ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಕುಮುದಃ ಕುಂದರಃ ಕುಂದಃ ಪರ್ಜನ್ಯಃ ಪಾವನೋsನಿಲಃ |
ಅಮೃತಾಶೋSಮೃತವಪುಃ|
ಸರ್ವಜ್ಞಃ ಸರ್ವತೋಮುಖಃ || 87 ||
೮೧೨) ಕುಮುದಃ
ಕು+ಮುದ; ಇಡೀ ಜಗತ್ತಿಗೆ ಆನಂದವನ್ನು ಕೊಡತಕ್ಕಂತಹ ಶಕ್ತಿ. 'ಕು' ಎಂದರೆ ಭೂಮಿ. ಭೂಮಿಗೆ ಮುದವನ್ನಿತ್ತವನು ಕುಮುದಃ. 'ಕು' ಎಂದರೆ 'ಕುಸ್ಸಿತ', ನಮ್ಮನ್ನು ಕುಸ್ಸಿತವಾದ, ಕ್ಷುದ್ರವಾದ, ಆನಂದದ ಬೆನ್ನಹಿಂದೆ ಹೋಗುವಂತೆ ಮಾಡುವವನೂ ಅವನೇ! ಈ ಹಿಂದೆ ಹೇಳಿದಂತೆ ಇದು ಅವನ ಶಿಕ್ಷಣ ಪದ್ಧತಿ.
೮೧೩) ಕುಂದರಃ
'ಕುಂದ' ಎನ್ನುವುದು ಒಂದು ಹೂವಿನ ಹೆಸರು. [Jasmine flower]. ಭಗವಂತನಿಗೆ 'ಕುಂದ' ಪುಷ್ಪ ತುಂಬಾ ಇಷ್ಟ. ಭಗವಂತನ ಮಂದಹಾಸ ಬೀರುವ ತುಟಿಗಳು 'ಕುಂದ' ಪುಷ್ಪದಂತೆ ಎಂದು ಭಾಗವತದಲ್ಲಿ ಈ ರೀತಿ ವರ್ಣನೆ ಮಾಡಿದ್ದಾರೆ:
ತೇ ವೈ ಅಮೂಸ್ಯ ವದನೈಸಿತ ಪದ್ಮ ಕೋಶಂ
ಉದ್ವಿಕ್ಷ್ಯ ಸುಂದರತರಧರ ಕುಂದಹಾಸಂ
ಅಂದರೆ " ಭಗವಂತನ ಸುಂದರ ಮುಖ ತಾವರೆಯಂತೆ, ಆತನ ಮುಗುಳ್ನಗು ಅರಳುತ್ತಿರುವ ಕುಂದ ಪುಷ್ಪದಂತೆ". ಹೀಗೆ ಸದಾ ಮಂದಹಾಸದಿಂದಿರುವ ಆನಂದಮೂರ್ತಿ ಭಗವಂತ ಕುಂದರಃ.
ಕುಂ-ದದಾತೀತಿ ಕುಂದರಃ, ಇಲ್ಲಿ ಕುಂ ಅಂದರೆ ಭೂಮಿ, ನಮ್ಮ ವಾಸಕ್ಕೊಸ್ಕರ ಭೂಮಿಯನ್ನು ಕೊಟ್ಟು ಅದರಲ್ಲಿ ನೆಲೆಸಿ ಆನಂದವನ್ನು ಕೊಡುವ ಭಗವಂತ ಕುಂದರಃ.
೮೧೪) ಕುಂದಃ
ಕುಂ-ದ್ಯತೀತಿ ಕುಂದಃ; ಕುಸ್ಸಿತವಾದ ಕೆಟ್ಟ ಆಲೋಚನೆಯನ್ನು ಹೊಂದಿದ ದುಷ್ಟರನ್ನು ನಿಗ್ರಹಿಸುವ(ದ್ಯತಿ) ಭಗವಂತ ಕುಂದಃ. ಅಂತಹ ಜನರಿಗೆ ನಿಲ್ಲಲು ನೆಲೆ ಕೂಡಾ ಇರದು.
