Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -27


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಅಸಂಖ್ಯೇಯೋ‌உಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಛುಚಿಃ |
ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧದಃ ಸಿದ್ಧಿ ಸಾಧನಃ || 27 ||

೨೪೯) ಅಸಂಖ್ಯೇಯ

ಸಂಖ್ಯೆಗೆ ಒಳಪಡದವನು ಅಸಂಖ್ಯೇಯ. ಭಗವಂತನ ರೂಪ ಅನಂತ. ಅದು ನಮ್ಮ ಎಣಿಕೆಗೊಳಪಟ್ಟದ್ದಲ್ಲ. ಗಣಿತದಿಂದ ಅಳೆಯಲು ಅಸಾಧ್ಯವಾದ ಗುಣ ಕ್ರಿಯೆ ಮಹಿಮೆ ಭಗವಂತನದ್ದು. ವೇದದಲ್ಲಿ ಹೇಳುವಂತೆ "ಈ ಭೂಮಿ ಎಷ್ಟು ಪರಮಾಣುಗಳಿಂದಾಗಿದೆ ಎಂದು ಲೆಕ್ಕ ಹಾಕಿದರೂ ಹಾಕಬಹುದು ಆದರೆ ಭಗವಂತನನ್ನು, ಆತನ ಗುಣ, ರೂಪ, ಕ್ರಿಯೆ, ಯಾವುದನ್ನೂ ಲೆಕ್ಕ ಹಾಕುವುದು ಅಸಾಧ್ಯ. ಪ್ರತಿಯೊಂದು ಜೀವದಲ್ಲಿ, ಪಂಚ ಜ್ಞಾನೇದ್ರಿಯದಲ್ಲಿ, ಪಂಚ ಕರ್ಮೇಂದ್ರಿಯದಲ್ಲಿ, ಪಂಚ ಭೂತಗಳಲ್ಲಿ, ಪಂಚ ಕೋಶದಲ್ಲಿ, ಸಪ್ತ ಧಾತುವಿನಲ್ಲಿ, ಸರ್ವ ನರಕೋಶದಲ್ಲಿ, ಹೀಗೆ ಅನಂತ ರೂಪನಾಗಿ ನಮ್ಮೊಳಗೆ ನಮ್ಮ ಹೊರಗೆ ಅನಂತ ಶಕ್ತಿಯಾಗಿ ಭಗವಂತನಿದ್ದಾನೆ. ಭಗವಂತನ ಸೃಷ್ಟಿ ಕೂಡ ಅನಂತ. ರಾತ್ರಿ ಹೊತ್ತು ಆಕಾಶದಲ್ಲಿ ಕಾಣುವ ಅನಂತ ನಕ್ಷತ್ರಮಂಡಲ ಭಗವಂತನ ಸೃಷ್ಟಿ. ವಿಜ್ಞಾನಕ್ಕೆ ತಿಳಿದಿರುವುದು ಕೇವಲ ಭೂಮಿಯ ಹತ್ತಿರದಲ್ಲಿರುವ ಗ್ರಹ ಗೋಲಗಳ ಪರಿಚಯ ಮಾತ್ರ. ಅದರಿಂದಾಚೆಗಿನ ಭಗವಂತನ ಸೃಷ್ಟಿ ಅನಂತ. ಹೀಗೆ ಭಗವಂತನ ಸೃಷ್ಟಿಯನ್ನೇ ತಿಳಿಯಲು ಅಸಾದ್ಯವಾಗಿರುವಾಗ, ಆತನನ್ನು ಗಣಿತದ ಮಿತಿಯಲ್ಲಿ ಅಳೆಯುವುದು ಎಂದಿಗೂ ಸಾದ್ಯವಿಲ್ಲ.

