Tuesday, June 6, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -86


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸುವರ್ಣಬಿಂದುರಕ್ಷೋಭ್ಯಃ ಸರ್ವವಾಗೀಶ್ವರೇಶ್ವರಃ |
ಮಹಾಹ್ರದೋ ಮಹಾಗರ್ತೋ ಮಹಾಭೂತೋ ಮಹಾನಿಧಿಃ || 86 ||

೮೦೫) ಸುವರ್ಣಬಿಂದು

ಸುವರ್ಣಬಿಂದು ಎಂದರೆ ಬಂಗಾರದ ಚುಕ್ಕೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ಸು+ವರ್ಣ; ಅಂದರೆ ವರ್ಣಗಳಲ್ಲಿ ಅತ್ಯಂತ ಶ್ರೇಷ್ಠವಾದ ವರ್ಣ. ಸುವರ್ಣಬಿಂದು ಎಂದರೆ ಓಂಕಾರದ 'ಅ', 'ಉ', 'ಮ' ಹಾಗು 'ನಾದ'ದ ನಂತರ ಬರುವ ಬಿಂದು. ಓಂಕಾರದಲ್ಲಿ ನಮ್ಮ ಕಿವಿಗೆ ಕೇಳುವ ಕೊನೆಯ ವರ್ಣ ಬಿಂದು. ಓಂಕಾರದ ಬಿಂದುವಿನಿಂದ ಪ್ರತಿಪಾಧ್ಯನಾದ ಭಗವಂತ  ಸುವರ್ಣಬಿಂದು. ಓಂಕಾರದಲ್ಲಿ 'ಅ'ಕಾರ ಕೃಷ್ಣ ರೂಪವನ್ನು, 'ಉ'ಕಾರ ರಾಮ ರೂಪವನ್ನು,'ಮ'ಕಾರ ನರಸಿಂಹ ರೂಪವನ್ನು ಪ್ರತಿಪಾದಿಸಿದರೆ, ಬಿಂದು ಭಗವಂತನ ವಿಷ್ಣು ರೂಪವನ್ನು ಪ್ರತಿಪಾದಿಸುತ್ತದೆ.  ಜಗತ್ತಿನ ಸರ್ವ ಸಾಹಿತ್ಯದಲ್ಲಿ ಶ್ರೇಷ್ಠವಾದ ದಿವ್ಯ ಅನುಭೂತಿಯನ್ನು ಹೇಳುವ ಮಹಾಭಾರತ ಹಾಗು ವೇದಗಳಿಂದ ವಾಚ್ಯನಾದ ಭಗವಂತ ಸುವರ್ಣಬಿಂದು.

೮೦೬) ಅಕ್ಷೋಭ್ಯಃ

ಭಗವಂತನನ್ನು ಕೆಂಗೆಡಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಎಲ್ಲರೂ ತಮ್ಮ ಪದವಿಯನ್ನು ಒಂದಲ್ಲ ಒಂದುದಿನ ಕಳೆದುಕೊಳ್ಳಲೇಬೇಕು, ಆದರೆ ಭಗವಂತನ ಪದವಿ ಎಂದು ಬದಲಾಗದು. ಇಂತಹ ಭಗವಂತ ಅಕ್ಷೋಭ್ಯಃ.

