Tuesday, June 6, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -83


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸಮಾವರ್ತೋsನಿವೃತ್ತಾತ್ಮಾ ದುರ್ಜಯೋ ದುರತಿಕ್ರಮಃ |
ದುರ್ಲಭೋ ದುರ್ಗಮೋ ದುರ್ಗೋ ದುರಾವಾಸೋ ದುರಾರಿಹಾ || 83 ||

೭೭೮) ಸಮಾವರ್ತಃ

ಸಮಾವರ್ತಃ ಎಂದರೆ ಸಂಸಾರ ಚಕ್ರ ತಿರುಗಿಸುವವನು. ಈ ಜಗತ್ತಿನ ಕೇಂದ್ರ ಬಿಂದು ಧ್ರುವಮಂಡಲದ ಸಮೀಪವಿದೆ. ಇಲ್ಲಿ 'ಶಿಂಶುಮಾರ' ರೂಪದಲ್ಲಿ ನಿಂತು, ನಿಯಮಿತವಾಗಿ, ಗಣಿತಬದ್ಧವಾಗಿ ಪ್ರಪಂಚವನ್ನು, ಗ್ರಹ-ಗೋಲವನ್ನು ತಿರುಗಿಸುತ್ತಿರುವ ಚಕ್ರಧಾರಿ ಭಗವಂತ ಸಮಾವರ್ತಃ. ಭಗವಂತ ಕೇಂದ್ರಬಿಂದುವಿನಲ್ಲಿ ನಿಂತು ಪ್ರಪಂಚವನ್ನು ತಿರುಗಿಸುವುದಲ್ಲದೆ, ತಾನೂ ಕೂಡಾ ಪ್ರತಿಯೊಂದು ವಸ್ತುವಿನಲ್ಲಿ ನೆಲಸಿ ತಿರುಗುತ್ತಿದ್ದಾನೆ.

೭೭೯) ಅನಿವೃತ್ತಾತ್ಮಾ(ನಿವೃತ್ತಾತ್ಮಾ)

ನಿರಂತರವಾಗಿ ಈ ಸಂಸಾರ ಚಕ್ರವನ್ನು ತಿರುಗಿಸುತ್ತಿರುವ ಭಗವಂತ ಯಾವುದೇ ರೀತಿಯ ಮೋಹ ಇಲ್ಲದ ನಿವೃತ್ತಾತ್ಮಾ. ಆದರೆ ಮೋಹವಿಲ್ಲದೆ ಎಲ್ಲವನ್ನು ನಿಯಮಿತವಾಗಿ ಮಾಡುವ ನಿವೃತ್ತಾತ್ಮಾ.

೭೮೦) ದುರ್ಜಯಃ

ಜಯ ಎಂದರೆ ಒಂದು ಅರ್ಥದಲ್ಲಿ ಇನ್ನೊಬ್ಬರನ್ನು ಸೋಲಿಸುವುದು, ಇನ್ನೊಂದು ಅರ್ಥದಲ್ಲಿ ವರ್ತನೆಯಲ್ಲಿ ಎತ್ತರದಲ್ಲಿರುವುದು. ಒಂದು ಪಡೆಯುವುದು, ಇನ್ನೊಂದು ಇರುವುದು. ಭಗವಂತ ಎಲ್ಲರಿಂದ ಎತ್ತರದಲ್ಲಿರುವವ. ಆತನನ್ನು ಮೀರಿ ಮೇಲಕ್ಕೆ ಹೋಗುವುದು ಅಸಾಧ್ಯ.

೭೮೧) ದುರತಿಕ್ರಮಃ

ಇಡೀ ಜಗತ್ತು ಭಗವಂತನ ಅಂಕೆಯಲ್ಲಿದೆ. ಅವನ ಅಣತಿಯನ್ನು ಮೀರಿ ಯಾರೂ ಮೇಲಕ್ಕೆ ಹೋಗಲಾರರು. ಅವನನ್ನು ಮೀರುವ ಒಂದು ವಸ್ತು ಈ ಜಗತ್ತಿನಲ್ಲಿಲ್ಲ.

೭೮೨) ದುರ್ಲಭಃ

ಭಗವಂತ ಎಲ್ಲಾ ಕಡೆ ಇದ್ದರೂ ಕೂಡಾ ಆತನನ್ನು ಸುಲಭವಾಗಿ ಪಡೆಯಲು ಸಾಧ್ಯವಿಲ್ಲ. ಆತ ದುರ್ಲಭಃ.

೭೮೩) ದುರ್ಗಮಃ

ಭಗವಂತನನ್ನು ಸುಲಭವಾಗಿ ತಿಳಿಯುವುದು ಕಷ್ಟ. ಆತ ನಮ್ಮ ಇಂದ್ರಿಯಗಳಿಗೆ ಎಟುಕಲಾರ ಆತ ದುರ್ಗಮಃ. ಆತನನ್ನು ತಿಳಿಯಬೇಕಾದರೆ ನಾವು ನಮ್ಮ ಹೊರಪ್ರಪಂಚವನ್ನು ಬಿಟ್ಟು ಒಳಪ್ರಪಂಚದಿಂದ ಸಾಧನೆ ಮಾಡಬೇಕು.

೭೮೪) ದುರ್ಗಃ

ಭಗವಂತ   ಅಜ್ಞಾನಿಗಳಿಗೆ ಎಂದೂ ದಕ್ಕುವುದಿಲ್ಲ. ಆತ ಅಜ್ಞಾನಿಗಳು ಲಗ್ಗೆ ಹೊಡೆಯಲಾಗದ ಕೋಟೆ.

೭೮೫) ದುರಾವಾಸಃ

ಸುಲಭವಾಗಿ ಧ್ಯಾನಕ್ಕೆ ಸಿಗದ ಭಗವಂತ ದುರಾವಾಸಃ. ಮಹಾನ್ ಸಂತರಿಗೂ ಕೂಡಾ ಭಗವಂತ ಕಾಣಿಸುವುದು ಕೇವಲ ಕೆಲವು ಕ್ಷಣಗಳು ಮಾತ್ರ .'ಅ'ಕಾರವನ್ನು ಉಚ್ಛಾರ ಮಾಡಲು ಬೇಕಾಗುವ ಸಮಯದ ನಾಲ್ಕನೇ ಒಂದು ಭಾಗದಷ್ಟು ಸಮಯ ಭಗವಂತನ ದರ್ಶನವಾದರೆ ಅದೇ ಮಹಾ ಪುಣ್ಯ.

೭೮೬) ದುರಾರಿಹಾ

ಕೆಟ್ಟ ದಾರಿ ಹಿಡಿದ ದುಷ್ಟರನ್ನು ಕೆಡಹುವ ಭಗವಂತ ದುರಾರಿಹಾ. ನಮ್ಮೊಳಗಿದ್ದು ನಮ್ಮ ಸುತ್ತಮುತ್ತಿಗೆ ಹಾಕುವ ಕೆಟ್ಟ ಶಕ್ತಿಗಳಾದ ಕಾಮ-ಕ್ರೋಧ, ಅಜ್ಞಾನ-ಅಸೂಯೆ-ಅಹಂಕಾರಗಳಿಂದ ನಮ್ಮನ್ನು ಬಿಡಿಸಬಲ್ಲ ಭಗವಂತ ದುರಾರಿಹಾ.

ಮುಂದುವರೆಯುವುದು...✍️💐

No comments:

Post a Comment