ಇನ್ನು ಸಂಸ್ಕೃತದಲ್ಲಿ 'ಸಂಖ್ಯಾ' ಎನ್ನುವ ಪದದ ಮೂಲಾರ್ಥ ಜ್ಞಾನಿ, ಪಂಡಿತ, ವಿದ್ವಾಂಸ ಇತ್ಯಾದಿ. ವೇದದಲ್ಲಿ ಹಾಗೂ ಗೀತೆಯಲ್ಲಿ ಹೆಚ್ಚಾಗಿ 'ಸಂಖ್ಯಾ' ಎನ್ನುವ ಪದವನ್ನು ಈ ಮೇಲಿನ ಅರ್ಥದಲ್ಲಿ ಬಳಸಲಾಗಿದೆ. 'ಅ' ಎನ್ನುವುದು 'ಅನಂತ', 'ಅಪಾರ' ಎನ್ನುವ ಅನೇಕ ಅರ್ಥವನ್ನು ಕೊಡುವ ಓಂಕಾರದ ಮೊದಲ ಅಕ್ಷರ. ಆದ್ದರಿಂದ ಅಸಂಖ್ಯೇಯ ಎಂದರೆ ಅನಂತಜ್ಞಾನ ಸಾಗರ. ಅಜ್ಞಾನಿಗಳಿಗೆ ಜ್ಞಾನವನ್ನು, ಜ್ಞಾನಿಗಳಿಗೆ ಮೋಕ್ಷವನ್ನು ಕೊಡುವ ಭಗವಂತ ಅಸಂಖ್ಯೇಯ.

೨೫೦) ಅಪ್ರಮೇಯಾತ್ಮಾ

ಅಪ್ರಮೇಯಾತ್ಮಾ ಎಂದರೆ ತಿಳಿಯಲಾಗದ ಅಥವಾ ಅಳೆಯಲಾಗದ ಸ್ವರೂಪ. ಭಗವಂತ ಸಂಪೂರ್ಣವಾಗಿ ನಮ್ಮ ತಿಳಿವಿಗೆ ಗೋಚರವಾಗುವ ವಸ್ತುವಲ್ಲ, ಆತನನ್ನು ಸಂಪೂರ್ಣ ತಿಳಿಯುವುದು ಅಸಾಧ್ಯ. ದೋಷರಹಿತನಾದ, ಪರಿಪೂರ್ಣ ಹಾಗೂ ಎಲ್ಲರೂ ತಿಳಿಯಬೇಕಾಗಿರುವ ಭಗವಂತ ಅಪ್ರಮೇಯಾತ್ಮಾ.

ಪ್ರತೀ ಪೂಜೆಯಲ್ಲಿ ಮೊದಲು ಗಣಪತಿ ಪ್ರಾರ್ಥನೆ ಮಾಡುತ್ತೇವೆ. ಏಕೆಂದರೆ ಗಣಪತಿ ಆಕಾಶದ ದೇವತೆ ಹಾಗು ಈ ಆಕಾಶ ಭಗವಂತನ ನಾಭಿಯಿಂದ ಸೃಷ್ಟಿಯಾಗಿದೆ, ಆದ್ದರಿಂದ ಗಣಪತಿ ನಮ್ಮ ನಾಭಿ ದೇವತೆ.

ನಾಭ್ಯ ಆಸೀದಂತರಿಕ್ಷಂ ಶೀರ್ಷ್ನೋಧ್ಯೋ ಸಮವರ್ತತ
ಪದ್ಭ್ಯಾಂ ಭೂಮೀರ್ ದಿಶ ಶ್ರೋತ್ರಾತ್ ತತಾ ಲೋಕಾ ಅಕಲ್ಪಯನ್