೮೦೭) ಸರ್ವವಾಗೀಶ್ವರೇಶ್ವರಃ

ಒಬ್ಬರ ಭಾವನೆಯನ್ನು ಇನ್ನೊಬ್ಬರಿಗೆ ತಿಳಿಸುವ ನಾದ ಮಾತು ಅಥವಾ 'ವಾಕ್'. ಮನುಷ್ಯ ಮಾತ್ರವಲ್ಲ, ಪ್ರಾಣಿಗಳೂ ಸಹ ನಾದದ ಮುಖೇನ ಮಾತನಾಡಿಕೊಳ್ಳುತ್ತವೆ. ಎಲ್ಲಾ ಮಾತುಗಳ ಒಡತಿ ಸರಸ್ವತಿ. ಪಾರ್ವತಿಯನ್ನೂ ಕೂಡಾ ಒಂದು ನೆಲೆಯಲ್ಲಿ ವಾಗೀಶ್ವರಿ ಎಂದು ಕರೆಯುತ್ತಾರೆ. ಏಕೆಂದರೆ ಮಾತು ಮತ್ತು ಮನಸ್ಸು ದಂಪತಿಗಳಿದ್ದಂತೆ. ಮನಸ್ಸು ಶಿವ, ಮಾತು ಪಾರ್ವತಿ. ಮನಸ್ಸು ಯೋಚಿಸಿದ್ದನ್ನು ಮಾತು ಹೇಳುತ್ತದೆ. ಆದ್ದರಿಂದ ನಮ್ಮೊಳಗಿರುವ ಶಿವಶಕ್ತಿ ಮತ್ತು ಪಾರ್ವತಿ ಶಕ್ತಿಯೇ ನಮ್ಮ ಮನನ ಮತ್ತು ಮಾತುಗಳ ಹಿಂದಿರುವ ಶಕ್ತಿ. ಇಷ್ಟೇ ಅಲ್ಲದೆ ಭಾರತಿ-ಸರಸ್ವತಿ, ಬ್ರಹ್ಮ-ವಾಯು ಇವರೆಲ್ಲರೂ ಸರ್ವವಾಗೀಶ್ವರರು. ಇವರೆಲ್ಲರ ಒಡೆಯ ಸರ್ವಶಬ್ಧ ವಾಚ್ಯನಾದ ಪರಶಕ್ತಿಯಾದ ಭಗವಂತ ಸರ್ವವಾಗೀಶ್ವರೇಶ್ವರಃ.

೮೦೮) ಮಹಾಹ್ರದಃ

'ಹ್ರದ' ಎಂದರೆ ಅತ್ಯಂತ ದೊಡ್ಡ ಸರೋಹರ, ಅಂದರೆ ಕಡಲು. ಜಗತ್ತಿನಲ್ಲಿ ಸಮುದ್ರಗಳನ್ನು ನಿರ್ಮಿಸಿ ಅದರಲ್ಲಿ ಸನ್ನಿಹಿತನಾಗಿರುವ ಭಗವಂತ ಮಹಾಹ್ರದಃ. ಪ್ರಳಯಕಾಲದಲ್ಲಿ ಪ್ರಳಯ ಸಮುದ್ರದಲ್ಲಿ ಪವಡಿಸಿರುವ ಅನಂತಶಯನ ಭಗವಂತ ಮಹಾಹ್ರದಃ.

೮೦೯) ಮಹಾಗರ್ತಃ

'ಗರ್ತ' ಎಂದರೆ ಗುಹೆ ಅಥವಾ ಕಣಿವೆ. ಜಗತ್ತಿನ ಮಹಾಗರ್ತ ನಮ್ಮ ಹೃದಯ ಗುಹೆ, ಇಂತಹ  ಮಹಾ ಕಣಿವೆಯಲ್ಲಿ ನೆಲೆಸಿರುವ ಹೃತ್ಕಮಲ ಮದ್ಯನಿವಾಸಿ ಭಗವಂತ ಮಹಾಗರ್ತಃ.

೮೧೦) ಮಹಾಭೂತಃ

ಯಾವುದು ಎಲ್ಲಾ ಕಾಲದಲ್ಲಿ ಶಾಶ್ವತವಾಗಿರುತ್ತದೋ ಅದು ಮಹಾಭೂತ. ಕಾಲಾತೀತನಾದ, ಸರ್ವೋನ್ನತನಾದ  ಭಗವಂತ ಮಹಾಭೂತಃ

೮೧೧) ಮಹಾನಿಧಿಃ

ಭಗವಂತ ನಮ್ಮ ಹೃದಯಗುಹೆಯಲ್ಲಿ ಅಡಗಿರುವ ಮಹಾನ್ ಸಂಪತ್ತು. ಆತನಿಗಿಂತ ಹಿರಿದಾದ ನಿಧಿ ಇನ್ನೊಂದಿಲ್ಲ. ಬಾಹ್ಯ ಪ್ರಪಂಚದ ಹಣದ ಆಸೆಯಿಂದ ಜೀವನವನ್ನು ವ್ಯರ್ಥ ಮಾಡಿಕೊಳ್ಳುವ ಬದಲು, ನಮ್ಮೊಳಗಿರುವ ಕೊಪ್ಪರಿಗೆ  'ಮಹಾನಿಧಿಃ' ಭಗವಂತನನ್ನು ತಿಳಿದರೆ ನಮ್ಮ ಜೀವನ ಸಾರ್ಥಕ.

ಮುಂದುವರೆಯುವುದು...✍️💐

No comments:

Post a Comment