ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ತೇಜೋ ವೃಷೋ ದ್ಯುತಿಧರಃ ಸರ್ವಶಸ್ತ್ರಭೃತಾಂ ವರಃ |
ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕಶೃಂಗೋ ಗದಾಗ್ರಜಃ || 81 ||
೭೬೨) ತೇಜೋವೃಷಃ
ಇದು ಅಪೂರ್ವವಾದ ಶಬ್ಧ. ತೇಜಸ್ಸು ಅಂದರೆ ಬೆಳಕು ಅಥವಾ ಪ್ರಕಾಶ; ವೃಷ ಅಂದರೆ ಧರ್ಮ. ನಮಗೆ ತೇಜಸ್ಸನ್ನು, ವೃಷವನ್ನು ಕೊಡುವ ಭಗವಂತ ತೇಜೋವೃಷಃ. ನಮಗೆ ಅಧ್ಯಯನದಿಂದ, ಯೋಗ ಸಾಧನೆಯಿಂದ, ಪ್ರಾಣಾಯಾಮದಿಂದ ವರ್ಚಸ್ಸನ್ನು ಗಳಿಸಬೇಕು ಎನ್ನುವ ಆಸೆ ಇರಬಹುದು. ಆದರೆ ಆ ವರ್ಚಸ್ಸನ್ನು ಕರುಣಿಸುವವನು ಭಗವಂತ. ಅದೇ ರೀತಿ ನಮಗೆ ಧರ್ಮದ ದಾರಿಯಲ್ಲಿ ನಡೆಯಬೇಕು ಎನ್ನುವ ಆಸೆ ಇರಬಹುದು, ಆದರೆ ಯಾವುದು ಧರ್ಮ, ಯಾವುದು ಅಧರ್ಮ ಎನ್ನುವ ಜ್ಞಾನ ಕೊಟ್ಟು ಆ ನಡೆಯನ್ನು ತೊರಿಸುವವನು ಭಗವಂತ.
೭೬೩) ದ್ಯುತಿಧರಃ
ಎಲ್ಲಾ ಬಗೆಯ ಪ್ರಕಾಶವನ್ನು ಧರಿಸಿರುವ ಜ್ಯೋತಿರ್ಮಯಸ್ವರೂಪ ಭಗವಂತ ದ್ಯುತಿಧರಃ
ಗೀತೆಯಲ್ಲಿ ಹೇಳುವಂತೆ:
ಯದಾದಿತ್ಯ ಗತಂ ತೇಜೋ ಜಗದ್ ಭಾಸಯತೇsಖಿಲಮ್ |
ಯಚ್ಚಂದ್ರ ಮಸಿ ಯಚ್ಚ ಗೌನ ತತ್ ತೇಜೋ ವಿದ್ದಿ ಮಾಮಕಮ್ ||
ಅಂದರೆ "ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲ ಬೆಳಗುವ ಬೆಳಕು, ಚಂದ್ರನಲ್ಲಿ, ಬೆಂಕಿಯಲ್ಲಿ ಕೂಡ, ಅದು ನನ್ನದೇ ಬೆಳಕೆಂದು ತಿಳಿ". ಈ ರೀತಿ ಹೊರಗೂ ಒಳಗೂ ತುಂಬಿರುವ, ಎಲ್ಲಾ ಬೆಳಕನ್ನು ಬೆಳಗಿಸುವ ಮಹಾ ಬೆಳಕು ಭಗವಂತ ದ್ಯುತಿಧರಃ
೭೬೪) ಸರ್ವಶಸ್ತ್ರಭೃತಾಂವರಃ
ಎಲ್ಲಾ ಶಸ್ತ್ರಧಾರಿಗಳಿಗಿಂತಲೂ ಉತ್ತಮವಾದ ಶಸ್ತ್ರವನ್ನು ಹಿಡಿದು ಧರ್ಮ ಸ್ಥಾಪನೆ ಮಾಡುವ ಭಗವಂತ ಸರ್ವಶಸ್ತ್ರಭೃತಾಂವರಃ.