ನಮ್ಮ ನಾಭಿಯ ಸಮೀಪ ಇರುವ ಮೂರು ಚಕ್ರಗಳು ಮೂಲಾಧಾರ, ಸ್ವಾದಿಷ್ಟಾನ ಹಾಗೂ ಮಣಿಪುರ. ನಾಭಿಯಿಂದ ಮೇಲಕ್ಕೆ ಹೃತ್ಕಮಲದಲ್ಲಿ ನಿಜವಾದ ಸಾಧನೆಯ ಅನಾಹತ ಚಕ್ರವಿದೆ. ಮೂಲಾಧಾರ, ಸ್ವಾದಿಷ್ಟಾನ ಹಾಗು ಮಣಿಪುರ ಚಕ್ರಗಳನ್ನು ಮೀರಿ ಹೃದಯವನ್ನು ಪ್ರವೇಶಿಸಬೇಕಾದರೆ ನಾಭಿಯ ಬಾಗಿಲನ್ನು ಗಣಪತಿ ತೆರೆಯಬೇಕು. ಅದಕ್ಕಾಗಿ ನಾವು ಗಣಪತಿಯಲ್ಲಿ ಮೊತ್ತಮೊದಲಿಗೆ ಪ್ರಾರ್ಥನೆ ಮಾಡುತ್ತೇವೆ. ಪ್ರತೀ ಯಜ್ಞದ ಮೊದಲು ಗಣಪತಿ ಮಂಡಲ ಬರೆದು ಪೂಜಿಸಿ ಆನಂತರ ಯಜ್ಞ ಪ್ರಾರಂಭಿಸುತ್ತಾರೆ. ಗಣಪತಿ ನಾಭಿಯ ಬಾಗಿಲನ್ನು ತೆರೆದಾಗ ಹೃತ್ಕಮಲ ತಾನೇ-ತಾನಾಗಿ ತೆರೆದುಕೊಳ್ಳುತ್ತದೆ. ಈ ಸ್ಥಿತಿಯನ್ನು 'ವೃಷಾಹ' ಎನ್ನುತ್ತಾರೆ. ಭಗವಂತ ಈ ಸ್ಥಿತಿಯಲ್ಲಿ ನಮ್ಮ ಪೂಜೆಯನ್ನು ವೃಷಾಹೀಯಾಗಿ ಸ್ವೀಕರಿಸಿ ನಮ್ಮನ್ನು ಉದ್ಧಾರ ಮಾಡುತ್ತಾನೆ. ಇಂತಹ ಹೃತ್ಕಮಲ ನಿವಾಸಿ ಭಗವಂತ ವೃಷಾಹೀ.

೨೫೧) ವಿಶಿಷ್ಟ

ವಿಶಿಷ್ಟ ಎಂದರೆ ಎಲ್ಲರಿಗಿಂತ ಮಿಗಿಲಾದವನು, ವಿಲಕ್ಷಣ ರೂಪವುಳ್ಳವನು. ಆತನ ವಿಶಿಷ್ಟತೆಯನ್ನು ಆತನ ಅವತಾರದ ಘಟನೆಗಳಲ್ಲಿ ನೋಡಬಹುದು. ಕಂಬವನ್ನೊಡೆದು ಬಂದ ನಾರಸಿಂಹ, ಗೋವರ್ಧನ ಬೆಟ್ಟವನ್ನೆತ್ತಿದ ಸಾಮಾನ್ಯ ಗೋಪಾಲರೂಪಿ ಭಗವಂತ, ಮತ್ಸ್ಯವತಾರದಲ್ಲಿ್ನು ನಾವು ಲೆಕ್ಕ ಹಾಕಲು ಬರುವುದಿಲ್ಲ. ಹೀಗೆ ಎಲ್ಲರಿಗಿಂತ ವಿಶಿಷ್ಟವಾಗಿದ್ದು, ಸಧಾಭಿಚಾರದಲ್ಲಿರುವವರನ್ನು ರಕ್ಷಿಸಿ ಉದ್ದರಿಸುವ ಭಗವಂತ ವಿಶಿಷ್ಟ.

೨೫೨) ಶಿಷ್ಟಕೃತ್

'ಶಿಷ್ಟ' ಎಂದರೆ ಶಾಸ್ತ್ರದ ಮರ್ಮವನ್ನು ತಿಳಿದು ಅದನ್ನು ತಮ್ಮ ಜೀವನದಲ್ಲಿ ಅನುಷ್ಠಾನ ಮಾಡಿಕೊಂಡವರು. ಇಂತಹ 'ಶಿಷ್ಟರನ್ನು' ಪಾಲಿಸಿ ಉದ್ಧಾರ ಮಾಡುವ ಹಾಗೂ ವೇದಗಳ ಮೂಲಕ ಧರ್ಮ ಶಾಸನವನ್ನು ಮಾಡಿದ ಭಗವಂತ ಶಿಷ್ಟಕೃತ್.