೮೧೯) ಪರ್ಜನ್ಯಃ
ಪರ್ಜನ್ಯ ಎಂದರೆ ಪ್ರಸಿದ್ಧವಾದ ಅರ್ಥ ಮೋಡ. ಮಳೆ ಬಾರದಿದ್ದಾಗ ಮಳೆಗಾಗಿ ಪರ್ಜನ್ಯ ಮಂತ್ರ ಜಪ ಮಾಡುತ್ತಾರೆ. ಪರ+ಜನ್ಯ-ಪರ್ಜನ್ಯ, ಯಾವುದರಿಂದ ನಾವು ಬದುಕುತ್ತೆವೋ, ಯಾವುದು ನಮಗೆ ಆಹಾರವೋ ಅದು 'ಪರ'. ಸಸ್ಯಗಳು, ಧಾನ್ಯಗಳು, ಹೂ-ಹಣ್ಣು-ತರಕಾರಿಗಳು 'ಪರ'. ಇಂತಹ ನಮ್ಮನ್ನು ಬದುಕಿಸುವ ಗಿಡಗಳು ಯಾರಿಂದ ಜನ್ಯವೋ ಅವನು ಪರ್ಜನ್ಯಃ. ಈ ಗಿಡಗಳು ಹುಟ್ಟಿ ಬೆಳೆದು ಫಲವನ್ನು ಕೊಡಬೇಕಾದರೆ ಮಳೆ ಬೇಕು. ಇಳೆಗೆ ಮಳೆಯನ್ನು ಕೊಟ್ಟು ಸಲಹುವ ಭಗವಂತ ಪರ್ಜನ್ಯಃ.
೮೧೬) ಪಾವನಃ
ನಮ್ಮೊಳಗಿದ್ದು ನಮ್ಮನ್ನು ಪವಿತ್ರಗೊಳಿಸುವ ಭಗವಂತ ಪಾವನಃ. ಆತ ನಮ್ಮೊಳಗಿದ್ದರೆ ಈ ಶರೀರ 'ಶಿವ', ಇಲ್ಲದಿದ್ದರೆ 'ಶವ'.
೮೧೭) ಅನಿಲಃ.
ನೆಲೆ ಇರದವನು. ಸರ್ವಾಂತರ್ಯಾಮಿಯಾದ ಭಗವಂತನಿಗೆ ಇಂತಹದ್ದೇ ಎನ್ನುವ ನೆಲೆಯೊಂದಿಲ್ಲ. ವಾಯು ಅಥವಾ ಪ್ರಾಣತತ್ವವನ್ನು ಭಜಿಸುವ ಭಕ್ತರು ಆತನಿಗೆ ಅತೀ ಪ್ರಿಯ. 'ಪ್ರಾಣ' ಆತನ ಆತ್ಮೀಯ. ಪ್ರಾಣತತ್ವದಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಅನಿಲಃ.
೮೧೮) ಅಮೃತಾಂಶಃ
ಇಲ್ಲಿ ಅಮೃತ ಎಂದರೆ ನಿತ್ಯಾನಂದ. ಮೋಕ್ಷದಲ್ಲಿ ನಮಗೆ ಎಂದೂ ಕೊನೆಯಿಲ್ಲದ ನಿರಂತರ ಆನಂದವನ್ನು ಉಣ್ಣಿಸುವ, ನಾಶವಿಲ್ಲದ ಆನಂದ ಸ್ವರೂಪಿ ಭಗವಂತ ಅಮೃತಾಶಃ. ಮೋಕ್ಷದಲ್ಲಿ ಅಮೃತವಾಗಿರುವ ಜೀವಜಾತಗಳು ಯಾರ ಅಂಶವೋ ಅವನು ಅಮೃತಾಂಶ.
