ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ವಿಹಾಯಸಗತಿರ್ಜ್ಯೋತಿಃ ಸುರಚಿರ್ಹುತಭುಗ್ವಿಭುಃ |
ರವಿರ್ವಿರೋಚನಃ ಸೂರ್ಯಃ ಸವಿತಾ ರವಿಲೋಚನಃ || 94 ||
೮೮೦) ವಿಹಾಯಸಗತಿಃ
ವಿಹಾಯಸನ್ ಅಂದರೆ ಆಕಾಶ; ವಿಹಾಯಸಗತಿಃ ಎಂದರೆ ಆಕಾಶದಲ್ಲಿ ಚಲಿಸುವವ. ಉಪನಿಷತ್ತಿನಲ್ಲಿ ಹೇಳಿದಂತೆ ಭಗವಂತ ಸೃಷ್ಟಿಪೂರ್ವದಲ್ಲಿ ತನಗೊಬ್ಬ ಆತ್ಮೀಯ ಜೊತೆಗಾರ ಬೇಕು ಎಂದು ನಿರ್ಧರಿಸಿದನಂತೆ. ಹಾಗೆ ನಿರ್ಧರಿಸಿ ಪ್ರಾಣದೇವರ ಸೃಷ್ಟಿ ಮಾಡಿದನಂತೆ. ಭಗವಂತ ಸದಾ ಪ್ರಾಣದೇವರ ಜೊತೆಗಾರ. ಪ್ರಾಣನಿದ್ದಲ್ಲಿ ಭಗವಂತ, ಭಗವಂತನಿದ್ದಲ್ಲಿ ಪ್ರಾಣ. ಆದ್ದರಿಂದ ವಾಯುದೇವರು ಭಗವಂತನ ಜೊತೆಗಿರುವ ಜೊತೆಗಾರ. ವಾಯು ಅಂದರೆ ಸದಾ ಆಕಾಶದಲ್ಲಿ ಸಂಚರಿಸುವ ಗಾಳಿ. ಇಂತಹ ಪ್ರಾಣಶಕ್ತಿಯೊಳಗಿದ್ದು, ಆಕಾಶದಲ್ಲಿ ಚಲಿಸುವ ಭಗವಂತ ವಿಹಾಯಸಗತಿಃ.
ಇನ್ನು ಈ ನಾಮವನ್ನು ಒಡೆದು ನೋಡಿದಾಗ ವಿಹಾ+ಯಸ+ಗತಿಃ; 'ವಿಹಾ' ಎಂದರೆ ಸರ್ವ ಗುಣಗಳಿಂದ ಪೂರ್ಣವಾದ, ಸರ್ವ ದೋಷಗಳಿಂದ ದೂರವಾದ ತತ್ವ. 'ಯಸ' ಎಂದರೆ ಜ್ಞಾನಾನಂದ ಸ್ವರೂಪ. 'ಗತಿಃ' ಎಂದರೆ 'ಗಚ್ಛತಿ', ಭಗವಂತ ಸರ್ವಾಂತರ್ಯಾಮಿ, ಎಲ್ಲಾ ಕಡೆಯಲ್ಲೂ ಇರುವ, ಇಡೀ ವಿಶ್ವಕ್ಕೆ ಆಶ್ರಯ ಕೊಡುವ ನಿಲುದಾಣ.
೮೮೧) ಜ್ಯೋತಿಃ
ಸೂರ್ಯನಿಗಿಂತಲೂ ಪ್ರಖರವಾದ ಬೆಳಕುಳ್ಳವನು. ಆತ ಸೂರ್ಯನಿಗಿಂತಲೂ ಪ್ರಖರ ಆದರೆ ಚಂದ್ರನಿಗಿಂತ ತಂಪು. ಗೂಬೆ ಹೇಗೆ ಸೂರ್ಯನನ್ನು ನೋಡಲಾರದೋ ಹಾಗೆ ಇಂತಹ ಬೆಳಕನ್ನು ನಾವು ನಮ್ಮ ಹೊರಗಣ್ಣಿನಿಂದ ಎಂದೂ ನೋಡಲಾರೆವು. ಆತನನ್ನು ನಮ್ಮ ಸ್ವರೂಪದ ಕಣ್ಣಿನಿಂದ ಮಾತ್ರ ಕಾಣಲು ಸಾಧ್ಯ.