೨೫೩) ಶುಚಿ

ಶುಚಿ ಎಂದರೆ ಶುದ್ಧ, ಪವಿತ್ರ, ಪ್ರಕಾಶ, ಬೆಳಕು, ನಿರ್ಮಲ ಇತ್ಯಾದಿ ಅರ್ಥವನ್ನು ಕೊಡುತ್ತದಾದರೂ, ಮೂಲ ಅರ್ಥ 'ಬೆಂಕಿ'. ಅಗ್ನಿ ಮೂಲಭೂತವಾಗಿ ಪವಿತ್ರ ಹಾಗೂ ನಿರ್ಮಲವಾಗಿದ್ದು, ಬೆಳಕನ್ನು ಕೊಡುತ್ತದೆ. ಬೆಂಕಿ ಶುದ್ಧ ಹಾಗೂ ಬೆಂಕಿಗೆ ಹಾಕಿದ ಅಶುದ್ಧ ಕೂಡ ಶುದ್ಧವಾಗುತ್ತದೆ. ಬೆಂಕಿ ಯಾವಾಗಲೂ ಊರ್ಧ್ವಮುಖವಾಗಿ ಉರಿಯುತ್ತದೆ. ಆದ್ದರಿಂದ ಅಗ್ನಿ ಸತ್ವಗುಣದ ಸಂಕೇತ. ಭಗವಂತ ಯಾವುದೇ ಹವಿಸ್ಸನ್ನು ನೇರವಾಗಿ ಸ್ವೀಕರಿಸುವುದು ಅಗ್ನಿ ಮುಖೇನ. ಅಗ್ನಿ ಪ್ರತೀಕದಲ್ಲಿ ಮಾಡುವ ಪೂಜೆ ಅತಿಶ್ರೇಷ್ಠ. ಅಗ್ನಿಯಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಶುಚಿ.

೨೫೪) ಸಿದ್ಧಾರ್ಥ

ಭಗವಂತ ಸಾಧಿಸಬೇಕಾದ ವಸ್ತುವಲ್ಲ ಅವನು ಸಿದ್ಧ. ವೇದಸಿದ್ಧನಾದ ಭಗವಂತನನ್ನು ಹೇಳುತ್ತದೆ. ಈ ಹಿಂದೆ ಹೇಳಿದಂತೆ ಪ್ರತಿಯೊಂದು ನಾಮವೂ ಭಗವಂತನ ಅನ್ವರ್ಥ ನಾಮ. ಎಲ್ಲಾ ನಾಮಗಳ ಅರ್ಥಗಳು ಯಾರಲ್ಲಿ ಪರಿಪೂರ್ಣವಾಗಿ ಸಿದ್ಧವಾಗಿದೆಯೋ ಅವನು ಸಿದ್ಧಾರ್ಥ. ಜಗತ್ತಿನಲ್ಲಿರುವ ಪ್ರಸಿದ್ಧವಾದ ಸರ್ವ ಶಾಸ್ತ್ರಗಳಿಂದ ಪ್ರಸಿದ್ಧನಾದ ಪರಮ ಪುರುಷಾರ್ಥ ರೂಪ ಹಾಗು ಸರ್ವವನ್ನು ತೇಜಿಸಿದವರಿಗೂ ಬೇಕಾಗಿರುವ ಅರ್ಥ(ವಸ್ತು) ಸಿದ್ಧಾರ್ಥ.

