ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತುವರ್ಧನಃ |
ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ || 84 ||
೭೮೭) ಶುಭಾಂಗಃ
ಭಗವಂತ ಸರ್ವಾಂಗ ಮಂಗಳಮೂರ್ತಿ. ದೋಷ ದುರ್ಗುಣದ ಸ್ಪರ್ಶ ಅವನಿಗಿಲ್ಲ. ಹೆಜ್ಜೆ-ಹೆಜ್ಜೆಗೂ ಕೆಟ್ಟ ದಾರಿ ಹಿಡಿಯುವ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕಾದರೆ ಆ ಶುಭಾಂಗಃನಲ್ಲಿ ಶರಣಾಗಬೇಕು.
೭೮೮) ಲೋಕಸಾರಂಗಃ
ಲೋಕದಲ್ಲಿ ವಸ್ತು 'ಸಾರ'ವಾಗಲು ಕಾರಣ ಭಗವಂತ. ಆತ ನಮ್ಮೊಳಗಿದ್ದರೆ ಸಾರ, ಇಲ್ಲದಿದ್ದರೆ ನಿಸ್ಸಾರ. ನಮಗೆ ಸಾರಭೂತವಾದದ್ದನ್ನು ಗ್ರಹಿಸುವ ಶಕ್ತಿಕೊಡುವ ಭಗವಂತ ಲೋಕಸಾರಂಗಃ.
೭೮೯) ಸುತಂತುಃ
ಇಡೀ ಜಗತ್ತು ಒಂದಕ್ಕೊಂದು ಹೆಣೆದುಕೊಂಡು ನಿಯತಬದ್ಧವಾಗಿ ನಿಲ್ಲುವಂತೆ 'ನಿಯತಿಯ' ಹಗ್ಗದ ಬಲೆ ನೇಯ್ದ ಭಗವಂತ ಸುತಂತುಃ. 'ತಂತು' ಎಂದರೆ ಸಂತತಿ, ಬ್ರಹ್ಮಾದಿ ದೇವತೆಗಳೆಂಬ ಶ್ರೇಷ್ಠ ಸಂತತಿಯುಳ್ಳ ಭಗವಂತ ಸುತಂತುಃ.
೭೯೦) ತಂತುವರ್ಧನಃ
ಸಂತತಿಯನ್ನು ಬೆಳೆಸುವವನು ಹಾಗು ಸಂಹರಿಸುವವನು ತಂತುವರ್ಧನಃ. ನಮ್ಮೊಳಗೆ ಸ್ನೇಹದ, ಪ್ರೀತಿಯ ಅಂಕುರವನ್ನು ಬಿತ್ತಿ ಸಂಸಾರವನ್ನು ಬೆಳೆಸುವ ಭಗವಂತ ಪ್ರಳಯಕಾಲದಲ್ಲಿ ಎಲ್ಲವನ್ನೂ ಸಂಹಾರ ಮಾಡುತ್ತಾನೆ.
೭೯೧) ಇಂದ್ರಕರ್ಮಾ
ಸಂಸ್ಕೃತದಲ್ಲಿ 'ಇಂದ್ರ' ಎಂದರೆ ಸರ್ವ ಸಮರ್ಥ ಎನ್ನುವ ಅರ್ಥವಿದೆ. ಯಾವುದೇ ಕರ್ಮವನ್ನು ಮಾಡಬೇಕಾದರೂ ಅದರ ಹಿಂದೆ ಸರ್ವ ಸಾಮರ್ಥ್ಯ ಅಗತ್ಯ. ಭಗವಂತನ ಕೈಯಿಂದ ಆಗದೆ ಇರುವ ಯಾವ ಕೆಲಸವೂ ಇಲ್ಲ, ಆತ ಸರ್ವ ಕರ್ಮಗಳನ್ನು ನಿಭಾಯಿಸಬಲ್ಲ ಸಾಮರ್ಥ್ಯವುಳ್ಳ ಇಂದ್ರಕರ್ಮಾ
೭೯೨) ಮಹಾಕರ್ಮಾ
ಈ ಜಗತ್ತಿನಲ್ಲಿ ಎಲ್ಲಾ ಶ್ರೇಷ್ಠ ಕರ್ಮ ಮಾಡುವವನು ಹಾಗೂ ಮಾಡಿಸುವವನು ಆದ ಭಗವಂತ ಮಹಾಕರ್ಮಾ.
೭೯೨) ಕೃತಕರ್ಮಾ
ಕ್ರತಕೃತ್ಯನಾದವನು ಕೃತಕರ್ಮಾ. ಭಗವಂತ ಮಾಡಬೇಕಾದ ಯಾವುದೇ ಕರ್ಮ ಬಾಕಿ ಇಲ್ಲ. ಆದರೂ ಸಹ ಆತ ಈ ಪ್ರಪಂಚವನ್ನು ನಡೆಸುವ ಮಹಾ ಕರ್ಮವನ್ನು ನಿರಂತರ ಮಾಡುತ್ತಿರುತ್ತಾನೆ.
೭೯೩) ಕೃತಾಗಮಃ
'ಆಗಮ' ಎಂದರೆ 'ಶಾಸ್ತ್ರ' ಎನ್ನುವ ಅರ್ಥವನ್ನು ಕೊಡುತ್ತದೆ. ಸಮಸ್ತ ಶಾಸ್ತ್ರಗಳ ಸೃಷ್ಟಿಕರ್ತ ಭಗವಂತ ಕೃತಾಗಮಃ. ನಮ್ಮ ಜೀವನದ ನೆಡೆಗೆ ಬೇಕಾದ ನೀತಿ ಸಂಹಿತೆ ಕೊಟ್ಟವನು ಭಗವಂತ. ಇಷ್ಟೇ ಅಲ್ಲದೆ 'ಆಗಮ' ಎನ್ನುವುದಕ್ಕೆ ಫಲಿಸುವುದು ಅಥವಾ ಕೈಗೂಡುವುದು ಎನ್ನುವ ಅರ್ಥ ಕೂಡಾ ಇದೆ. ಭಗವಂತ ಮಾಡುವ ಸರ್ವ ಕರ್ಮವೂ ಕೂಡಾ ಫಲವನ್ನೀಯುತ್ತದೆ, ಆದ್ದರಿಂದ ಆತ ಕೃತಾಗಮಃ.
ಮುಂದುವರೆಯುವುದು...✍️💐
No comments:
Post a Comment