ಜ್ಯಾ+ಊತಿ-ಜ್ಯೋತಿ, ಇಲ್ಲಿ 'ಜ್ಯಾ' ಎಂದರೆ ಭೂಮಿ.'ಊತಿ' ಎಂದರೆ ರಕ್ಷಣೆ.ಈ ಭೂಮಿ, ಆಕಾಶದಲ್ಲಿ ನಿರಾಲಂಭವಾಗಿ ನಿಲ್ಲುವಂತೆ ಮಾಡಿದ ಸಂಕರ್ಷಣ ಶಕ್ತಿಯ ಅಂತರ್ಯಾಮಿ ಭಗವಂತ ಜ್ಯೋತಿಃ
೮೮೨) ಸುರುಚಿಃ
ಇಲ್ಲಿ ರುಚಿ ಎಂದರೆ 'ಬೆಳಕು'. ಸುರುಚಿ ಎಂದರೆ ಸುಖಕರವಾದ ಬೆಳಕು. ನಮಗೆ ಆನಂದದ ಬೆಳಕನ್ನು ಕೊಟ್ಟು ಎತ್ತರಕ್ಕೆ ಕೊಂಡೊಯ್ಯುವ ಭಗವಂತ ಸುರುಚಿಃ.
೮೮೩) ಹುತಭುಗ್ವಿಭುಃ
ಬೆಂಕಿಗೆ ಹಾಕಿದ ಆಹುತಿಯನ್ನು ಸ್ವೀಕರಿಸುವ ಅಗ್ನಿಯ ಒಡೆಯ.
೮೮೪) ರವಿಃ
ಸೂರ್ಯನೊಳಗಿದ್ದು ರವಿ ಎನಿಸಿಕೊಂಡವನು. ರವ+ಇ-ರವಿ. ಮಂತ್ರದ ನಾದದಿಂದ ಸೂರ್ಯ ಮಂಡಲದಲ್ಲಿರುವ ರವಿ ನಾಮಕ ಭಗವಂತನ ಉಪಾಸನೆಯಲ್ಲಿ ಭಗವಂತನ ಈ ನಾಮ ಬಳಕೆಯಾಗಿದೆ. ಹಿಂದೆ ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ಎದ್ದು ಸ್ನಾನ ಮಾಡಿ ಮುಖ್ಯವಾಗಿ ಗಾಯತ್ರಿ ಜಪ ಮಾಡುತ್ತಿದ್ದರು. ಅದೇ ರೀತಿ ಸಂಜೆ ಸೂರ್ಯಾಸ್ತಕ್ಕೆ ಮೊದಲು ಕೂಡಾ ಧ್ಯಾನದಲ್ಲಿ ತೊಡಗುತ್ತಿದ್ದರು. ಕಾರಣವೆಂದರೆ, ಮುಂಜಾವಿನ ಹಾಗೂ ಸಂಜೆಯ ಕೆಂಪಾದ ಸೂರ್ಯ ಕಿರಣದಲ್ಲಿ ನಮ್ಮ ಬುದ್ಧಿ ಶಕ್ತಿಯನ್ನು ಕುಂದಿಸುವ ಶಕ್ತಿ ಇರುತ್ತದೆ. ಅಂತಹ ಕೆಟ್ಟ ಶಕ್ತಿಯ ನಿರೋಧಕ್ಕಾಗಿ ಈ ರೀತಿ ಧ್ಯಾನ ಮಾಡುತ್ತಿದ್ದರು. ಸೂರ್ಯನ ಮುಂಜಾವಿನ ಹಾಗೂ ಸಂಜೆಯ ಕಿರಣ, ಗ್ರಹಣ ಕಾಲದ ಕಿರಣ ಮತ್ತು ನೀರಿನಿಂದ ಪ್ರತಿಫಲಿಸಿ ಕಾಣುವ ಸೂರ್ಯ ಕಿರಣ ವಿಷಕಾರಿ. ಮುಂಜಾವಿನ ಮತ್ತು ಸಂಜೆಯ ಕಿರಣ ಮಾನಸಿಕವಾಗಿ ಪರಿಣಾಮ ಬೀರಿದರೆ, ಗ್ರಹಣದ ಕಿರಣ ನಮಗೆ ದೈಹಿಕವಾಗಿ ಕೆಟ್ಟದ್ದು. ಆದರೆ ಗ್ರಹಣ ಕಾಲದಲ್ಲಿ ನಮ್ಮ ಮೆದುಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿ ಹಿಂದೆ ಗ್ರಹಣ ಕಾಲದಲ್ಲಿ ಉಪವಾಸವಿದ್ದು ಪಾರಾಯಣ ಮಾಡುತ್ತಿದ್ದರು. ಗ್ರಹಣ ಕಾಲದಲ್ಲಿ ಒಂದು ಬಾರಿ ಮಾಡುವ ಪಾರಾಯಣ ಬೇರೆ ಸಮಯದ ನೂರಕ್ಕೂ ಹೆಚ್ಚು ಪಾರಾಯಣಕ್ಕೆ ಸಮನಾಗಿರುತ್ತದೆ. ಹೊಟ್ಟೆ ಖಾಲಿಯಿದ್ದು ಪಾರಾಯಣ ಮಾಡಿದರೆ ಇದರ ಪರಿಣಾಮ ಇನ್ನೂ ಹೆಚ್ಚು. ಅದಕ್ಕಾಗಿ ಉಪವಾಸವಿದ್ದು ಪಾರಾಯಣ ಮಾಡುತ್ತಿದ್ದರು. ಹೀಗೆ ಸೂರ್ಯ ಮಂಡಲದಲ್ಲಿ ಅಡಗಿರುವ ಅಪೂರ್ವ ಶಕ್ತಿ ಭಗವಂತ ರವಿಃ.
೮೮೫) ವಿರೋಚನಃ
ರೋಚನ ಎಂದರೆ ಬೆಳಗಿಸುವ ವಸ್ತು. ವಿಶಿಷ್ಟವಾದ ಬೆಳಕನ್ನು ಜಗತ್ತಿಗೆ ನೀಡುವ ಭಗವಂತ ವಿರೋಚನಃ. ನಮ್ಮ ಹೃದಯ ಗುಹೆಯಲ್ಲಿ ಕುಳಿತು ನಮಗೆ ಜ್ಞಾನದ ಬೆಳಕನ್ನು ನೀಡುವ ಜ್ಯೋತಿರ್ಮಯರೂಪಿ ಭಗವಂತ ವಿರೋಚನಃ.
೮೮೬) ಸೂರ್ಯಃ
ಸೂರಿಭಿಃ ಈಯತೇ ಇತಿ ಸೂರ್ಯಃ; ಅಂದರೆ ಸೂರಿಗಳಿಗೆ(ಜ್ಞಾನಿಗಳಿಗೆ) ಗೋಚರವಾಗುವ, ಸೂರ್ಯನೊಳಗಿದ್ದು ಸೂರ್ಯನೆನಿಸಿಕೊಂಡ ಭಗವಂತ ಸೂರ್ಯಃ
೮೮೭) ಸವಿತಾ
ಸೂತೇ ಇತಿ ಸವಿತಾ; ಇಡೀ ಜಗತ್ತನ್ನು ತನ್ನ ಒಡಲಲ್ಲಿ ಹೊತ್ತು, ಸೃಷ್ಟಿ ಕಾಲದಲ್ಲಿ ತನ್ನ ನಾಭಿ ಕಮಲದಿಂದ ಹೆತ್ತ ಜಗತ್ತಿನ ತಂದೆ ಸವಿತಾ; ಗಾಯತ್ರಿ ಪ್ರತಿಪಾಧ್ಯನಾದ ಸೂರ್ಯನಲ್ಲಿ ಸನ್ನಿಹಿತನಾಗಿರುವ ಸವಿತಾ ನಾಮಕ ಭಗವಂತ ಸವಿತಾ.
೮೮೮) ರವಿಲೋಚನಃ
ಭಗವಂತನ ಕಿಡಿನೋಟದ ಒಂದು ಚಿಕ್ಕ ಕಿಡಿ ಆ ಸೂರ್ಯ. ಯಾರಿಂದ ಆ ಸೂರ್ಯ ಹುಟ್ಟಿ ಬಂದನೋ, ಯಾರಲ್ಲಿ ಸೇರಿ ಕಣ್ಮರೆಯಾಗುತ್ತಾನೋ ಅವನು ಹುತಭುಗ್ಭೋಕ್ತಾ.
ಮುಂದುವರೆಯುವುದು...✍️💐
No comments:
Post a Comment