೨೫೫) ಸಿದ್ಧಸಂಕಲ್ಪ

ನಾವು ಏನನ್ನಾದರೂ ನಿರ್ಮಾಣ ಮಾಡಬೇಕಾದರೆ ನಮಗೆ ಇಚ್ಚಾಶಕ್ತಿ, ಜ್ಞಾನಶಕ್ತಿ ಹಾಗು ಕ್ರಿಯಾಶಕ್ತಿ ಬೇಕು.ಆದರೆ ಭಗವಂತ ಕೇವಲ ತನ್ನ ಸಂಕಲ್ಪದಿಂದ ಏನನ್ನಾದರೂ ಸೃಷ್ಟಿ ಮಾಡಬಲ್ಲ. ನೀವು ಸಿದ್ಧ ಪುರುಷರ ಬಗ್ಗೆ ಕೇಳಿರಬಹುದು. ಸಿದ್ಧಪುರುಷರು ಇಚ್ಚಿಸಿದಂತೆ ಅವರ ಸಂಕಲ್ಪ ನೆರವೇರುತ್ತದೆ. ಪ್ರತಿಯೊಬ್ಬರಲ್ಲೂ ಸಹ ಇಂತಹ ಅಪೂರ್ವ ಶಕ್ತಿ ಇದೆ. ಆದರೆ ಅದು ಜಾಗ್ರತವಾಗಿರುವುದಿಲ್ಲ! ಯಾರು ಏಕಾಗ್ರತೆಯಿಂದ ಮನಸ್ಸಿನ ಶಕ್ತಿಯನ್ನು ಗುರುತಿಸಿಕೊಳ್ಳುತ್ತಾರೋ ಅವರು ಸಿದ್ಧರು. ಸಿದ್ಧರ ಸಂಕಲ್ಪ ಯಾರಿಂದ ಈಡೇರುತ್ತದೋ, ಯಾರ ಸಂಕಲ್ಪ ಮಾತ್ರದಿಂದ ಇಡೀ ವಿಶ್ವ ಸೃಷ್ಟಿಯಾಗಿದೆಯೋ ಅವನು ಸಿದ್ಧಸಂಕಲ್ಪ.

೨೫೬) ಸಿದ್ಧಿದ

ನಾವು ಸಿದ್ಧರಾಗಬೇಕಾದರೆ ಅದನ್ನು ಭಗವಂತ ನಮಗೆ ಕೊಡಬೇಕು. ಅವರವರ ಸ್ವಭಾವ ಹಾಗೂ ಕರ್ಮಕ್ಕೆ ತಕ್ಕಂತೆ ಸಿದ್ಧಿಯನ್ನು ಕೊಡುವ ಅಥವಾ ಕಸಿದುಕೊಳ್ಳುವ ಭಗವಂತ ಸಿದ್ಧಿದ.

೨೫೭) ಸಿದ್ಧಿಸಾಧನ

ಮೋಕ್ಷ ಒಂದು ಸಿದ್ಧಿ. ಇಂತಹ ಸಿದ್ಧಿಯನ್ನು ಪಡೆಯಬೇಕಾದರೆ ನಮಗಿರುವ ಏಕಮಾತ್ರ ಸಾಧನ ಭಗವಂತ. ಪರಮ ಪುರುಷಾರ್ಥಕವಾದ ಮೋಕ್ಷಕ್ಕೆ ಸಾಧನಾಭೂತನಾದವ ಭಗವಂತನೊಬ್ಬನೆ. ಭಗವಂತ ಎಲ್ಲಾ ಸಿದ್ಧಿಗಳ ಸ್ವರೂಪ. ಭಗವಂತನ ಉಪಾಸನೆಯಿಂದ ಮಾತ್ರ ನಾವು ಸಿದ್ಧಿಯನ್ನು ಆಂಶಿಕವಾಗಿ ಪಡೆಯಬಹುದು. ಸಿದ್ಧಿಗಳು ಅನೇಕ. ಅಷ್ಟ ಸಿದ್ಧಿಗಳ ಬಗ್ಗೆ ನೀವು ಕೇಳಿರಬಹುದು. ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ ಮತ್ತು ವಶಿತ್ವ ಇವು ಅಷ್ಟ ಸಿದ್ಧಿಗಳು. ಅಣಿಮಾ ಎಂದರೆ ಅತ್ಯಂತ ಸೂಕ್ಷ್ಮ ರೂಪ ಧಾರಣೆ ಮಾಡುವುದು. ಮಹಿಮಾ ಎಂದರೆ ದೊಡ್ಡಗಾಗುವುದು, ಗರಿಮಾ ಎಂದರೆ ಭಾರವಾಗುವುದು, ಲಘಿಮಾ ಎಂದರೆ ಹಗುರಾಗುವುದು, ಪ್ರಾಪ್ತಿ ಎಂದರೆ ಬೇಕಾದ್ದನ್ನು ಪಡೆಯುವುದು, ಪ್ರಾಕಾಮ್ಯ ಎಂದರೆ ಬೇಕಾದ ರೂಪ ಧರಿಸುವುದು, ಈಶಿತ್ವ ಎಂದರೆ ಒಡೆತನ, ವಶಿತ್ವ ಎಂದರೆ ಎಲ್ಲರನ್ನು ಎಲ್ಲವನ್ನು ತನ್ನ ವಶಕ್ಕೆ ಒಳಪಡಿಸಿಕೊಳ್ಳುವುದು. ಈ ಎಲ್ಲಾ ಸಿದ್ಧಿಗಳು ಭಗವಂತನ ಮೂಲಭೂತ ಗುಣಗಳು ಹಾಗೂ ಭಗವಂತನಲ್ಲಿ ಮಾತ್ರ ಇರತಕ್ಕಂತಹ ಶಕ್ತಿ. ಭಗವಂತನ ಉಪಾಸನೆಯಿಂದ ಸಿದ್ಧಪುರುಷರಿಗೆ ಕಿಂಚಿತ್ ಬರುತ್ತದೆ ಅಷ್ಟೇ.

