೀವಾನ್

ಭಗವಂತ ಪೃಕೃತಿ ಮಾತೆ ಶ್ರಿಲಕ್ಷ್ಮಿಯನ್ನು ಸದಾ ತನ್ನ ಎದೆಯಲ್ಲಿ ಧರಿಸಿರುತ್ತಾನೆ. ಲಕ್ಷ್ಮಿ ರಹಿತ ನಾರಾಯಣನನ್ನು ನಾವು ಎಂದೂ ನೋಡುವುದಿಲ್ಲ. ಈ ಸೃಷ್ಟಿಯನ್ನು ಭಗವಂತ ಲಕ್ಷ್ಮಿ ಸಮೇತನಾಗಿ ನಿರ್ಮಿಸಿದ. ಇಂತಹ ಭಗವಂತನಿಗೆ ಲಕ್ಷ್ಮೀವಾನ್ ಅನ್ವರ್ಥ ನಾಮ.

೩೬೪) ಸಮಿತಿಂಜಯಃ

"ಸಮಿತಿ" ಎಂದರೆ ಯುದ್ದ. ಭಗವಂತ ಅಸುರರನ್ನು ಯದ್ದದಲ್ಲಿ ಗೆಲಿದವನು. ನಮ್ಮ ದೈನಂದಿನ ಸಂಸಾರಿಕ ಯುದ್ದದಲ್ಲಿ ನಮಗೆ ಜಯವನ್ನು ತಂದು ಕೊಟ್ಟು ನಮ್ಮನ್ನು ಸಂಸಾರ ಸಾಗರದಿಂದ ಮುಕ್ತ ಮಾಡುವವನು. ನಮ್ಮ ನೋವನ್ನು ನಾಶಮಾಡುವ ಭಗವಂತ ಸಮಿತಿಂಜಯಃ.

ಮುಂದುವರೆಯುವುದು...

No comments:

Post a Comment