ಈ ಹಿಂದೆ ಹೇಳಿದಂತೆ ಹಿಂದಿನ ಕಾಲದಲ್ಲಿ ಯಜ್ಞ ಮಾಡುವಾಗ ಮೂರು ಹೊತ್ತು ಆಹುತಿ ಕೊಡುತ್ತಿದ್ದರು. ಮೂರು ಹೊತ್ತು ದೇವರನ್ನು ಋಗ್ವೇದದ ಮಂತ್ರಗಳಿಂದ ಸ್ತೋತ್ರ ಮಾಡುತ್ತಿದ್ದರು, ಈ ರೀತಿ ಭಗವಂತನ ಗುಣಗಾನ ಮಾಡುವ ಮಂತ್ರವನ್ನು 'ಶಸ್ತ್ರ' ಎನ್ನುತ್ತಾರೆ. ಇಂತಹ ವೇದ ಮಂತ್ರಗಳಲ್ಲಿ ಬೇರೆ ಬೇರೆ ದೇವತೆಗಳ ಮಂತ್ರವಿದೆ. ಒಂದೊಂದು ಮಂತ್ರ ಒಂದೊಂದು ದೇವತೆಗಳನ್ನು ಹೇಳುತ್ತದೆ. ದೇವತೆಗಳು ಅನೇಕ, ಆದರೆ ದೇವರು ಒಬ್ಬನೇ. ಅಗ್ನಿಮಂತ್ರದಿಂದ ಕರೆದರೆ ಅಗ್ನಿಯಲ್ಲಿರತಕ್ಕಂತಹ ಭಗವಂತ, ವಾಯು ಮಂತ್ರದಿಂದ ಕರೆದರೆ ವಾಯುವಿನಲ್ಲಿರತಕ್ಕಂತಹ ಭಗವಂತ, ಇಂದ್ರ ಮಂತ್ರದಿಂದ ಕರೆದರೆ ಇಂದ್ರನೊಳಗಿರತಕ್ಕಂತಹ ಭಗವಂತ. ಹೀಗೆ ಸಮಸ್ತ ದೇವತೆಗಳಲ್ಲಿರುವ, ಸರ್ವ ಶಸ್ತ್ರಗಳಲ್ಲಿ(ಭಗವಂತನ ಗುಣಗಾನ ಮಾಡುವ ಸಮಸ್ತ ಮಂತ್ರಗಳಲ್ಲಿ) ಶ್ರೇಷ್ಟನಾಗಿ ಧಾರಣೆ ಮಾಡಿರುವ ಭಗವಂತ ಸರ್ವಶಸ್ತ್ರಭೃತಾಂವರಃ.
೭೬೫) ಪ್ರಗ್ರಹಃ
ದುರ್ಜನರಿಗೆ ಕಡಿವಾಣ ಹಾಕುವ ಭಗವಂತ ಪ್ರಗ್ರಹಃ. ಎಲ್ಲರ ಮನಸ್ಸಿನೊಳಗೆ ಸನ್ನಿಹಿತನಾಗಿದ್ದು ನಿಯಂತ್ರಿಸುವವ, ಮನಸ್ಸಿನಿಂದ ಅರ್ಪಿಸಿದರೆ ಅದನ್ನು ಸ್ವೀಕರಿಸಿ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವ ಭಗವಂತ ಪ್ರಗ್ರಹಃ.
೭೬೬) ನಿಗ್ರಹಃ
ದುರ್ಜನರನ್ನು ದಮನಿಸುವವನು ನಿಗ್ರಹಃ. ಭಗವಂತನನ್ನು ಒಪ್ಪದೇ ಅಧರ್ಮದ ದಾರಿಯಲ್ಲಿ ನೆಡೆಯುವವರನ್ನು ಶಾಶ್ವತವಾಗಿ ನಿಗ್ರಹಿಸುವ ಭಗವಂತ ನಿಗ್ರಹಃ. ಇದನ್ನೇ ಗೀತೆಯಲ್ಲಿ ಹೀಗೆ ಹೇಳಿದ್ದಾರೆ:
ತಾನಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರಾಧಮಾನ್ |
ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು ||
ಆಸುರೀಂ ಯೋನಿಮಾಪನ್ನಾ ಮೂಢಾ ಜನ್ಮನಿ ಜನ್ಮನಿ ।
ಮಾಮಪ್ರಾಪ್ಯೈವ ಕೌಂತೇಯ ತತೋ ಯಾಂತ್ಯಧಮಾಂ ಗತಿಮ್ ||
"ಪರತತ್ವವನ್ನು ದ್ವೇಷಿಸುವ, ಕನಿಕರವಿಲ್ಲದ ಕೊಳಕಾದ ಅಂಥ ನೀಚ ಮನುಜರನ್ನು ನಾನು ನಿರಂತರವಾಗಿ ಬಾಳ ಬವಣೆಗಳಲ್ಲಿ, ಕೆಡುನಡೆಯ ಬಸಿರುಗಳಲ್ಲಿ ಕೆಡುವುತ್ತೇನೆ. ಕೆಡುನಡೆಯ ಬಸಿರಿನಲ್ಲಿ ಮರಳಿ ಮರಳಿ ಹುಟ್ಟಿಬಂದ ಆ ತಿಳಿಗೇಡಿಗಳು ಕೊನೆಗೂ ನನ್ನನ್ನು ಸೇರದೆಯೆ, ಅಲ್ಲಿಂದ ಮತ್ತೆ ಅಧೋಗತಿಯನ್ನು ಪಡೆಯುತ್ತಾರೆ".ಇದು ನಿಗ್ರಹಃ ನಾಮದ ತಾತ್ಪರ್ಯ.