೮೧೯) ಅಮೃತವಪುಃ
ಎಂದೂ ನಾಶವಿಲ್ಲದ, ಜ್ಞಾನಾನಂದಮಯವಾದ, ಹುಟ್ಟು-ಸಾವಿಗೆ ಬದ್ಧವಲ್ಲದ ಶರೀರವುಳ್ಳ ಭಗವಂತ ಅಮೃತವಪುಃ. ಭಗವಂತನ ದೇಹ ಪಾಂಚಭೌತಿಕವಾದದ್ದಲ್ಲ. ಅವತಾರ ರೂಪದಲ್ಲಿ ಆತ ನಮಗೆ ಕಾಣಿಸುವುದು ಸಾಮಾನ್ಯ ಮಾನವ ಶರೀರ ರೂಪದಲ್ಲಿ. ಆದರೆ ಭಗವಂತನಿಗೂ ಕೂಡಾ ನಮ್ಮಂತೆ ಪಾಂಚಭೌತಿಕಶರೀರವಿದೆ, ಅದು ಒಂದು ದಿನ ಬಿದ್ದುಹೋಗುತ್ತದೆ ಎಂದು ತಿಳಿಯುವುದು ತಪ್ಪು. ಇದನ್ನು ಶ್ರೀಕೃಷ್ಣ ಗೀತೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ:
ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್ ।
ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್ ||
ಅಂದರೆ "ಮನುಷ್ಯರಂತೆ ಕಾಣಿಸಿಕೊಂಡು ಮೈದಾಳಿದ ನನ್ನನ್ನು ಮನುಷ್ಯನೆಂದು ಬಗೆದು ಕಡೆಗಣಿಸುತ್ತಾರೆ - ಎಂದೆಂದೂ ಎಲ್ಲಡೆಯು ಇರುವ ಹಿರಿದಕ್ಕು ಹಿರಿದಾದ ನನ್ನ ಹಿರಿಮೆಯನ್ನರಿಯದ ತಿಳಿಗೇಡಿಗಳು" ಹೀಗೆ ಹುಟ್ಟು-ಸಾವಿಗೆ ಬದ್ಧವಲ್ಲದ, ಅಳಿವಿಲ್ಲದ ಶರೀರವುಳ್ಳ ಭಗವಂತ ಅಮೃತವಪುಃ.
೮೨೦) ಸರ್ವಜ್ಞಃ
ನಮ್ಮ ಆತ್ಮ 'ಜ್ಞಾನಾನಂದ' ಸ್ವರೂಪ. ಆದರೆ ಆ ಜ್ಞಾನ ಹಾಗೂ ಆನಂದದ ಅನುಭವ ಆಗದಂತೆ ಮುಚ್ಚಿಟ್ಟಿರುವುದು ಈ ಶರೀರ. ಲಿಂಗಶರೀರ, ಸೂಕ್ಷ್ಮಶರೀರ ಹಾಗು ಸ್ಥೂಲಶರೀರ. ಈ ಮೂರು ಮುಚ್ಚಳಗಳಿಂದ ಮುಚ್ಚಿರುವ ನಮ್ಮ ಆತ್ಮಕ್ಕೆ ಅಭಿವ್ಯಕ್ತವಿಲ್ಲ. ಆದರೆ ಭಗವಂತ ಜ್ಞಾನಾನಂದ ಸ್ವರೂಪ. ಆತನ ಜ್ಞಾನಕ್ಕೆ ಯಾವುದೇ ರೀತಿಯ ಮುಚ್ಚಳವಿಲ್ಲ. ಅವನಿಗೆ ತಿಳಿಯದ ವಿಷಯವೊಂದಿಲ್ಲ. ಆತ ಸರ್ವಜ್ಞಃ.
೮೨೧) ಸರ್ವತೋಮುಖಃ
ಈ ನಾಮವನ್ನು ಕೇಳಿದಾಗ ನಮಗೆ ಪುರುಷಸೂಕ್ತದ ಈ ಸಾಲುಗಳು ನೆನಪಿಗೆ ಬರುತ್ತದೆ.
‘ಸಹಸ್ರ ಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್' ಎಂದು ಭಗವಂತನನ್ನು ಪುರುಷಸೂಕ್ತದಲ್ಲಿ ವರ್ಣಿಸಿದ್ದಾರೆ. ಇಲ್ಲಿ ಬಹುಶಿರ ಎಂದರೆ ಸಹಸ್ರ-ಸಹಸ್ರ ಶಿರಸ್ಸನ್ನು ಹೊಂದಿರುವವನು ಎಂದರ್ಥ. ಭಗವಂತನಿಗೆ ನಮ್ಮಂತೆ ಒಂದು ಮುಖವಲ್ಲ. ಜ್ಞಾನಾನಂದ ಸ್ವರೂಪಿಯಾದ ಆತನ ಶರೀರ ಎಲ್ಲ ಕಡೆ ವ್ಯಾಪಿಸಿದೆ. ಆತ ಸರ್ವತೋಮುಖಃ.
ಮುಂದುವರೆಯುವುದು...✍️💐
No comments:
Post a Comment