(ಸಿದ್ಧಿಯ ಬಗ್ಗೆ ಹೇಳುವಾಗ ಮಧ್ವಾಚಾರ್ಯರ ಜೀವನದಲ್ಲಿ ನಡೆದ ಎರಡು ಘಟನೆಗಳನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಒಮ್ಮೆ ಗೋವಾದಲ್ಲಿ ಆಚಾರ್ಯರು ತಂಗಿದ್ದಾಗ "ಸಂಗೀತದಿಂದ ಗಿಡ ಬಳ್ಳಿಗಳು ಚಿಗುರಬಲ್ಲವು" ಎಂದು ಜನರಿಗೆ ತೋರಿಸಿಕೊಟ್ಟರು. ಈ ವಿಷಯ ರಾಜನ ಬಳಿಗೆ ತಲುಪಿದಾಗ ಅಹಂಕಾರಿ ರಾಜ ಆಚಾರ್ಯರನ್ನು ಒಂದು ದಿನ ಸೈನಿಕರ ಪಹರೆ ಇರುವ ಒಂದು ಕೋಣೆಯಲ್ಲಿ ಇರಿಸಲು ಆಜ್ಞೆ ಕೊಡುತ್ತಾನೆ! ಹೀಗೆ ಆಚಾರ್ಯರನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಲಾಗುತ್ತದೆ. ಸಿದ್ಧಪುರುಷರಾದ ಆಚಾರ್ಯರು ತಮ್ಮ "ಅಣಿಮಾ" ಸಿದ್ಧಿಯಿಂದ ಅಲ್ಲಿಂದ ಹೊರಬಂದು ತಮ್ಮ ಯಾತ್ರೆಯನ್ನು ಮುಂದುವರಿಸುತ್ತಾರೆ. ಇನ್ನೊಮ್ಮೆ ಕಾಂತಾವರದಲ್ಲಿ ಅಹಂಕಾರಿ ಜಟ್ಟಿಗಳನ್ನು ತಮ್ಮ "ಗರಿಮಾ" ಸಿದ್ಧಿಯಿಂದ ಸೋಲಿಸಿದ್ದಲ್ಲದೆ "ಲಘಿಮಾ" ಸಿದ್ದಿಯಿಂದ ಆಚಾರ್ಯರು ಒಬ್ಬ ಪುಟ್ಟ ಬಾಲಕನ ಹೆಗಲ ಮೇಲೆ ಕುಳಿತು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಜಟ್ಟಿಗಳ ಅಹಂಕಾರವನ್ನು ಮುರಿಯುತ್ತಾರೆ.)

ಭಗವಂತನೊಬ್ಬನೇ ಇಂತಹ ಸಿದ್ಧಿಗಳಿಗೆ ಸಾಧನ. ಭಗವಂತನನ್ನು ಸಂಪೂರ್ಣ ನಂಬಿದವರಿಗೆ ಆತ ಸಿದ್ಧಿಸಾಧನ.

ಮುಂದುವರೆಯುವುದು...

No comments:

Post a Comment