೭೬೭) ವ್ಯಗ್ರಃ
ದುಷ್ಟರ ದುಷ್ಟತನ ಅತಿರೇಕವನ್ನು ಕಂಡಾಗ ಸಿಟ್ಟಿಗೇಳುವ ಭಗವಂತ ವ್ಯಗ್ರಃ. ಇನ್ನೊಂದು ಅರ್ಥದಲ್ಲಿ ಅವನು ವಿಗತ+ಅಗ್ರಃ, ವ್ಯಗ್ರಃ ಎಂದರೆ ಕೊನೆ ಇಲ್ಲದವನು. ಎಲ್ಲವುದರ ಕೊನೆ ಅವನೇ (last destination).
೭೬೮) ನೈಕಶೃಂಗಃ
ಅನೇಕ ಕೋಡುಗಳುಳ್ಳವನು! ಶೃಂಗ(ಪರ್ವತ)ಗಳಲ್ಲಿ ಸನ್ನಿಹಿತನಾದವನು ನೈಕಶೃಂಗಃ . ವೇದದಲ್ಲಿ ಭಗವಂತನನ್ನು ನಾಲ್ಕು ಕೋಡಿನ ಎತ್ತು ಎಂದು ಕರೆದಿದ್ದಾರೆ. ಇಲ್ಲಿ ಕೋಡು ಎಂದರೆ ಗುರುತಿಸುವ ಸಾಧನ. ಭಗವಂತ ನಾಲ್ಕು ಬಗೆಯ ಶಬ್ಧಗಳಿಂದ ವಾಚ್ಯನಾದವ. (೧) ನಾಮಪದ (೨) ಕ್ರಿಯಾಪದ (೩) ಉಪಸರ್ಗಗಳು (೪) ಅವ್ಯಯಗಳು. ಈ ನಾಲ್ಕು ಸೇರಿ ಆಗಿರುವ ನಾಲ್ಕು ವೇದಗಳು. ಈ ನಾಲ್ಕು ವೇದಗಳಿಂದ ವಾಚ್ಯನಾದ ಭಗವಂತ ನೈಕಶೃಂಗಃ.
೭೬೯) ಗದಾಗ್ರಜಃ
ಗದಾ ಅನ್ನುವವನು ರೋಹಿಣಿಯ ಮಗನಲ್ಲಿ ಒಬ್ಬ. ಆತ ಕೃಷ್ಣನನ್ನು ನೆರಳಂತೆ ಅನುಸರಿಸಿದವನು. ಈ ಕಾರಣಕ್ಕಾಗಿ ಭಗವಂತನನ್ನು ಗದನ ಅಣ್ಣ ಎಂದು ಕರೆಯುತ್ತಾರೆ. ಆದರೆ ಇದು ಕೇವಲ ಕೃಷ್ಣಾವತಾರಕ್ಕೆ ಸಂಬಂಧಪಟ್ಟದ್ದು. ಗದಾ ಎನ್ನುವುದಕ್ಕೆ ಇನ್ನೂ ಅನೇಕ ಅರ್ಥಗಳಿವೆ. ಸ್ಪಷ್ಟವಾದ ಮಾತುಗಾರಿಕೆಗೆ ಗದಾ ಎನ್ನುತ್ತಾರೆ. ಗದ್ಯರೂಪದ ಸಮಸ್ತ ವೇದ ಮಂತ್ರಗಳಿಂದ ವಾಚ್ಯನಾಗಿ, ಯಜುರ್ವೇದದ ಮಂತ್ರಗಳಿಂದ ಅಗ್ನಿರೂಪದಲ್ಲಿ ಅಭಿವ್ಯಕ್ತನಾಗುವ ಭಗವಂತ ಗದಾಗ್ರಜಃ. ಗದೆಯ ತುದಿಯಿಂದ ಅರಿಗಳನ್ನು ತರಿದ ಭಗವಂತ ಗದಾಗ್ರಜಃ.
ಮುಂದುವರೆಯುವುದು...✍️💐
No comments:
Post a Comment